ಜೆಎನ್​ಯುನಲ್ಲಿ ಸ್ಥಾಪಿತವಾಯಿತು ಸ್ವಾಮಿ ವಿವೇಕಾನಂದರ ಪ್ರತಿಮೆ; ಪ್ರತಿಮೆ ಪ್ರೇರಣೆಯಾಗಲಿ ಎಂದ ಪ್ರಧಾನಿ

modi
Published on

ನವದೆಹಲಿ: ದೆಹಲಿಯ ಜವಹರಲಾಲ್​ ನೆಹರು ವಿಶ್ವವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಈ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಅನಾವರಣಗೊಳಿಸಿದರು. ಆ ಸಮಯದಲ್ಲಿ ಮಾತನಾಡಿದ ಅವರು, ಈ ಪ್ರತಿಮೆಯನ್ನು ಪ್ರೇರಣೆಯಾಗಿ ತೆಗೆದುಕೊಳ್ಳುವಂತೆ ಯುವ ಜನತೆಗೆ ಕರೆ ನೀಡಿದ್ದಾರೆ.

ಯುವಕರು ಅಭಿವೃದ್ಧಿಯ ಪಥದಲ್ಲಿರಬೇಕು ಎನ್ನುವುದು ಸ್ವಾಮಿ ವಿವೇಕಾನಂದರ ನಿರೀಕ್ಷೆಯಾಗಿತ್ತು. ಈ ಪ್ರತಿಮೆ ಅದಕ್ಕೆ ಪ್ರೇರಣೆಯಾಗಲಿ. ದೇಶದ ಬಗ್ಗೆ ಪ್ರೀತಿ ಮತ್ತು ಸಹಾನುಭೂತಿಯನ್ನು ಹುಟ್ಟಿಸಲು ಪ್ರತಿಮೆ ಪ್ರೇರೇಪಿಸಲಿದೆ. ನಮ್ಮಲ್ಲಿ ಸಮರ್ಪಣಾ ಭಾವ ಹೆಚ್ಚುವಂತಾಗಲಿ ಎಂದು ಅವರು ಹೇಳಿದರು.

ದೇಶವನ್ನು ಆತ್ಮನಿರ್ಭರ ಭಾರತವನ್ನಾಗಿ ಮಾಡಲಾಗುತ್ತಿದೆ. 130 ಕೋಟಿಗೂ ಹೆಚ್ಚು ಜನರು ಸ್ವಾವಲಂಭಿ ಭಾರತದ ಕಲ್ಪನೆ ಕಂಡಿದ್ದಾರೆ. ಇದೊಂದು ಸಾಮೂಹಿಕ ಪ್ರಜ್ಞೆ ಹಾಗೂ ಆಕಾಂಕ್ಷೆಯಾಗಲಿದೆ. ಭಾರತದ ಯುವಕರು ಪೂರ್ತಿ ವಿಶ್ವಕ್ಕೆ ಬ್ರಾಂಡ್​ ಇಂಡಿಯಾದ ಬ್ರಾಂಡ್​ ಅಂಬಾಸಿಡರ್​ಗಳು. ಅವರು ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಪ್ರತಿನಿಧಿಸಲಿದ್ದಾರೆ ಎಂದು ಅವರು ಹೇಳಿದರು.

ನಮ್ಮಲ್ಲಿ ಅನೇಕರಿಗೆ ರಾಷ್ಟ್ರೀಯ ಹಿತಾಸಕ್ತಿಗಿಂತ ನಮ್ಮ ವೈಯಕ್ತಿಕ ಸಿದ್ಧಾಂತಗಳೇ ಹೆಚ್ಚಾಗಿರುತ್ತದೆ. ಆದರೆ ಈ ರೀತಿ ಮಾಡುವುದರಿಂದ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಾನಿಯಾಗುತ್ತದೆ. ನಾವು ಮೊದಲು ರಾಷ್ಟ್ರದ ಬಗ್ಗೆ ಚಿಂತಿಸಬೇಕು, ನಂತರ ನಮ್ಮ ಸಿದ್ಧಾಂತಗಳ ಬಗ್ಗೆ ಯೋಚಿಸಬೇಕು ಎಂದು ಪ್ರಧಾನಿ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net