

ಬೆಂಗಳೂರು: ಮುಂದಿನ ವರ್ಷ ಏಪ್ರಿಲ್ನಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಸಿದ್ಧತೆ ಆರಂಭಿಸಿರುವಂತೆಯೇ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ರಾಜ್ಯ ಪ್ರವಾಸಕ್ಕೆ ವೇದಿಕೆ ಸಜ್ಜಾಗಿದೆ. ಉತ್ತರ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಆಡಳಿತ ವಿರೋಧಿ ಅಲೆ ಮೀರಿ ಪಕ್ಷ ಸಾಧಿಸಿರುವ ಗೆಲುವನ್ನು ಕರ್ನಾಟಕದಲ್ಲಿಯೂ ಮುಂದುವರಿಸುವ ಸವಾಲು ಮೋದಿ ಹಾಗೂ ಷಾ ಅವರ ಮುಂದಿದೆ. ಅದಕ್ಕಾಗಿಯೇ ವರ್ಷ ಮೊದಲೇ ವೇದಿಕೆ ಸಿದ್ಧಪಡಿಸುತ್ತಿದ್ದಾರೆ.
ಇನ್ನು ಒಂದು ವರ್ಷ ಪೂರ್ತಿ ಕೇಂದ್ರ ಬಿಜೆಪಿ ವರಿಷ್ಠರು ರಾಜ್ಯದ ಮೇಲೆ ಗಮನ ಕೇಂದ್ರೀಕರಿಸಲಿದ್ದಾರೆ. ಇತ್ತೀಚೆಗೆ ಚುನಾವಣೆ ನಡೆದ 5 ರಾಜ್ಯಗಳಲ್ಲಿ ಪಂಜಾಬ್ ಬಿಟ್ಟರೆ ಉಳಿದೆಡೆ ಬಿಜೆಪಿ ಪ್ರಬಲವಾಗಿತ್ತು. ಪ್ರತಿಪಕ್ಷ ಕಾಂಗ್ರೆಸ್ ದುರ್ಬಲವಾಗಿತ್ತು. ಆದರೆ ರಾಜ್ಯದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಸಹ ಪ್ರಬಲವಾಗಿದೆ. ಆದ್ದರಿಂದಲೇ ಬಿಜೆಪಿಗೆ ಹೊಸ ಹೊಸ ತಂತ್ರ ರೂಪಿಸುವ ಅನಿವಾರ್ಯತೆ ಇದೆ. ಉತ್ತರ ಪ್ರದೇಶದಲ್ಲಿ ಈಗ ಪ್ರದರ್ಶಿಸಿರುವ ಎಲ್ಲ ತಂತ್ರಗಳನ್ನು 2018 ರ ಚುನಾವಣೆಯಲ್ಲಿಯೇ ಇಲ್ಲಿ ರೂಪಿಸಲಾಗಿತ್ತು. ಇದೀಗ ಭಾವನಾತ್ಮಕ ವಿಚಾರಗಳ ಜತೆಗೆ ಹೊಸ ತಂತ್ರಗಳನ್ನು ಕಂಡುಕೊಳ್ಳಬೇಕಾಗಿದೆ. ದೇಶಾದ್ಯಂತ ಪಕ್ಷ ಇದುವರೆಗೂ 60 ಭಾವನಾತ್ಮಕ ವಿಚಾರಗಳನ್ನು ಪ್ರಸ್ತಾಪ ಮಾಡಿದೆ. ಇದೀಗ ಹೊಸ ಹೊಸ ವಿಷಯಗಳ ಮೂಲಕ ರಾಜ್ಯದ ಜನರನ್ನು ಸೆಳೆಯಬೇಕಾಗಿದೆ.
ತಿಂಗಳಿಗೊಮ್ಮೆ ಯಾತ್ರೆ: ಮೋದಿ ಮತ್ತು ಷಾ ಕರ್ನಾಟಕಕ್ಕೆ ತಿಂಗಳಿಗೊಮ್ಮೆ ಭೇಟಿ ನೀಡಲಿದ್ದಾರೆ. ವಿವಿಧ ಕಾರ್ಯಕ್ರಮಗಳ ಹೆಸರಿನಲ್ಲಿ ರಾಜ್ಯ ಪ್ರವಾಸ ಹಮ್ಮಿಕೊಳ್ಳುತ್ತಾರೆ. ಆ ಮೂಲಕ ಪಕ್ಷವನ್ನು ಚುನಾವಣೆಗೆ ಸಜ್ಜುಗೊಳಿಸಲಿದ್ದಾರೆ ಎಂದು ಬಿಜೆಪಿಯ ಉನ್ನತ ಮೂಲಗಳು ಖಚಿತಪಡಿಸಿವೆ. ಇದೇ ರೀತಿ ಪಶ್ಚಿಮ ಬಂಗಾಳಕ್ಕೂ ಮೋದಿ, ಷಾ ಸಾಕಷ್ಟು ಪ್ರವಾಸ ಕೈಗೊಂಡಿದ್ದರು. ಆದರೆ ಅಲ್ಲಿ ಗೆಲುವು ಸಾಧ್ಯವಾಗಲಿಲ್ಲ. ಉತ್ತರ ಪ್ರದೇಶದಲ್ಲಿ ಸರಣಿ ಭೇಟಿ ಅನುಕೂಲವಾಯಿತು. ಅದೇ ಮಾದರಿಯನ್ನೇ ರಾಜ್ಯದಲ್ಲೂ ಅನುಸರಿಸಲಾಗುತ್ತದೆ. ಪ್ರತಿ ಭೇಟಿಯ ಸಂದರ್ಭದಲ್ಲಿಯೂ ಸಾರ್ವಜನಿಕ ಸಮಾರಂಭ ನಡೆಸುವುದಕ್ಕೂ ಪಕ್ಷ ಸಿದ್ಧತೆ ಮಾಡುತ್ತಿದೆ. ಸರ್ಕಾರದ ಕಾರ್ಯಕ್ರಮಗಳ ಹೆಸರಿನಲ್ಲಿಯೇ ಪಕ್ಷದ ಪ್ರಚಾರ ನಡೆಸುವ ಉದ್ದೇಶವೂ ಇದೆ ಎಂದು ಮೂಲಗಳು ಹೇಳುತ್ತವೆ.
ಸಂಸ್ಥಾಪನಾ ದಿನ: ಏ.6ಕ್ಕೆ ಬಿಜೆಪಿ ಸಂಸ್ಥಾಪನ ದಿನ ಇದೆ. ಅದು ಎಲ್ಲ ಜಿಲ್ಲೆಗಳಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರು ಭಾಗವಹಿಸುವುದು ಕಡ್ಡಾಯವಾಗಿದೆ. ಬಿಜೆಪಿಯ ತತ್ವ ಸಿದ್ಧಾಂತಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವುದು ಕಾರ್ಯಕ್ರಮದ ಒಟ್ಟಾರೆ ಉದ್ದೇಶವಾಗಿದೆ.
ಪ್ರಧಾನ್ ಚುನಾವಣಾ ಉಸ್ತುವಾರಿ?: ರಾಜ್ಯದ ಬಿಜೆಪಿಯ ಚುನಾವಣಾ ಉಸ್ತುವಾರಿಯಾಗಿ ಕೇಂದ್ರ ಸಚಿವ ಧಮೇಂದ್ರ ಪ್ರಧಾನ್ ನೇಮಕವಾಗುವ ಸಾಧ್ಯತೆಗಳಿವೆ. ಸಹ ಉಸ್ತುವಾರಿಯಾಗಿ ಆಂಧ್ರಪ್ರದೇಶದ ಕಿಶನ್ ರೆಡ್ಡಿ ನೇಮಕವಾಗಲಿದ್ದಾರೆಂದು ಪಕ್ಷದ ಮೂಲಗಳು ತಿಳಿಸಿವೆ. ಪ್ರಧಾನ್ ಹಿಂದೆ ರಾಜ್ಯದಲ್ಲಿ ಪಕ್ಷದ ಉಸ್ತುವಾರಿಯಾಗಿದ್ದರು. ಇಲ್ಲಿನ ಬಗ್ಗೆ ಸಂಪೂರ್ಣ ಮಾಹಿತಿ ಅವರಲ್ಲಿದೆ. ಯಡಿಯೂರಪ್ಪ ರಾಜೀನಾಮೆ ನೀಡಿ ಶಾಸಕಾಂಗ ಪಕ್ಷದ ನಾಯಕರಾಗಿ ಬೊಮ್ಮಾಯಿ ಆಯ್ಕೆಯಾಗುವ ಸಂದರ್ಭದಲ್ಲಿಯೂ ಪ್ರಧಾನ್ ಹಾಗೂ ಕಿಶನ್ರೆಡ್ಡಿ ಅವರೇ ವೀಕ್ಷಕರಾಗಿ ಬಂದಿದ್ದರು.
ಬಿಎಸ್ವೈ ಬಳಕೆ: ಮೋದಿ ಮತ್ತು ಷಾ ರಾಜ್ಯ ಭೇಟಿಯ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆಗೆ ಬಳಸಿಕೊಳ್ಳಲಾಗುತ್ತದೆ. ಯಡಿಯೂರಪ್ಪರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂಬ ಸಂದೇಶ ರವಾನೆಯಾದರೆ ಚುನಾವಣೆಯಲ್ಲಿ ಪರಿಣಾಮ ಬೀರುತ್ತದೆ ಎಂಬ ಅರಿವು ಇಬ್ಬರಿಗೂ ಇದೆ. ಆದ್ದರಿಂದಲೇ ಬಿಎಸ್ವೈ ಅವರನ್ನು ಜತೆಯಲ್ಲಿಯೇ ಕರೆದುಕೊಂಡು ಹೋಗುವ ಪ್ರಯತ್ನ ನಡೆಯಲಿದೆ ಎಂದು ಪಕ್ಷದ ಮೂಲಗಳು ಹೇಳಿವೆ.