ಮೋದಿ ದೇಶ ಕಂಡ ಉತ್ತಮ ಪ್ರಧಾನಿ

PM Modi
Published on

ನವದೆಹಲಿ: ನರೇಂದ್ರ ಮೋದಿಯವರು ಭಾರತ ಇದುವರೆಗೆ ಕಂಡ ಅತ್ಯುತ್ತಮ ಪ್ರಧಾನಿ ಎಂದು ಇಂಡಿಯಾ ಟುಡೇ ನಡೆಸಿದ ‘ಮೂಡ್ ಆಫ್ ದಿ ನೇಷನ್’ (ಎಂಓಟಿಎನ್) ಸಮೀಕ್ಷೆ ತಿಳಿಸಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದ್ದ 12,000 ಜನರ ಪೈಕಿ ಶೇಕಡ 66 ಮಂದಿ, ಮುಂದಿನ ಅವಧಿಗೂ ಮೋದಿಯವರೇ ಪ್ರಧಾನಿ ಆಗಬೇಕು ಎಂದಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ರೇಸ್​ನಿಂದ ಭಾರಿ ಹಿಂದೆ ಉಳಿದಿದ್ದು ಶೇ. 8 ಮತ ಗಳಿಸಿದ್ದಾರೆ. ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಅವರು ದೇಶದ ಉತ್ತಮ ಮುಖ್ಯಮಂತ್ರಿ ಎಂದು ಸಮೀಕ್ಷೆ ತಿಳಿಸಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇಕಡ 78 ಮಂದಿ, ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯ ನಿರ್ವಹಣೆ ‘ಅತ್ಯುತ್ತಮವಾಗಿದೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಶೇಕಡ 17 ಮಂದಿ ‘ಸರಾಸರಿ’ ಹಾಗೂ ಶೇಕಡ 5 ಮಂದಿ ‘ಕಳಪೆ’ ಎಂದು ಹೇಳಿದ್ದಾರೆ. ಎಂಓಟಿಎನ್ 2017ರ ಜನವರಿಯಲ್ಲಿ ನಡೆಸಿದ್ದ ಸಮೀಕ್ಷೆಯಲ್ಲಿ ಮೋದಿ ಶೇಕಡ 69 ಮತ ಪಡೆದಿದ್ದರು.

ಯಾವ್ಯಾವ ವಿಷಯಗಳಿಗೆ ಜೈಕಾರ?

  • ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ್ದು ಮೋದಿಯವರ ಅದ್ವಿತೀಯ ಸಾಧನೆ. ಇದಕ್ಕೆ ಸಿಕ್ಕಿರುವುದು ಶೇಕಡ 16 ಮತ.
  • ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಸಂಬಂಧ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪು ಕೂಡ ಮೋದಿಗೆ ಜನಪ್ರಿಯತೆ ತಂದಿದೆ. ಈ ಅಂಶಕ್ಕೆ ಅವರಿಗೆ ದೊರಕಿರುವುದು ಶೇಕಡ 13 ಮತ.
  • ಶೇಕಡ 9 ಜನರು ‘ಭ್ರಷ್ಟಾಚಾರರಹಿತ ಆಡಳಿತ ನೀಡಿರುವುದು ದೊಡ್ಡ ಸಾಧನೆ’ ಎಂದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net