ಸೇವೆ, ಸಂಕಲ್ಪ, ಸಮರ್ಪಣೆ: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪ್ರಧಾನಿ ಮೋದಿ ಪ್ರತಿಪಾದನೆ

Karyakarini
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪ್ರಧಾನಿ ಮೋದಿಗೆ ಸನ್ಮಾನ
Published on

ನವದೆಹಲಿ: ಸೇವೆ, ಸಂಕಲ್ಪ, ಸಮರ್ಪಣೆಯೇ ಬಿಜೆಪಿಯ ಸಂಘಟನಾ ಮೌಲ್ಯಗಳಾಗಿವೆ. ಅವುಗಳೇ ಪಕ್ಷ ಚಾಲನಾ ಶಕ್ತಿಗಳು. ಪಕ್ಷವು ಯಾವುದೋ ಒಂದು ಕುಟುಂಬ ಕೇಂದ್ರಿತವಾದುದಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅವರು ಭಾನುವಾರ ದೆಹಲಿಯಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಸಮಾರೋಪ ಭಾಷಣ ಮಾಡಿದರು.

ಬಿಜೆಪಿ ಕಾರ್ಯಕರ್ತರು/ಸದಸ್ಯರು ಪಕ್ಷ ಮತ್ತು ಜನಸಾಮಾನ್ಯರ ನಡುವಿನ ವಿಶ್ವಾಸದ ಸೇತುವಾಗಿ ಕೆಲಸ ಮಾಡಬೇಕು. ಪಕ್ಷ ಯಾವತ್ತಿಗೂ ಜನರೊಂದಿಗೆ ಬೆರೆತುಕೊಂಡೇ ಕೆಲಸ ಮಾಡುತ್ತ ಬಂದಿದೆ. ಪಕ್ಷದ ಇತಿಹಾಸವೇ ಇದಕ್ಕೆ ಸಾಕ್ಷಿ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಗೆಲ್ಲುವುದಕ್ಕೆ ಈ ವಿಶ್ವಾಸವೇ ಕೆಲಸ ಮಾಡಲಿದೆ ಎಂದು ಮೋದಿ ಹೇಳಿದರು.

ಬಿಜೆಪಿ ಒಂದು ಕುಟುಂಬ ಆಧಾರಿತವಾದುದಲ್ಲ; ಬಿಜೆಪಿಯನ್ನು ಒಂದು ಕುಟುಂಬ ಮುನ್ನಡೆಸುತ್ತಿಲ್ಲ. ‘ಸಾರ್ವಜನಿಕ ಕಲ್ಯಾಣದ ಸಂಸ್ಕೃತಿ’ ಪಕ್ಷವನ್ನು ಮುನ್ನಡೆಸುತ್ತಿದೆ. ಕೋವಿಡ್ ಸಂಕಷ್ಟದ ಅವಧಿಯಲ್ಲಿ ಬಿಜೆಪಿ ಕಾರ್ಯಕರ್ತರು ಕೈಗೊಂಡ ಸಮಾಜ ಕಲ್ಯಾಣ ಕಾರ್ಯಗಳೇ ಇದಕ್ಕೆ ಸಾಕ್ಷಿ. ಆಡಳಿತ ಪಕ್ಷ ಜನಸೇವೆಯನ್ನೇ ಕೇಂದ್ರವಾಗಿಟ್ಟುಕೊಂಡು ಕೆಲಸ ಮಾಡುತ್ತದೆ ಎಂದು ಮೋದಿ ಹೇಳಿದರು.

ಡಿವಿಎಸ್ ಗೈರು: ಕಾರ್ಯಕಾರಿಣಿ ಸಭೆಗೆ ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದಗೌಡ ಗೈರು ಹಾಜರಾಗಿದ್ದರು. ಪಕ್ಷದ ಸಂಘಟನಾ ಪ್ರವಾಸಕ್ಕಾಗಿ ‘ಜನ ಸ್ವರಾಜ್ ಯಾತ್ರೆ’ಗೆ 4 ತಂಡಗಳನ್ನು ರಚಿಸಿದ್ದು, ಈ ತಂಡಗಳಲ್ಲಿ ಡಿವಿಎಸ್ ಹೆಸರಿಲ್ಲದಿರುವುದು ಗಮನಾರ್ಹ. ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಪ್ರಲ್ಹಾದ ಜೋಶಿ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ನೇರವಾಗಿ ದೆಹಲಿ ಸಭೆಯಲ್ಲಿ ಭಾಗಿಯಾಗಿದ್ದಾರೆ. ಪಕ್ಷದ ರಾಜ್ಯ ಕಚೇರಿಯ ವರ್ಚುವಲ್ ವೇದಿಕೆ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಚಿವರು, ಮಾಜಿ ಸಚಿವರು ಸೇರಿದಂತೆ ಒಟ್ಟು 13 ಸದಸ್ಯರು ಪಾಲ್ಗೊಂಡಿದ್ದರು.

ಪುನೀತ್, ಉದಾಸಿ ನಿಧನಕ್ಕೆ ಸಂತಾಪ: ಚಿತ್ರನಟ ಪುನೀತ್ ರಾಜ್​ಕುಮಾರ್ ಹಾಗೂ ಮಾಜಿ ಸಚಿವ ಸಿ.ಎಂ. ಉದಾಸಿ ನಿಧನಕ್ಕೆ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಕಂಬನಿ ಮಿಡಿದು, ಸಂತಾಪ ವ್ಯಕ್ತಪಡಿಸಿದೆ.

ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಮೂಲಕ ಯೋಜನೆ ಹಾಗೂ ಕಾರ್ಯಕ್ರಮಗಳ ಮಾಹಿತಿ ನೀಡಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಅಲ್ಪಾವಧಿಯಲ್ಲಿ ಎರಡು ಲಸಿಕೆ ಸಂಶೋಧನೆ ಹಾಗೂ 100 ಕೋಟಿ ಜನರಿಗೆ ವಿತರಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸಲಾಗಿದೆ. ಇದಕ್ಕಾಗಿ ಮೋದಿಯವರಿಗೆ ಸಭೆ ಅಭಿನಂದನೆ ಸಲ್ಲಿಸಿದೆ. ಕರ್ನಾಟಕಕ್ಕೆ ಸಂಬಂಧಿಸಿದಂತೆ ಯಾವುದೇ ವಿಷಯ ಸಭೆಯಲ್ಲಿ ಪ್ರಸ್ತಾಪವಾಗಿಲ್ಲ. | ಆರ್.ಅಶೋಕ್ ಕಂದಾಯ ಸಚಿವ ಕಮಲ ಪುಷ್ಪ ಉಪಕ್ರಮಕ್ಕೆ ಚಾಲನೆ: ನಮೋ ಆ್ಯಪ್​ನಲ್ಲಿ ಕಮಲ ಪುಷ್ಪ ಎಂಬ ಹೊಸ ಉಪಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಪಕ್ಷ ಸಂಘಟನೆಗಾಗಿ ಜೀವನ ಸಮರ್ಪಿಸಿದ ಕಾರ್ಯಕರ್ತರಿಗೆ ಗೌರವ ಸಲ್ಲಿಸುವ ವಿಶೇಷ ಉಪಕ್ರಮ ಇದು ಎಂದು ಪ್ರಧಾನಿ ಮೋದಿ ಹೇಳಿದರು.

ಕಾರ್ಯಕಾರಿಣಿಯಲ್ಲಿ ಪ್ರಸ್ತಾಪವಾದ ವಿಚಾರಗಳು

  • ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ಚುನಾವಣೋತ್ತರ ಹಿಂಸಾಚಾರದ ವಿಚಾರ ಕಾರ್ಯಕಾರಿಣಿಯಲ್ಲಿ ಪ್ರಸ್ತಾಪವಾಗಿತ್ತು. ಚರ್ಚೆಯ ಬಳಿಕ ಖಂಡನಾ ನಿರ್ಣಯ ಕೈಗೊಳ್ಳಲಾಗಿದೆ.
  • ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಚರ್ಚೆ ನಡೆಯಿತು. ಕನಿಷ್ಠ ಬೆಂಬಲ ಬೆಲೆ 1.5 ಪಟ್ಟು ಏರಿಕೆ ಮಾಡಿದ್ದು, ಕಿಸಾನ್ ಕ್ರೆಡಿಟ್ ಕಾರ್ಡ್ ಪರಿಚಯಿಸಿದ್ದು, ಮೂರು ಕೃಷಿ ಕಾನೂನು ಹಿಂಪಡೆಯಲು ಆಗ್ರಹಿಸಿ ಕಳೆದ ವರ್ಷ ನವೆಂಬರ್​ನಿಂದ ನಡೆಯುತ್ತಿರುವ ಪ್ರತಿಭಟನೆ ವಿಚಾರ ಪ್ರಸ್ತಾಪವಾಗಿದೆ. ಸರ್ಕಾರ ಮಾತುಕತೆಗೆ ರೈತರಿಗೆ ಮುಕ್ತ ಆಹ್ವಾನ ನೀಡಿದೆ. ಆದರೆ, ಪ್ರತಿಭಟನಾನಿರತರು ಕಾನೂನು ರದ್ದುಗೊಳಿಸಬೇಕೆಂಬುದನ್ನು ಬಿಟ್ಟು ಪರಿಷ್ಕರಣೆಗೆ ಒಪ್ಪಿಲ್ಲ ಎಂಬುದು ಗಮನಸೆಳೆಯಿತು.
  • 2022ರ ಆರಂಭದಲ್ಲಿ ಪಂಚ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ನಾಲ್ಕರಲ್ಲಿ ಬಿಜೆಪಿ, ಒಂದರಲ್ಲಿ ಕಾಂಗ್ರೆಸ್ ಆಡಳಿತ ಇದೆ. ಚುನಾವಣಾ ತಯಾರಿಗೆ ಬೂತ್ ಮಟ್ಟದಲ್ಲಿ ಕೆಲಸ ನಡೆಸುವ ವಿಚಾರ ಚರ್ಚೆಗೆ ಒಳಗಾಗಿದೆ. ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂನ ಚುನಾವಣಾ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು. ಉಪಚುನಾವಣಾ ಫಲಿತಾಂಶವೂ ಪ್ರಸ್ತಾಪವಾಗಿದೆ.
  • ಕೋವಿಡ್ 19 ನಿರ್ವಹಣೆ, ಹವಾಮಾನ ವೈಪರೀತ್ಯದ ಸಿಒಪಿ 26 ಶೃಂಗದಲ್ಲಿ ಪ್ರಧಾನಿಯವರು ಪ್ರಸ್ತಾಪಿಸಿದ ನೆಟ್ ಜೀರೋ, ಪಂಚಾಮೃತ ವಿಚಾರಗಳು, ಜಮ್ಮು-ಕಾಶ್ಮೀರದ ಅಭಿವೃದ್ಧಿ, ವಿಪಕ್ಷ ಮತ್ತು ಅದರ ನಾಯಕರ ಕಾರ್ಯವೈಖರಿ, ಆರೋಗ್ಯ ಮೂಲಸೌಕರ್ಯ ವೃದ್ಧಿ, ಒನ್ ನೇಷನ್ ಒನ್ ರೇಷನ್, ಸ್ವಚ್ಛ ಭಾರತ್ ಅಭಿಯಾನ, ಮಿಷನ್ ಪಾಮ್ ಆಯಿಲ್, ವಿದೇಶ ನೀತಿ, ಆತ್ಮನಿರ್ಭರ ಭಾರತ, ಆಜಾದಿ ಕಾ ಅಮೃತ ಮಹೋತ್ಸವ್ ವಿಚಾರಗಳು ಪ್ರಸ್ತಾಪವಾಗಿದ್ದವು.

ಕಾರ್ಯಕಾರಿಣಿಯ ರಾಜಕೀಯ ನಿರ್ಣಯಗಳು

ಮುಂಬರುವ ಪಂಚ ರಾಜ್ಯ ಚುನಾವಣೆಗಳನ್ನು ಗಮನದಲ್ಲಿರಿಸಿಕೊಂಡು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ವರಿಷ್ಠರ ಸೂಚನೆ ಪ್ರಕಾರ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ರಾಜಕೀಯ ನಿರ್ಣಯ ಮಂಡಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಬೆಂಬಲಿಸುವ ಅಂಶಕ್ಕೆ ನಿರ್ಣಯದ ಬಹುಪಾಲು ಭಾಗ ಮೀಸಲಾಗಿದೆ. ಪ್ರತಿಪಕ್ಷಗಳ ಅವಕಾಶವಾದಿ ಬುದ್ಧಿ ಮತ್ತು ಅತಿಯಾದ ವೈಷಮ್ಯದ ಮನಸ್ಥಿತಿಯನ್ನು ನಿರ್ಣಯ ತೀವ್ರವಾಗಿ ಟೀಕಿಸಿದೆ. ಪ್ರಮುಖ ನಿರ್ಣಯಗಳು ಇಲ್ಲಿವೆ.
  • ನಾಲ್ಕು ರಾಜ್ಯಗಳಲ್ಲಿ ಆಗಿರುವ ಅಭಿವೃದ್ಧಿ ಕೆಲಸ ಮತ್ತು ಪಕ್ಷ ಸಂಘಟನೆಯ ಬಲದ ಮೂಲಕ ಬಿಜೆಪಿಗೆ ಭಾರಿ ಗೆಲುವು ಸಿಗಲಿದೆ ಎಂದು ನಿರ್ಣಯ ಹೇಳಿಕೊಂಡಿದೆ.
  • ಪಂಚ ರಾಜ್ಯಗಳ ಚುನಾವಣೆಯಲ್ಲಿ ಪಕ್ಷ ಉತ್ತಮ ಸಾಧನೆ ತೋರಲಿದೆ. ಜನರ ನಿರೀಕ್ಷೆಯನ್ನು ತಲುಪುವಲ್ಲಿ ಪಕ್ಷ ಯಶಸ್ವಿಯಾಗಿರುವುದಕ್ಕೆ ಬಿಹಾರ, ಅಸ್ಸಾಂ, ತಮಿಳುನಾಡು, ಪುದುಚೆರಿ, ಕೇರಳ, ಪಶ್ಚಿಮ ಬಂಗಾಳಗಳಲ್ಲಿ ಪಕ್ಷ ಉತ್ತಮ ಬೆಳವಣಿಗೆ ದಾಖಲಿಸಿದೆ.
  • ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಟಿಎಂಸಿ ಪ್ರಾಯೋಜಿತ ಹಿಂಸಾಚಾರ ಖಂಡನೀಯ. ಕಾನೂನು ಹೋರಾಟದ ಮೂಲಕವೇ ಪಕ್ಷದ ಕಾರ್ಯಕರ್ತರಿಗೆ ನ್ಯಾಯ ಒದಗಿಸಲು ಪಕ್ಷ ಬದ್ಧವಾಗಿದೆ.
  • ಜಮ್ಮು-ಕಾಶ್ಮೀರದಲ್ಲಿ 2004-14ರ ಅವಧಿ(ಯುಪಿಎ ಆಡಳಿತ)ಯಲ್ಲಿ 2081 ಜನ ಉಗ್ರ ದಾಳಿಗೆ ಪ್ರಾಣ ಕಳೆದುಕೊಂಡಿದ್ದಾರೆ. 2014-21ರ ನಡುವೆ 239 ನಾಗರಿಕರು ಉಗ್ರ ದಾಳಿಗೆ ಬಲಿಯಾಗಿದ್ದಾರೆ. ಇಷ್ಟರ ಮಟ್ಟಿಗೆ ಉಗ್ರ ಚಟುವಟಿಕೆ ನಿಯಂತ್ರಣಕ್ಕೆ ಬಂದಿದೆ. ಆ ಪ್ರದೇಶದ ಅಭಿವೃದ್ಧಿಗೆ ಪಕ್ಷ ಬದ್ಧವಾಗಿದೆ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜನ ಪಕ್ಷದ ಪರವಾಗಿ ನಿಂತಿದ್ದಾರೆ.
  • ಮೋದಿ ಸರ್ಕಾರ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತಿದ್ದು, ಪಾರದರ್ಶಕತೆ ಮತ್ತು ಡಿಜಿಟಲೀಕರಣದ ಕಡೆಗೆ ಹೆಚ್ಚಿನ ಆದ್ಯತೆ ನೀಡಿದೆ.
  • ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಬದ್ಧವಾಗಿದೆ. ಕೃಷಿ ಕಾನೂನು ಪರಿಷ್ಕರಣೆಗೆ ಸಿದ್ಧವಿದ್ದರೂ ಮಾತುಕತೆ ಬಾರದೆ ರೈತ ಸಂಘಟನೆಗಳು ಪ್ರತಿಭಟನೆ ಮುಂದುವರಿಸಿವೆ. ಇದು ರಾಜಕೀಯ ಉದ್ದೇಶದ ಪ್ರತಿಭಟನೆ.
  • ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಕೆ, ರಾಜ್ಯಗಳಲ್ಲಿ ವ್ಯಾಟ್ ಇಳಿಕೆ ಪರಿಣಾಮ ಜನರಿಗೆ ಅನುಕೂಲವಾಗಿದೆ. ಪಕ್ಷದ ಸರ್ಕಾರದ ನಿರ್ಣಯಗಳು ಶ್ಲಾಘನೀಯ ಎಂದು ನಿರ್ಣಯ ಪ್ರತಿಪಾದಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net