ದೇಶವನ್ನು ಸರಿದಾರಿಯತ್ತ ಕೊಂಡೊಯ್ಯುತ್ತಿರುವ ಮೋದಿ

HUN-JUNE-8-2(BJP DOOR TO DOOR CAMPAIGN)
Published on

ಹುಣಸೂರು: ಕರೊನಾ ಹಿಮ್ಮೆಟ್ಟಿಸಲು ಪ್ರಧಾನಿ ಮೋದಿ ಸರ್ಕಾರ ಕೈಗೊಂಡ ಕ್ರಮಗಳನ್ನು ವಿಶ್ವವೇ ಮೆಚ್ಚಿದ್ದು, ದೇಶವನ್ನು ಮೋದಿ ಸರಿದಾರಿಗೆ ಕೊಂಡೊಯ್ಯುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ತಿಳಿಸಿದರು.

ಮೋದಿ ಸರ್ಕಾರದ ಸಾಧನೆಗಳನ್ನೊಳಗೊಂಡ ಕರಪತ್ರವನ್ನು ಮನೆಮನೆಗೆ ತಲುಪಿಸುವ ಕಾರ್ಯಕ್ಕೆ ಪಟ್ಟಣದಲ್ಲಿ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, 6 ವರ್ಷಗಳಿಂದ ಭ್ರಷ್ಟಾಚಾರ ಮುಕ್ತ ಆಡಳಿತದೊಂದಿಗೆ ಆಡಳಿತದಲ್ಲಿ ಶಿಸ್ತಿ ರೂಢಿಸಿಕೊಳ್ಳುವ ಮೂಲಕ ಪ್ರಧಾನಿ ಮೋದಿ ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂದರು.

ವಿಶ್ವಮಾನ್ಯ ಮೋದಿಜೀ: ಸಾಮಾಜಿಕ ಕ್ರಾಂತಿಯ ಹರಿಕಾರ ದೇವರಾಜ ಅರಸರಂತೆ ಮೋದಿ ಕೂಡ ದೇಶದ ಪ್ರಗತಿ ಮತ್ತು ಎಲ್ಲರ ಒಳಿತಿಗಾಗಿ ದುಡಿಯತ್ತಿದ್ದಾರೆ. ದೇಶವನ್ನು ದೋಚಿಕೊಂಡು ಹೋಗಿದ್ದ ನೀರವ್ ಮೋದಿ, ಮಲ್ಯ ಕಾನೂನಿನ ಬಲೆಗೆ ಸಿಲುಕಿದ್ದಾರೆ. ವಿಭಿನ್ನ ಆಡಳಿತ ನೀಡುವ ಮೂಲಕ ಮೋದಿ ಇಡೀ ವಿಶ್ವಕ್ಕೆ ವಿಶ್ವಮಾನ್ಯ ನಾಯಕರಾಗಿ ಹೊರಹೊಮ್ಮಿದ್ದಾರೆ ಎಂದರು.

ಗಾಂಧಿ-ಅಂಬೇಢ್ಕರ್‌ರನ್ನು ನೆನಪಿಸುವ ಮೋದಿ: ಸ್ವಚ್ಛ ಭಾರತ್ ಯೋಜನೆಯ ಲೋಗೋದಲ್ಲಿನ ಗಾಂಧೀಜಿಯವರ ಕನ್ನಡಕ, ಕ್ಯಾಶ್‌ಲೆಸ್ ವಹಿವಾಟಿಗೆ ಆದ್ಯತೆ ನೀಡಿದೆ. ಅಲ್ಲದೆ ಭೀಮ್ ಆ್ಯಪ್ ರೂಪಿಸಿದ ಕೇಂದ್ರ ಸರ್ಕಾರ ಜನಮಾನಸದಲ್ಲಿ ಗಾಂಧಿ ಮತ್ತು ಅಂಬೇಡ್ಕರ್ ಅವರನ್ನು ಜನಮಾನಸದಲ್ಲಿ ಶಾಶ್ವತರನ್ನಾಗಿಸಿದೆ ಎಂದು ಕೊಂಡಾಡಿದರು.

ಪಕ್ಷದ ತಾಲುಕು ಅಧ್ಯಕ್ಷ ನಾಗಣ್ಣಗೌಡ, ಪ್ರಧಾನ ಕಾರ್ಯದರ್ಶಿ ಕಾಂತರಾಜು, ನಗರ ಮಂಡಲ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ, ನಗರಸಭಾ ಸದಸ್ಯ ಹರೀಶ್, ಮುಖಂಡರಾದ ಎ.ಪಿ.ಸ್ವಾಮಿ, ಡಿ.ಕೆ.ಕುನ್ನೇಗೌಡ ಇತರರಿದ್ದರು.

ಐತಿಹಾಸಿಕ ನಿರ್ಣಯ: ಶಾಲಾ-ಕಾಲೇಜುಗಳನ್ನು ಆಗಸ್ಟ್ 15ರ ನಂತರ ಆರಂಭಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ. ಆ ಮೂಲಕ ಕೇಂದ್ರ ಸರ್ಕಾರ ಶೈಕ್ಷಣಿಕ ವರ್ಷದ ಆರಂಭದ ಕುರಿತಾದ ಗೊಂದಲಕ್ಕೆ ತೆರೆ ಎಳೆದಿದೆ ಎಂದರು.

ಎಚ್‌ಡಿಕೆ ಪಕ್ಷದ್ರೋಹಿಯೋ ದೇಶದ್ರೋಹಿಯೋ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆ ಕೊಟ್ಟ ತಮ್ಮೆಲ್ಲರನ್ನು ಪಕ್ಷದ್ರೋಹಿಗಳು ಎಂದಿದ್ದಾರೆ. ಇದೇ ಕುಮಾರಸ್ವಾಮಿ 2006ರಲ್ಲಿ ಧರ್ಮಸಿಂಗ್ ಸರ್ಕಾರವನ್ನು ಉರುಳಿಸಿ ಜೆಡಿಎಸ್ ಅನ್ನು ಇಬ್ಘಾಗ ಮಾಡಿ ಬಿಜೆಪಿಯೊಂದಿಗೆ ಹೋದರಲ್ಲ, ಅದು ಪಕ್ಷದ್ರೋಹವೇ ಅಥವಾ ದೇಶದ್ರೋಹವೇ ಎಂದು ಎಚ್‌ಡಿಕೆಗೆ ಕುಟುಕಿದರು.\

ನೋ ಕಾಮೆಂಟ್ಸ್: ಮಾಜಿ ಸಚಿವ ಸಾ.ರಾ.ಮಹೇಶ್ ತಮ್ಮ ವಿರುದ್ಧ ಮಾಡಿರುವ ಆರೋಪಗಳ ಕುರಿತು ಪ್ರತಿಕ್ರಿಯೆ ಕೇಳಿದಾಗ ನೋ ಕಾಮೆಂಟ್ಸ್. ಕೊಚ್ಚೆಗೆ ಕಲ್ಲುಹಾಕಿ ನನ್ನ ಶ್ವೇತವಸ್ತ್ರವನ್ನು ಕಪ್ಪು ಮಾಡಿಕೊಳ್ಳುವುದಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net