ಮೋದಿ ಸರ್ಕಾರದ ಏಕೈಕ ಗುರಿ ಅಧಿಕಾರದಲ್ಲಿರುವುದೇ ಹೊರತು, ಸಾರ್ವಜನಿಕರ ಕಲ್ಯಾಣವಲ್ಲ: ಪ್ರಿಯಾಂಕ ಗಾಂಧಿ

Priyanka Gandhi
Published on

ಜೈಪುರ: ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ಏಕೈಕ ಗುರಿ ಅಧಿಕಾರದಲ್ಲಿ ಉಳಿಯುವುದಷ್ಟೇ ಹೊರತು ಜನರ ಕಲ್ಯಾಣವಲ್ಲ ಎಂದು ಎಐಸಿಸಿ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ವಾಗ್ದಾಳಿ ನಡೆಸಿದ್ದಾರೆ.

ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜಸ್ಥಾನದ ದೌಸಾ ಜಿಲ್ಲೆಯ ಸಿಕ್ರೈನಲ್ಲಿ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಿಯಾಂಕ ಗಾಂಧಿ, ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವು ತನ್ನ ಕೆಲವೇ ಕೆಲವು ಸ್ನೇಹಿತರ ಹಿತಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಬಿಜೆಪಿಯವರು ರಾಜಸ್ಥಾನದಲ್ಲಿ ಅಧಿಕಾರದಲ್ಲಿದ್ದ ಸಮಯದಲ್ಲಿ ಜನರ ಯೋಗಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ಎಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅವರ ಮುಖ್ಯ ಉದ್ದೇಶ ಜನರ ಕಲ್ಯಾಣವಲ್ಲ, ಅಧಿಕಾರದಲ್ಲಿರುವುದಷ್ಟೇ ಅವರ ಪರಮ ಗುರಿ. ಬಡವರ ಜೇಬಿನಿಂದ ಹಣವನ್ನು ಕದ್ದು ಅದನ್ನು ದೊಡ್ಡ ದೊಡ್ಡ ಉದ್ಯಮಿಗಳ ಕಿಸೆಗೆ ಹಾಕುವುದು ಬಿಜೆಪಿಯವರ ದೊಡ್ಡ ನೀತಿಯಾಗಿದೆ.

ಸೇವೆ ಮತ್ತು ಅನುಕಂಪದಿಂದ ನಾವು ರಾಜಕೀಯದಲ್ಲಿ ಸಾರ್ವಜನಿಕರ ಕಲ್ಯಾಣ ಸಾಧಿಸಲು ಸಾಧ್ಯ. ಆದರೆ, ಬಿಜೆಪಿಯವರು ಅಭಿವೃದ್ಧಿಯ ಬಗ್ಗೆ ಮಾತನಾಡುವ ಬದಲು ಜಾತಿ ಹಾಗೂ ಧರ್ಮದ ವಿಚಾರವನ್ನು ಪ್ರಸ್ತಾಪಿಸುತ್ತಾರೆ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ನಾಯಕ ಎನ್ನಿಸಿಕೊಂಡವನು ವರ್ತಮಾನ ಹಾಗೂ ಭವಿಷ್ಯತ್​ ಕಾಲದ ಬಗ್ಗೆ ಮಾತನಾಡುತ್ತಾನೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪಂಚರಾಜ್ಯ ಚುನಾವಣೆ ಮುಂಬರುವ ಲೋಕಸಭೆ ಚುನಾವಣೆಗೆ ಸೆಮಿಫಿನಾಲೆ ಎಂದೇ ಬಿಂಬಿತವಾಗಿದೆ. ನವೆಂಬರ್ 25ರಂದು ರಾಜಸ್ಥಾನದಲ್ಲಿ ಮತದಾನ ನಡೆಯಲಿದ್ದು, ಡಿಸೆಂಬರ್ 3ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net