

Modi meets Trump : ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ವಾಷಿಂಗ್ಟನ್ನ ಶ್ವೇತಭವನದಲ್ಲಿ ಭೇಟಿಯಾದರು. ಈ ವಿಶೇಷ ಭೇಟಿಯು ಉಭಯ ನಾಯಕರ ನಡುವಿನ ಆತ್ಮೀಯತೆಗೆ ಸಾಕ್ಷಿಯಾಯಿತು. ಭಾವುಕ ಸನ್ನಿವೇಶವೂ ಜರುಗಿತು.
ಪರಸ್ಪರ ಹಸ್ತಲಾಘವ ಮತ್ತು ಅಪ್ಪುಗೆಯೊಂದಿಗೆ ಮೋದಿಯನ್ನು ಸ್ವಾಗತಿಸಿದ ಟ್ರಂಪ್, ನಾವು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಂಡೆವು, ತುಂಬಾ ಮಿಸ್ ಮಾಡಿಕೊಂಡೆವು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, ನಿಮ್ಮನ್ನು ಮತ್ತೆ ನೋಡಲು ತುಂಬಾ ಸಂತೋಷವಾಗುತ್ತಿದೆ ಎಂದರು.
ಇದಾದ ಬಳಿಕ ಟ್ರಂಪ್ ಅವರು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಮತ್ತು ಯುಎಸ್ ಸರ್ಕಾರದ ದಕ್ಷತೆಯ ಇಲಾಖೆ (DOGE) ಮುಖ್ಯಸ್ಥ ಎಲಾನ್ ಮಸ್ಕ್ ಸೇರಿದಂತೆ ಯುಎಸ್ ಅಧಿಕಾರಿಗಳಿಗೆ ಪ್ರಧಾನಿ ಮೋದಿ ಅವರ ಪರಿಚಯ ಮಾಡಿಕೊಟ್ಟರು. ಅಲ್ಲದೆ, ಶ್ವೇತಭವನದ ಮೀಟಿಂಗ್ ವೇಳೆ ಪ್ರಧಾನಿ ಮೋದಿ ಕುಳಿತುಕೊಳ್ಳಲು ಚೇರ್ ಸಹ ಎಳೆದರು.
ಶ್ವೇತಭವನದ ಉಪ ಮುಖ್ಯಸ್ಥ ಡಾನ್ ಸ್ಕ್ಯಾವಿನೊ ಅವರು ತಮ್ಮ ಎಕ್ಸ್ನಲ್ಲಿ ಮೋದಿ ಮತ್ತು ಟ್ರಂಪ್ ಅವರ ವಿಡಿಯೋವನ್ನು ಹಂಚಿಕೊಂಡಿದ್ದು, ವೆಸ್ಟ್ ವಿಂಗ್ ಲಾಬಿಯಲ್ಲಿ ತೆರೆಮರೆಯಲ್ಲಿ - ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಿದರು ಎಂದು ಬರೆದುಕೊಂಡಿದ್ದಾರೆ.
ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ ಮತ್ತು ಅಮೆರಿಕದಲ್ಲಿನ ಭಾರತದ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ಸೇರಿದಂತೆ ಭಾರತೀಯ ನಿಯೋಗವು ಪ್ರಧಾನಿ ಮೋದಿ ಬಳಿಕ ಶ್ವೇತಭವನಕ್ಕೆ ಆಗಮಿಸಿತು. ಇದಾದ ನಂತರ ಪತ್ರಿಕಾಗೋಷ್ಠಿಯಲ್ಲಿ, ಟ್ರಂಪ್ ಮತ್ತು ಮೋದಿ ತಮ್ಮ ದೀರ್ಘ ಸ್ನೇಹ ಮತ್ತು ಹಿಂದಿನ ಭೇಟಿಗಳ ಬಗ್ಗೆ ಮಾತನಾಡಿದರು.
ನನ್ನ ಸ್ನೇಹಿತ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ವೇತಭವನಕ್ಕೆ ಸ್ವಾಗತಿಸಲು ನನಗೆ ರೋಮಾಂಚನವಾಗಿದೆ ಎಂದು ಟ್ರಂಪ್ ಹೇಳಿದರು. ಅಲ್ಲದೆ, ಮೋದಿ ಅವರು ವಿಶೇಷ ವ್ಯಕ್ತಿ ಎಂದೂ ಹೇಳಿದರು. ಜಂಟಿ ಪತ್ರಿಕಾಗೋಷ್ಠಿಯಲ್ಲಿ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಅವರು ನನಗಿಂತಲೂ ಕಠಿಣ ಸಂಧಾನಕಾರ ಮತ್ತು ನನಗಿಂತಲೂ ಉತ್ತಮ ಸಂಧಾನಕಾರ ಎಂದು ಹೇಳಿದರು. ನಮ್ಮ ನಡುವೆ ಸ್ಪರ್ಧೆ ಇಲ್ಲ ಎಂದರು.
ಮೋದಿ ಮತ್ತು ಭಾರತದೊಂದಿಗೆ ವಿಶೇಷ ಬಾಂಧವ್ಯ ಹೊಂದಿರುವುದಾಗಿ ಟ್ರಂಪ್ ಹೇಳಿದರು. ಆದಾಗ್ಯೂ, ಅಮೆರಿಕ ತನ್ನ ವ್ಯಾಪಾರ ಪಾಲುದಾರ ರಾಷ್ಟ್ರಗಳ ಮೇಲೆ ವಿಧಿಸಲು ಪ್ರಾರಂಭಿಸಿರುವ ಹೆಚ್ಚಿನ ಸುಂಕಗಳಿಂದ ಭಾರತವು ವಿನಾಯಿತಿ ಪಡೆಯುವುದಿಲ್ಲ ಎಂದು ಎಚ್ಚರಿಸಿದರು. ಮೋದಿ ಆಗಮನಕ್ಕೂ ಮುನ್ನ, ಶ್ವೇತಭವನದಲ್ಲಿ ಭಾರತದ ಧ್ವಜಗಳನ್ನು ಹಾರಿಸಲಾಯಿತು. ಟ್ರಂಪ್ ಅಧಿಕಾರ ವಹಿಸಿಕೊಂಡ ನಂತರ ಅಮೆರಿಕಕ್ಕೆ ಭೇಟಿ ನೀಡಿದ ಮೊದಲ ವಿಶ್ವ ನಾಯಕರಲ್ಲಿ ಪ್ರಧಾನಿ ಮೋದಿ ಕೂಡ ಒಬ್ಬರು. ಅಧಿಕಾರ ವಹಿಸಿಕೊಂಡ ಮೂರು ವಾರಗಳಲ್ಲಿ ಮೋದಿ ಅವರನ್ನು ಟ್ರಂಪ್ ಆಹ್ವಾನಿಸಿದರು.
2024ರ ನವೆಂಬರ್ನಿಂದ ಮೋದಿ ಮತ್ತು ಟ್ರಂಪ್ ಎರಡು ಬಾರಿ ಫೋನ್‌ನಲ್ಲಿ ಮಾತನಾಡಿದ್ದಾರೆ. ಜನವರಿಯಲ್ಲಿ ಪ್ರಧಾನಿ ಮೋದಿ ಅವರ ವಿಶೇಷ ರಾಯಭಾರಿಯಾಗಿ ಟ್ರಂಪ್ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಭಾಗವಹಿಸಿದ್ದರು. ಈ ಭೇಟಿಯ ಸಮಯದಲ್ಲಿ ಜೈಶಂಕರ್ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರನ್ನು ಭೇಟಿಯಾದರು ಮತ್ತು ಜನವರಿ 2025ರಲ್ಲಿ ನಡೆದ ಕ್ವಾಡ್ ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸಿದರು.
ಶ್ವೇತಭವನದಲ್ಲಿ ಟ್ರಂಪ್ ಅವರನ್ನು ಭೇಟಿ ಮಾಡುವ ಮೊದಲು, ಮೋದಿ ಅವರು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕ್ ವಾಲ್ಟ್ಜ್, ಟೆಸ್ಲಾ ಸಿಇಒ ಎಲಾನ್ ಮಸ್ಕ್, ಭಾರತೀಯ ಮೂಲದ ಉದ್ಯಮಿ ವಿವೇಕ್ ರಾಮಸ್ವಾಮಿ ಮತ್ತು ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ (ಡಿಎನ್‌ಐ) ತುಳಸಿ ಗಬ್ಬಾರ್ಡ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. (ಏಜೆನ್ಸೀಸ್)