ಟ್ರಂಪ್ ಸುಳ್ಳು ಹೇಳ್ತಿದ್ದಾರೆ ಎಂದು ಮೋದಿ ಹೇಳಲು ಸಾಧ್ಯವಿಲ್ಲ; ರಾಹುಲ್ ಗಾಂಧಿ | Rahul Gandhi

Rahul Gandhi 3
Published on

Rahul Gandhi: ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಜಾರಿಗೆ ತಂದಿದ್ದು ನಾನು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳ್ಳು ಹೇಳ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಲು ಸಾಧ್ಯವಿಲ್ಲ. ಅವರು ಹಾಗೇ ಹೇಳಿದ್ರೆ, ಟ್ರಂಪ್ ಸತ್ಯವನ್ನು ಬಯಲು ಮಾಡುತ್ತಾರೆ ಎಂದು ಬುಧವಾರ(ಜು.30) ರಾಹುಲ್ ಗಾಂಧಿ ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿದ್ದೆ, ನನ್ನಿಂದಾಗಿಯೇ ಯುದ್ಧ ನಿಂತಿತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪದೇ ಪದೇ ಹೇಳುತ್ತಿರುವ ಹೇಳಿಕೆಗಳನ್ನು ಸಂಸತ್ತಿನಲ್ಲಿ ನಿರಾಕರಿಸುವಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಂಗಳವಾರ ಸವಾಲು ಹಾಕಿದ್ದರು.

ಈ ಬಗ್ಗೆ ಮಂಗಳವಾರ(ಜು.29) ಸಂಜೆ ಮಾತನಾಡಿದ್ದ ಪ್ರಧಾನಿ ಮೋದಿ, "ಯಾವುದೇ ದೇಶದ ನಾಯಕರು ಭಾರತವನ್ನು ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಿಲ್ಲಿಸುವಂತೆ ಕೇಳಲಿಲ್ಲ. ಇಡೀ ದೇಶದ 140 ಕೋಟಿ ಜನ ಕಾರ್ಯಾಚರಣೆಗೆ ಬೆಂಬಲ ನೀಡಿದ್ದರೂ, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ರಾಷ್ಟ್ರದ ಸೈನಿಕರ ಶೌರ್ಯದ ಹಿಂದೆ ನಿಲ್ಲಲು ಸಾಧ್ಯವಾಗಲಿಲ್ಲ" ಎಂದು ವಿಷಾದಿಸಿದ್ದರು.

ಈ ಕುರಿತು ಬುಧವಾರ ಸಂಸತ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ,"ಟ್ರಂಪ್ ಸುಳ್ಳು ಹೇಳುತ್ತಿದ್ದಾರೆ ಎಂದು ನರೇಂದ್ರ ಮೋದಿ ಸ್ಪಷ್ಟವಾಗಿ ಹೇಳಿಲ್ಲ. ಟ್ರಂಪ್ 29 ಬಾರಿ ಕದನ ವಿರಾಮ ತಂದಿರುವುದಾಗಿ ಹೇಳಿದ್ದಾರೆ, ಆದರೆ ನರೇಂದ್ರ ಮೋದಿ ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ" ಎಂದು ಹೇಳಿದರು.

ಈ ವಿಚಾರ ಸ್ಪಷ್ಟವಾಗಿದೆ. ಟ್ರಂಪ್ ಸುಳ್ಳು ಹೇಳ್ತಿದ್ದಾರೆ ಎಂದು ಪ್ರಧಾನಿ ಎಲ್ಲಿಯೂ ಹೇಳಲಿಲ್ಲ. ಏನಾಗಿದೆ ಎಂದು ಎಲ್ಲರಿಗೂ ತಿಳಿದಿದೆ. ಅದನ್ನು ಹೇಳಲು ಸಾಧ್ಯವಿಲ್ಲ, ಅದು ವಾಸ್ತವ. ಒಂದು ವೇಳೆ ಅವರು ಸುಳ್ಳು ಹೇಳ್ತಿದ್ದಾರೆ ಎಂದು ಪ್ರಧಾನಿ ಹೇಳಿದ್ರೆ, ಟ್ರಂಪ್ ಬಹಿರಂಗವಾಗಿ ಸತ್ಯವನ್ನು ಹೇಳ್ತಾರೆ ಎಂಬ ಭಯದಿಂದ ಪ್ರಧಾನಿಗೆ ಹೇಳಲು ಸಾಧ್ಯವಾಗುತ್ತಿಲ್ಲ ಎಂದು ರಾಹುಲ್ ತಿಳಿಸಿದರು.

ಭಾರತ-ಅಮೆರಿಕಾ ನಡುವೆ ಯಾವ ರೀತಿ ವ್ಯಾಪಾರ ಒಪ್ಪಂದ ನಡೆಯುತ್ತಿದೆ ಎಂದು ನೀವೇ ನೋಡ್ತಿದ್ದೀರಿ. ವ್ಯಾಪಾರ ಒಪ್ಪಂದಕ್ಕಾಗಿ ಭಾರತ ಸರ್ಕಾರದ ಮೇಲೆ ಒತ್ತಡ ಹೇರಲು ಟ್ರಂಪ್ ಈ ಹೇಳಿಕೆಗಳನ್ನು ನೀಡುತ್ತಿದ್ದಾರೆ ಹೇಳಿದರು.

ಮೇ 10ರಂದು ವಾಷಿಂಗ್ಟನ್ ಮಧ್ಯಸ್ಥಿಕೆಯಿಂದ ಭಾರತ-ಪಾಕ್ ನಡುವೆ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಡೊನಾಲ್ಡ್ ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಅಲ್ಲಿಂದ ಟ್ರಂಪ್ ಪದೇ ಪದೇ ನಾನೇ ಯುದ್ಧ ನಿಲ್ಲಿಸಿದ್ದು ಹಲವಾರು ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ.

ಆದಾಗ್ಯೂ, ಪಾಕಿಸ್ತಾನದೊಂದಿಗಿನ ಯುದ್ಧವನ್ನು ನಿಲ್ಲಿಸುವ ಬಗ್ಗೆ ಎರಡೂ ಸೇನೆಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ (ಡಿಜಿಎಂಒ) ನಡುವಿನ ನೇರ ಮಾತುಕತೆಯ ನಂತರ ಕದನ ವಿರಾಮವನ್ನು ಘೋಷಿಸಲಾಗಿದೆ ಎಂದು ಭಾರತ ಸರ್ಕಾರ ಹೇಳುತ್ತಾ ಬಂದಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net