

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ನವೆಂಬರ್ 17ರಂದು ನಡೆಯಲಿರುವ ಬ್ರಿಕ್ಸ್ ಶೃಂಗದ ವರ್ಚುವಲ್ ಸಭೆಯಲ್ಲಿ ಮುಖಾಮುಖಿಯಾಗಲಿದ್ದಾರೆ. ಪೂರ್ವ ಲಡಾಖ್ ಗಡಿ ಬಿಕ್ಕಟ್ಟಿನ ನಂತರ ಉಭಯ ಮುಖಂಡರ ಮೊದಲ ಭೇಟಿ ಇದಾಗಿದೆ. ಜೂನ್ 15ರಂದು ಗಲ್ವಾನ್ ಕಣಿವೆಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾದ ಘಟನೆಯ ನಂತರದಲ್ಲಿನ ಮೊದಲ ಉನ್ನತ ಮಟ್ಟದ ಸಭೆಯೂ ಇದಾಗಿರುವು ದರಿಂದ ಮಹತ್ವದ ಚರ್ಚೆ ನಡೆಯುವ ನಿರೀಕ್ಷೆ ಇದೆ.
ಹಿಂದಿನ ಭೇಟಿ:
‘ಜಾಗತಿಕ ಸ್ಥಿರತೆ, ಭದ್ರತೆ ಮತ್ತು ನವೀನ ಬೆಳವಣಿಗೆಗಾಗಿ ಬ್ರಿಕ್ಸ್ ಪಾಲುದಾರಿಕೆ’ ಎನ್ನುವುದು 2020ರ ಶೃಂಗಸಭೆಯ ಘೋಷ ವಾಕ್ಯವಾಗಿದೆ. ರಷ್ಯಾ ಈ ಬಾರಿಯ ಬ್ರಿಕ್ಸ್ ಅಧ್ಯಕ್ಷ ದೇಶವಾಗಿದೆ. ಸದಸ್ಯ ದೇಶಗಳ ಜನತೆಯ ಜೀವನ ಮಟ್ಟ ಸುಧಾರಿಸಲು ಸಹಕರಿಸುವುದು ಉದ್ದೇಶವಾಗಿದೆ ಎಂದು ಬ್ರಿಕ್ಸ್ ಹೇಳಿಕೆ ತಿಳಿಸಿದೆ. ಕರೊನಾ ಪಿಡುಗಿನ ಕಾರಣ ವರ್ಚುವಲ್ ಮೂಲಕ ಈ ಶೃಂಗ ಸಭೆ ಆಯೋಜಿಸಲಾಗುತ್ತಿದೆ.
ಐದು ಪ್ರಮುಖ ಆರ್ಥಿಕತೆಗಳ ಕೂಟವೇ ಬ್ರಿಕ್ಸ್. ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಸದಸ್ಯ ರಾಷ್ಟ್ರಗಳಾಗಿವೆ. 2009ರಿಂದಲೂ ಈ ದೇಶಗಳು ವಾರ್ಷಿಕ ಶೃಂಗಸಭೆ ನಡೆಸುತ್ತಿವೆ.
ಪೂರ್ವ ಲಡಾಖ್ನ ಗಡಿ ಸಮಸ್ಯೆ ಉಂಟಾಗಿದ್ದು ಉಭಯ ದೇಶಗಳ ನಡುವಿನ ಬಾಂಧವ್ಯ ಹಳಸಿದೆ. ಈ ಹಿನ್ನೆಲೆಯಲ್ಲಿ ಉಭಯ ದೇಶಗಳ ಮುಖ್ಯಸ್ಥರು ವರ್ಚುವಲ್ ಮುಖಾಮುಖಿ ಆಗಲಿರುವುದು ವಿಶೇಷ ವಿದ್ಯಮಾನವಾಗಲಿದೆ. ಸಮಸ್ಯೆ ಇತ್ಯರ್ಥಕ್ಕೆ ರಾಜತಾಂತ್ರಿಕ ಮತ್ತು ಮಿಲಿಟರಿ ಮಟ್ಟದ ಮತುಕತೆ ಸತತವಾಗಿ ನಡೆಯುತ್ತಿವೆ.