

ತುಮಕೂರು: ಭದ್ರ ಮೇಲ್ದಂಡೆ ನೀರಾವರಿ ಯೋಜನೆಗೆ ಬಜೆಟ್‌ನಲ್ಲಿ 5300ಕೋಟಿ ರೂ. ನೀಡಿದ್ದು ತುಮಕೂರು, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಸೇರಿ ಮಧ್ಯ ಕರ್ನಾಟಕದ ಜಿಲ್ಲೆಗಳಲ್ಲಿ ನೀರಿನ ಬವಣೆ ನೀಗಲಿದೆ ಎಂದು ಪ್ರಧಾನಿ ನರೇಂದ್ರಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಗುಬ್ಬಿ ತಾಲೂಕು ಬಿದರೆಹಳ್ಳ ಕಾವಲ್‌ನಲ್ಲಿ ಸೋಮವಾರ ಎಚ್‌ಎಎಲ್ ಸಂಸ್ಥೆಯ ಲಘುಹೆಲಿಕಾಪ್ಟರ್ ಉತ್ಪಾದನಾ ಘಟಕ ಉದ್ಘಾಟನೆ, ಜಲಜೀವನ್‌ಮಿಷನ್ ಯೋಜನೆಗಳ ಶಂಕುಸ್ಥಾಪನೆ ಹಾಗೂ ತುಮಕೂರು ಕೈಗಾರಿಕಾ ಟೌನ್‌ಶಿಪ್‌ಗೆ ಅಡಿಗಲ್ಲು ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಧಾನಿ ನರೇಂದ್ರಮೋದಿ ಅವರು ‘ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ನಿಟ್ಟೂರು ನಗರದ ಆತ್ಮೀಯ ನಾಗರಿಕ ಬಂಧು, ಭಗಿನಿಯರೇ, ನಿಮಗೆಲ್ಲಾ ನನ್ನ ನಮಸ್ಕಾರಗಳು’ ಎಂದು ಕನ್ನಡದಲ್ಲಿಯೇ ಮಾತು ಆರಂಭಿಸಿದರು. ಕರ್ನಾಟಕ ಸಂತರು, ಋಷಿಮುನಿಗಳ ತಫೋಭೂಮಿಯಾಗಿದ್ದು ಆಧ್ಯಾತ್ಮ, ಜ್ಞಾನ, ವಿಜ್ಞಾನದ ಮಹಾನ್ ಪರಂಪರೆಯನ್ನು ಕರ್ನಾಟಕ ಸಶಕ್ತಗೊಳಿಸಿದೆ, ಸಿದ್ಧಗಂಗಾ ಮಠದಲ್ಲಿ ಡಾ.ಶಿವಕುಮಾರಸ್ವಾಮೀಜಿ ಅವರು ಆರಂಭಿಸಿರುವ ತ್ರಿವಿಧ ದಾಸೋಹವನ್ನು ಶ್ರೀಸಿದ್ದಲಿಂಗಸ್ವಾಮೀಜಿ ಮುಂದುವರಿಸುತ್ತಿದ್ದಾರೆ ಎಂದು ಜಿಲ್ಲೆಯ ಗುಣಗಾನ ಮಾಡಿದರು.
‘ತ್ರಿವಿಧ ದಾಸೋಹ ಆರಂಭಿಸಿದ ಡಾ.ಶಿವಕುಮಾರಸ್ವಾಮೀಜಿ ಅವರಿಗೆ ಅದನ್ನು ಮುಂದುವರಿಸುತ್ತಿರುವ ಸಿದ್ದಲಿಂಗಸ್ವಾಮೀಜಿ ಅವರಿಗೆ ನನ್ನ ನಮನಗಳು. ಗುಬ್ಬಿ ಚಿದಂಬರಾಶ್ರಮ, ಚನ್ನಬಸವೇಶ್ವರರಿಗೂ ನನ್ನ ನಮನಗಳು’ ಎಂದಾಗ ಇಡೀ ಸಭೆ ಕರತಾಡನ ಮಾಡಿತು. ಸಂತರ ಆಶೀರ್ವಾದದಿಂದ ಕರ್ನಾಟಕದ ಯುವಕರಿಗೆ ಉದ್ಯೋಗ ನೀಡುವ, ಗ್ರಾಮೀಣ ಮಹಿಳೆಯರಿಗೆ ಅವಕಾಶಗಳನ್ನು ಸೃಷ್ಟಿಸುವ ದೇಶಸೇವೆಯ ಮಹಾಯೋಜನೆ ತುಮಕೂರು ಜಿಲ್ಲೆಯಲ್ಲಿ ಉದ್ಘಾಟನೆಗೊಂಡಿದೆ ಎಂದರು.
ದೇಶದ ಬಹುದೊಡ್ಡ ಹೆಲಿಕಾಪ್ಟರ್ ಫ್ಯಾಕ್ಟರಿ ತುಮಕೂರಿಗೆ ಸಿಕ್ಕಿದೆ. ತುಮಕೂರು ಕೈಗಾರಿಕಾ ಟೌನ್‌ಶಿಪ್ ಜತೆಗೆ ಕುಡಿಯುವ ನೀರಿನ ಯೋಜನೆಗೂ ಚಾಲನೆ ಸಿಕ್ಕಿದೆ ಎಂದರು. ಕರ್ನಾಟಕ ಯುವ ಪ್ರತಿಭೆ, ಯುವ ಸಂಶೋಧಕರ ನಾಡು ಎಂಬ ಹೆಗ್ಗಳಿಕೆ ಪಡೆದಿದೆ, ಡ್ರೋಣ್ ಉತ್ಪಾದನೆಯಿಂದ ತೇಜಸ್ ಯುದ್ಧವಿಮಾನದವರೆಗೂ ಕರ್ನಾಟಕ ಉತ್ಪಾದನಾ ಕ್ಷೇತ್ರದ ಸಾಮರ್ಥ್ಯವನ್ನು ವಿಶ್ವವೇ ಗಮನಿಸಿದೆ, ನಮ್ಮ ಡಬಲ್ ಇಂಜಿನ್ ಸರ್ಕಾರ ಕರ್ನಾಟಕವನ್ನು ಹೂಡಿಕೆದಾರರ ಮೊದಲ ಆಯ್ಕೆಯನ್ನಾಗಿಸಿದೆ ಎಂದರು.
ಡಬಲ್ ಇಂಜಿನ್ ಸರ್ಕಾರ ಹೇಗೆ ಕೆಲಸ ಮಾಡುತ್ತಿದೆ ಎಂಬುದರ ಒಂದು ಉದಾಹರಣೆ ಎಚ್‌ಎಎಲ್ ಲಘು ಹೆಲಿಕಾಪ್ಟರ್ ಉತ್ಪಾದನಾ ಘಟಕದ ಉದ್ಘಾಟನೆ, 2016ರಲ್ಲಿ ಈ ಘಟಕದ ಶಿಲಾನ್ಯಾಸದ ಅವಕಾಶ ಸಿಕ್ಕಿತ್ತು, ನಮ್ಮ ರಕ್ಷಣಾ ಅವಶ್ಯಕತೆಗಳಿಗೆ ವಿದೇಶಗಳ ಮೇಲಿನ ಅವಲಂಬನೆ ಕಡಿಮೆ ಮಾಡುವ ಕನಸು ಇಂದು ಸಾಕಾರಗೊಂಡಿದೆ ಎಂದು ಖುಷಿಪಟ್ಟರು.
ಎಚ್‌ಎಎಲ್, ಕೈಗಾರಿಕಾ ವಲಯಗಳ ಆರಂಭದಿಂದ ಜಿಲ್ಲೆಯಲ್ಲಿ ಸಾಕಷ್ಟು ಉದ್ಯೋಗಗಳು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಲಭ್ಯವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ರಕ್ಷಣಾ ಸಚಿವ ರಾಜನಾಥಸಿಂಗ್, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಸಚಿವರಾದ ಆರಗ ಜ್ಞಾನೇಂದ್ರ, ಜೆ.ಸಿ.ಮಾಧುಸ್ವಾಮಿ, ಬಿ.ಸಿ.ನಾಗೇಶ್, ವಿ.ಸೋಮಣ್ಣ, ಮುರುಗೇಶನಿರಾಣಿ, ಸಂಸದರಾದ ಜಿ.ಎಸ್.ಬಸವರಾಜು, ಜಗ್ಗೇಶ್, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಮಸಾಲ ಜಯರಾಮ್, ವೈ.ಎ.ನಾರಾಯಣಸ್ವಾಮಿ, ಚಿದಾನಂದ ಎಂ.ಗೌಡ ಇದ್ದರು.
ಮೋದಿ ಅವರಿಗೆ ಸಚಿವ ಮಾಧುಸ್ವಾಮಿ ಡಾ.ಶಿವಕುಮಾರಸ್ವಾಮೀಜಿ ಪುತ್ಥಳಿ ನೀಡಿ ಗೌರವಿಸಿದರು.
ಶ್ರೀ ಗುಬ್ಬಿಚನ್ನಬಸವೇಶ್ವರ, ಚಿದಂಬರಾಶ್ರಮ ನೆನೆದ ಮೋದಿ!: ಪ್ರಧಾನಿ ನರೇಂದ್ರಮೋದಿ ಭಾಷಣದಲ್ಲಿ ಜಿಲ್ಲೆಯ ವಿಶೇಷತೆಗಳನ್ನು ಸ್ಮರಿಸಿದ್ದು ಅಚ್ಚರಿ ಎನಿಸಿತು. ಸಿದ್ಧಗಂಗಾ ಕ್ಷೇತ್ರ ಹಾಗೂ ತ್ರಿವಿಧ ದಾಸೋಹಿಗಳಾದ ಡಾ.ಶಿವಕುಮಾರಸ್ವಾಮೀಜಿ, ಶ್ರೀಸಿದ್ದಲಿಂಗಸ್ವಾಮೀಜಿ ಅವರನ್ನು ಮೋದಿ ವಿಶೇಷವಾಗಿ ಸ್ಮರಿಸಿದರು. ಗುಬ್ಬಿ, ನಿಟ್ಟೂರು ಜನರಿಗೆ ಕನ್ನಡದಲ್ಲಿಯೇ ಶುಭಾಶಯ ಕೋರಿದ ಮೋದಿ, ಚಿದಂಬರಾಶ್ರಮ ಹಾಗೂ ಶ್ರೀಚನ್ನಬಸವೇಶ್ವರ ಸ್ವಾಮಿ ಸ್ಮರಿಸಿದ್ದು ನೆರೆದಿದ್ದವರನ್ನು ರೋಮಾಂಚನಗೊಳಿಸಿತು.
ಅರ್ಧ ಗಂಟೆ ತಡವಾದ ಕಾರ್ಯಕ್ರಮ: ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದ ಕಾರ್ಯಕ್ರಮ ನಿಗದಿತ ಸಮಯಕ್ಕೆ ಆರಂಭವಾಗದೆ 30 ನಿಮಿಷ ತಡವಾಗಿ ಆರಂಭವಾಯಿತು. ಬೆಂಗಳೂರಿನ ಕಾರ್ಯಕ್ರಮ ಮುಗಿಸಿಕೊಂಡು ನೇರವಾಗಿ ಎಚ್‌ಎಎಲ್ ಘಟಕಕ್ಕೆ ಆಗಮಿಸಿದ ಪ್ರಧಾನಿ ನೇರವಾಗಿ ವೇದಿಕೆಗೆ ಬಂದರು. ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ನೀರಿನ ಬಾಟಲ್ ಕೂಡ ತರಲು ಅವಕಾಶವಿಲ್ಲದ ಕಾರಣಕ್ಕೆ ಜನರು, ಗಣ್ಯರು ಬಾಯಾರಿಕೆಯಿಂದ ಪರದಾಡಿದರು.
ಕರ್ನಾಟಕ ವಿಜ್ಞಾನ, ತಂತ್ರಜ್ಞಾನ, ಪ್ರಗತಿ, ಶಾಂತಿ, ಸೌಹಾರ್ದತೆಗೆ ಹೆಸರುವಾಸಿಯಾಗಿದೆ. ಇಂತಹ ನಾಡಿನಲ್ಲಿ ವರ್ಷಕ್ಕೆ 60 ಲಘು ಉಪಯುಕ್ತ ಹೆಲಿಕಾಪ್ಟರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಹೆಲಿಕಾಪ್ಟರ್ ಫ್ಯಾಕ್ಟರಿಯನ್ನು ಪ್ರಧಾನಿ ಮೋದಿ ಉದ್ಘಾಟಿಸಿರುವುದು ಸಂತಸ ತಂದಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದರು.
ಗ್ರೀನ್ ಫೀಲ್ಡ್ ಹೆಲಿಕಾಪ್ಟರ್ ಫ್ಯಾಕ್ಟರಿಯು ಭವಿಷ್ಯದ ಎಲ್ಲ ಹೆಲಿಕಾಪ್ಟರ್ ಯೋಜನೆಗೆ ಸ್ಥಳಾವಕಾಶ ಕಲ್ಪಿಸುವ ದೃಷ್ಟಿಯಿಂದ ರೂಪಿಸಲಾಗಿದ್ದು, ಭವಿಷ್ಯದಲ್ಲಿ ಹೆಲಿಕಾಪ್ಟರ್ ಮತ್ತು ಅದರ ಇಂಜಿನ್‌ಗಳ ಉತ್ಪಾದನೆ, ನಿರ್ವಹಣೆ ಹಾಗೂ ದುರಸ್ತಿ ಮತ್ತು ಕೂಲಂಕಷ ಪರೀಕ್ಷೆ ಸೌಲಭ್ಯಗಳಿಗಾಗಿ ಸಾಮರ್ಥ್ಯ ವಿಸ್ತರಿಸಲಾಗುವುದು ಎಂದರು.
ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಸಿದ್ಧಗಂಗಾ ಕ್ಷೇತ್ರವಿರುವ ತುಮಕೂರು ಜಿಲ್ಲೆಯಲ್ಲಿ ಎಚ್‌ಎಎಲ್ ಕಾರ್ಖಾನೆ ಸ್ಥಾಪನೆ ಔದ್ಯೋಗಿಕ ಕ್ರಾಂತಿ ಮತ್ತು ಆತ್ಮ ನಿರ್ಭರ ಕ್ರಾಂತಿಗೆ ಸಾಕ್ಷಿಯಾಗಿದೆ ಎಂದರು.
ವರ್ಷಕ್ಕೆ 60 ಲಘು ಹೆಲಿಕಾಪ್ಟರ್ ಉತ್ಪಾದನೆ: ಎಚ್‌ಎಎಲ್ ತನ್ನದೇ ಇತಿಹಾಸ ಹೊಂದಿದ್ದು, ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಅತ್ಯಂತ ಅಗ್ರಗಣ್ಯ ಸಂಸ್ಥೆ ಎನಿಸಿದೆ. ಈ ಕಾರ್ಖಾನೆಗೆ ಪ್ರಧಾನ ಮಂತ್ರಿ ಮೋದಿ ಅವರು ಅಡಿಗಲ್ಲು ಹಾಕಿ ಅವರೇ ಉದ್ಘಾಟನೆ ನೆರವೇರಿಸಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು.
ಶೇ.90 ರಕ್ಷಣಾ ಉಪಕರಣಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದ ನಾವು ಶೇ.60 ನಾವೇ ಹೆಲಿಕಾಪ್ಟರ್ ಬಿಡಿಭಾಗಗಳನ್ನು ತಯಾರಿಸಿ ರಫ್ತು ಮಾಡುತ್ತಿದ್ದೇವೆ. ಇದು ಆತ್ಮ ನಿರ್ಭರ್‌ಗೆ ಕೈಗನ್ನಡಿ ಎಂದರು.
ಜಲಜೀವನ್ ಮಿಷನ್ ಯೋಜನೆಯಡಿ ಚಿಕ್ಕನಾಯಕನಹಳ್ಳಿ, ತಿಪಟೂರಿನ 3 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದ್ದು, 3 ವರ್ಷದಲ್ಲಿ 37ಲಕ್ಷ ಮನೆಗಳಿಗೆ ಗಂಗೆಯನ್ನು ಹರಿಸಲಾಗಿದೆ ಎಂದರು.
ಅಡಕೆ ಪೇಟ ತೊಡಿಸಿ ಸನ್ಮಾನ: ವೇದಿಕೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರಮೋದಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಆರಂಭದಲ್ಲಿ ಸಿಎಂ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಶಾಲು, ಅಡಕೆಯಿಂದ ವಿಶೇಷವಾಗಿ ತಯಾರಿಸಿದ್ದ ಪೇಟ, ಹಾರ ಹಾಕಿ ಸನ್ಮಾನಿಸಿದರು. ಸಚಿವ ಜೆ.ಸಿ.ಮಾಧುಸ್ವಾಮಿ ಡಾ.ಶಿವಕುಮಾರಸ್ವಾಮೀಜಿ ಪುತ್ಥಳಿ ನೀಡಿ ಗೌರವಿಸಿದರು, ಸಂಸದ ಜಿ.ಎಸ್.ಬಸವರಾಜು, ಸಚಿವ ಬಿ.ಸಿ.ನಾಗೇಶ್ ಗೋಡೆಕೆರೆ ಶ್ರೀಸಿದ್ದರಾಮೇಶ್ವರ, ಗುಬ್ಬಿ ಶ್ರೀಚನ್ನಬಸವೇಶ್ವರ ಸ್ವಾಮಿ ೆಟೋಗಳನ್ನು ನೀಡಿದರು.
ಒಳಬಿಡಲು ಪೊಲೀಸರ ಕಿರಿಕಿರಿಗೆ ಗೃಹ ಸಚಿವ ಗರಂ: ಎಚ್‌ಎಎಲ್ ಆವರಣದೊಳಗೆ ಬರುವ ಸಾರ್ವಜನಿಕರಿಗೆ ಪೊಲೀಸರ ಕಿರಿಕಿರಿ ಬಿಜೆಪಿ ಮುಖಂಡರಿಗೂ ತಲೆಬಿಸಿ ತರಿಸಿತ್ತು. ವೇದಿಕೆ ಕಾರ್ಯಕ್ರಮ ನಡೆದ ಜರ್ಮನ್‌ಟೆಂಟ್‌ಗೆ ತೆರಳುವ ಸಾರ್ವಜನಿಕರನ್ನು ಒಳಬಿಡದ ಕಾರಣಕ್ಕೆ ಜನರು ಉರಿಬಿಸಿಲಿನಲ್ಲಿಯೇ ಪರದಾಡಿಕೊಂಡು ಒಳಬಂದರು. ಆರಂಭದಲ್ಲಿ ವಿಧಾನ ಪರಿಷತ್ ಸದಸ್ಯ ನವೀನ್ ಮೈಕ್ ಪಡೆದು ಪೊಲೀಸರು ಜನರು ಒಳಬರಲು ತೊಂದರೆ ಮಾಡಬಾರದು ಎಂಬ ಮನವಿ ಮಾಡಿಕೊಂಡರು. ಆದರೂ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ಪ್ರಧಾನಿ ವೇದಿಕೆಗೆ ಬರುವ ಕೆಲಹೊತ್ತಿನ ಮುಂಚೆ ಖುದ್ದು ಗೃಹ ಸಚಿವ ಆರಗಜ್ಞಾನೇಂದ್ರ ಎಲ್ಲ ಪೊಲೀಸರಿಗೂ ಜನರನ್ನು ಒಳಬಿಡುವಂತೆ ಮೌಖಿಕ ಆದೇಶವನ್ನೇ ನೀಡಿದರು.
ಬಿಜೆಪಿ ಕಾರ್ಯಕರ್ತರ ಬೈಕ್ ರ‌್ಯಾಲಿ: ಪ್ರಧಾನಿ ಮೋದಿ ಅಗಮನದ ಹಿನ್ನೆಲೆಯಲ್ಲಿ ಗುಬ್ಬಿ ತಾಲೂಕು ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ ಮನೆಮಾಡಿತ್ತು. ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಬಿಜೆಪಿ ಭಾವುಟಗಳು ಕಿಲೋಮೀಟರ್‌ಗಟ್ಟಲೇ ರಾರಾಜಿಸಿದವು. ಸೋಮವಾರ ಬೆಳಗ್ಗೆ ಗುಬ್ಬಿಯಿಂದ ಎಚ್‌ಎಎಲ್ ಘಟಕದವರೆಗೂ ಬೈಕ್ ರ‌್ಯಾಲಿ ಆಯೋಜಿಸಿದ್ದರು. ಚಿಕ್ಕನಾಯಕನಹಳ್ಳಿ, ತಿಪಟೂರು ತಾಲೂಕುಗಳಿಂದ ಹೆಚ್ಚಿನ ಕಾರ್ಯಕರ್ತರು ಆಗಮಿಸಿ ಅವರ ಶಾಸಕರ ಹೆಸರು ವೇದಿಕೆಯಲ್ಲಿ ಪ್ರಸ್ತಾಪವಾದಾಗ ಶಿಳ್ಳೆಹೊಡೆದು ಖುಷಿಪಟ್ಟರು.
ತುಮಕೂರು ಜಿಲ್ಲೆಯಲ್ಲಿ ಎಚ್‌ಎಎಲ್ ಲಘು ಹೆಲಿಕಾಪ್ಟರ್ ಉತ್ಪಾದನಾ ಘಟಕದ ಆರಂಭದಿಂದ ರಕ್ಷಣಾ ವಲಯದಲ್ಲಿ ಸ್ವಾವಲಂಬಿಗಳಾಗಲು ನೆರವಾಗಲಿದೆ. ತುಮಕೂರು ಭಾರತದ ದೊಡ್ಡ ಔದ್ಯೋಗಿಕ ಕೇಂದ್ರವಾಗಿಯೂ ಗುರುತಿಸಿಕೊಳ್ಳಲಿದೆ. ಯುವಜನರಿಗೆ ಸಾಕಷ್ಟು ಉದ್ಯೋಗಗಳು ಸೃಷ್ಟಿಯಾಗಲಿವೆ. ನರೇಂದ್ರಮೋದಿ ಪಿಎಂ ಲಘು ಸಾಮರ್ಥ್ಯದ ಹೆಲಿಕಾಪ್ಟರ್ ಉತ್ಪಾದನೆಯ ನಂತರ ಮುಂದಿನ ದಿನದಲ್ಲಿ ಹೆವಿ ಡ್ಯೂಟಿ ರಕ್ಷಣಾ ವಲಯದ ಹೆಲಿಕಾಪ್ಟರ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯ ಗುಬ್ಬಿ ಘಟಕಕ್ಕೆ ಇದೆ. ಈ ಘಟಕದ ಸ್ಥಾಪನೆಯಿಂದ 10 ಸಾವಿರ ಜನರಿಗೆ ಉದ್ಯೋಗಾವಕಾಶ ದೊರೆಯುತ್ತದೆ. ಬಸವರಾಜ ಬೊಮ್ಮಾಯಿ ಸಿಎಂ