

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜೂನ್ 25, 2023 ರಂದು ಈಜಿಪ್ಟ್ ದೇಶದ ತಮ್ಮ ಮೊದಲ ಭೇಟಿಯನ್ನು ಮುಕ್ತಾಯಗೊಳಿಸಿದ ನಂತರ ಭಾರತಕ್ಕೆ ಹೊರಟರು. ಅಲ್ಲಿ ಅವರು ಅಧ್ಯಕ್ಷ ಅಬ್ದೆಲ್ ಫತಾಹ್ ಎಲ್-ಸಿಸಿ ಅವರೊಂದಿಗೆ ಮಾತುಕತೆ ನಡೆಸಿದ್ದು ನಂತರ ಅವರು ಈಜಿಪ್ಟ್ ದೇಶದ ಅತ್ಯುನ್ನತ ಗೌರವ 'ಆರ್ಡರ್ ಆಫ್ ದಿ ನೈಲ್' ಪ್ರಶಸ್ತಿ ಸ್ವೀಕರಿಸಿದರು.
ಭಾರತಕ್ಕೆ ವಾಪಸ್ಸಾದ ಪ್ರಧಾನಿ ಮೋದಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಇತರ ಪಕ್ಷದ ಹಿರಿಯ ನಾಯಕರು ದೆಹಲಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.
ಅಧ್ಯಕ್ಷ ಜೋ ಬಿಡನ್ ಆಹ್ವಾನದ ಮೇರೆಗೆ ಜೂನ್ 24ರಂದು ಅಮೆರಿಕಕ್ಕೆ ಉನ್ನತ ಮಟ್ಟದ ಭೇಟಿಯನ್ನು ಮುಗಿಸಿ ಕೈರೋಗೆ ಆಗಮಿಸಿದ್ದ ಪ್ರಧಾನಿಯನ್ನು ಈಜಿಪ್ಟ್ ಪ್ರಧಾನಿ ಮುಸ್ತಫಾ ಮಡ್ಬೌಲಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.
“ಈಜಿಪ್ಟ್ ದೇಶದ ನನ್ನ ಭೇಟಿ ಐತಿಹಾಸಿಕವಾಗಿತ್ತು. ಇದು ಭಾರತ-ಈಜಿಪ್ಟ್ ಬಾಂಧವ್ಯಕ್ಕೆ ಹೊಸ ಹುರುಪು ತುಂಬಲಿದ್ದು ನಮ್ಮ ದೇಶಗಳ ಜನರಿಗೆ ಲಾಭ ತರಲಿದೆ. ನಾನು ಅಧ್ಯಕ್ಷ @AlsisiOfficial, ಸರ್ಕಾರ ಮತ್ತು ಈಜಿಪ್ಟ್ ಜನರ ಪ್ರೀತಿಗೆ ಧನ್ಯವಾದ ಅರ್ಪಿಸುತ್ತೇನೆ” ಎಂದು ಪ್ರಧಾನಿ ಮೋದಿ ಟ್ವೀಟ್ ಕೂಡ ಮಾಡಿದ್ದಾರೆ. (ಏಜೆನ್ಸೀಸ್)