

ವಾಷಿಂಗ್ಟನ್: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿಸಿಗೆ ಆಗಮಿಸಿದ್ದು, ಭಾರತೀಯ ಸಮುದಾಯದವರು ಭವ್ಯ ಸ್ವಾಗತ ಕೋರಿದ್ದಾರೆ. ಶುಕ್ರವಾರ ಬೆಳಗಿನ ಜಾವ ಭಾರತೀಯ ಕಾಲಮಾನ 2.30ಕ್ಕೆ ಮೋದಿ- ಟ್ರಂಪ್ ನಡುವೆ ಬಹು ನಿರೀಕ್ಷಿತ ಚರ್ಚೆ ನಡೆಯಲಿದೆ. ತೆರಿಗೆ ಸಮರ, ವಲಸೆ ನೀತಿ ಸೇರಿದಂತೆ ಹಲವು ವಿಷಯಗಳು ಪ್ರಸ್ತಾಪವಾಗಲಿವೆ. ಇದಕ್ಕೂ ಮುನ್ನ ತುಳಸಿ ಗಬಾರ್ಡ್, ಎಲಾನ್ವುಸ್ಕ್ ಹಾಗೂ ಮೈಕೆಲ್ ವಾಲ್ಟ್್ಜ ಜತೆಗೆ ಮೋದಿ ಮಾತುಕತೆ ನಡೆಸಿದರು.
ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ 2 ನೇ ಬಾರಿಗೆ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಧಾನಿ ಮೋದಿಗೆ ಆಹ್ವಾನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಫ್ರಾನ್ಸ್ ಪ್ರವಾಸ ಮುಗಿಸಿ ಮಾರ್ಸಿಲ್ಲೆಯಿಂದ ಹೊರಟ ಮೋದಿ ಬುಧವಾರ ಸಂಜೆ 5.20 ರ ಸುಮಾರಿಗೆ (ಸ್ಥಳೀಯ ಕಾಲಮಾನ) ವಾಷಿಂಗ್ಟನ್ಗೆ ತಲುಪಿದರು. ಅಧ್ಯಕ್ಷರ ನಿವಾಸ ವೈಟ್ಹೌಸ್ ಸಮೀಪದಲ್ಲೇ ಇರುವ ಅಧ್ಯಕ್ಷರ ಅತಿಥಿಗೃಹ ಬ್ಲೇರ್ ಹೌಸ್ನಲ್ಲಿ ಮೋದಿ ವಾಸ್ತವ್ಯ ಹೂಡಿದ್ದಾರೆ. ಮೋದಿ ಬ್ಲೇರ್ ಹೌಸ್ ಬಳಿ ಆಗಮಿಸುತ್ತಿದ್ದಂತೆ ಮಳೆ, ಚಳಿಯನ್ನೂ ಲೆಕ್ಕಿಸದೆ ಕಾಯುತ್ತಿದ್ದ ಅಮೆರಿಕದಲ್ಲಿರುವ ಭಾರತೀಯರು ಘೋಷಣೆ ಕೂಗಿ ಪ್ರಧಾನಿಗೆ ಹೃತ್ಪೂರ್ವಕ ಸ್ವಾಗತ ಕೋರಿದರು.
ತುಳಸಿ ಗಬಾರ್ಡ್ ಜತೆ ಮಾತುಕತೆ: ಮೋದಿ ವಾಷಿಂಗ್ಟನ್ಗೆ ಆಗಮಿಸುತ್ತಿದ್ದಂತೆ ನೂತನವಾಗಿ ನೇಮಕವಾಗಿರುವ ರಾಷ್ಟ್ರೀಯ ಗುಪ್ತಚರ ಪಡೆಯ ನಿರ್ದೇಶಕಿ ತುಳಸಿ ಗಬಾರ್ಡ್ ಜತೆ ಮಾತುಕತೆ ನಡೆಸಿದರು. ಉಭಯ ನಾಯಕರ ಭಾರತ ಮತ್ತು ಅಮೆರಿಕ ಬಾಂಧವ್ಯದ ಕುರಿತು, ಭಯೋತ್ಪಾದನೆ ನಿಗ್ರಹ, ಸೈಬರ್ ಭದ್ರತೆ ಹಾಗೂ ಇತರ ಬೆದರಿಕೆಗಳ ಕುರಿತು ಸಹಕಾರ ಹೆಚ್ಚಿಸುವ ಬಗ್ಗೆ ಚರ್ಚೆ ನಡೆಸಿದರು.
ಪ್ರಮುಖ ವಿಷಯಗಳ ಚರ್ಚೆ: ಟ್ರಂಪ್ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ‘ಅಮೆರಿಕ ಫಸ್ಟ್’ ನೀತಿಯನ್ವಯ ವಿದೇಶಗಳಿಂದ ಆಮದಾಗುವ ವಸ್ತುಗಳ ಮೇಲೆ ಹೆಚ್ಚಿನ ಸುಂಕ ವಿಧಿಸಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಸಂಚಲನ ಸೃಷ್ಟಿಯಾಗಿದೆ. ಮೋದಿ ಭೇಟಿಗೂ ಕೆಲವೇ ದಿನ ಮುನ್ನ ಉಕ್ಕು ಮತ್ತು ಅಲ್ಯುಮಿನಿಯಂ ಆಮದಿನ ಮೇಲೆ ಶೇ.25 ರಷ್ಟು ಸುಂಕ ವಿಧಿಸುವುದಾಗಿ ಘೋಷಿಸಿದ್ದರು. ಜತೆಗೆ ಈಗಾಗಲೇ ಕೆನಡಾದ ವಸ್ತುಗಳ ಮೇಲೆ ಶೇ.25ರಷ್ಟು ಮತ್ತು ಚೀನಾದ ಉತ್ಪನ್ನಗಳ ಮೇಲೆ ಶೇ.10 ಸುಂಕ ವಿಧಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವ್ಯಾಪಾರ, ಹೂಡಿಕೆ, ಇಂಧನ, ರಕ್ಷಣೆ, ತಂತ್ರಜ್ಞಾನ ಹಾಗೂ ಸೂಕ್ಷ್ಮ ವಿಷಯಗಳಾದ ಅಕ್ರಮ ವಲಸಿಗರ ಗಡಿಪಾರು, ವಲಸೆ ನೀತಿ ಮತ್ತು ಸುಂಕದ ಕುರಿತು ಮೋದಿ ಮತ್ತು ಟ್ರಂಪ್ ಚರ್ಚೆ ನಡೆಸುವ ನಿರೀಕ್ಷೆ ಇದೆ. ಅಮೆರಿಕದ ಉತ್ಪನ್ನಗಳ ಮೇಲೆ ಸುಂಕ ಇಳಿಕೆ ಕುರಿತು ಭಾರತ ಸಿದ್ಧವಾಗಿರುವುದಾಗಿ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಕನಿಷ್ಠ ಒಂದು ಡಜನ್ ವಲಯದಲ್ಲಿ ಸುಂಕಗಳನ್ನು ಕಡಿತಗೊಳಿಸುವ ಕುರಿತು ಭಾರತ ಪರಿಗಣಿಸಲಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಭಾರತ ಮತ್ತು ಅಮೆರಿಕ ನಡುವಿನ 130 ಬಿಲಿಯನ್ ಡಾಲರ್ ಮೌಲ್ಯದ ವಹಿವಾಟನ್ನು ಇನ್ನಷ್ಟು ಹೆಚ್ಚಿಸುವ ಗುರಿ ಹೊಂದಲಾಗಿದೆ.
ವೈಟ್ ಹೌಸ್ನಲ್ಲಿ ಟ್ರಂಪ್ ಭೇಟಿ: ಮೋದಿ ಶುಕ್ರವಾರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆ ಮಾತುಕತೆ ನಡೆಸಲಿದ್ದು, ವೈಟ್ ಹೌಸ್ನಲ್ಲಿ ಆಯೋಜಿಸಲಾಗಿರುವ ಔತಣಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಟ್ರಂಪ್ ಮೊದಲ ಅವಧಿಗೆ ಅಧ್ಯಕ್ಷರಾಗಿದ್ದಾಗ ಪ್ರಧಾನಿ ಮೋದಿಯೊಂದಿಗೆ ಉತ್ತಮ ಸ್ನೇಹ ಹೊಂದಿದ್ದರು. ಉಭಯ ನಾಯಕರು ಹಲವು ವೇದಿಕೆಗಳಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ದರು. 2019 ರಲ್ಲಿ ಮೋದಿ ಅಮೆರಿಕದ ಟೆಕ್ಸಾಸ್ ನಲ್ಲಿ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರೆ. 2020 ರಲ್ಲಿ ಟ್ರಂಪ್ ಅಹಮದಾಬಾದ್ನಲ್ಲಿ ಹಮ್ಮಿಕೊಂಡಿದ್ದ ಅದ್ದೂರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆ ಬಳಿಕ ಇದೇ ಮೊದಲ ಬಾರಿಗೆ ಉಭಯ ನಾಯಕರು ಭೇಟಿಯಾಗುತ್ತಿದ್ದಾರೆ.
ಮೈಕಲ್ ಭೇಟಿ: ಡೊನಾಲ್ಡ್ ಟ್ರಂಪ್ ಭೇಟಿ ಗೂ ಮುನ್ನ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕಲ್ ವಾಲ್ಟ್್ಜ ಅವರು ಪ್ರಧಾನಿ ಮೋದಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಮೋದಿ ಉಳಿದುಕೊಂಡಿದ್ದ ಬ್ಲೇರ್ ಹೌಸ್ ಗೆ ಆಗಮಿಸಿದ ಮೈಕಲ್ ಚರ್ಚೆ ನಡೆಸಿದರು.