

ವಿಜಯವಾಣಿ ಸುದ್ದಿಜಾಲ ಹುಣಸೂರು
ತಾಲೂಕು ಬಿಜೆಪಿ ಘಟಕದಿಂದ ತಾಲೂಕಿನ ಕರೊನಾ ಸೋಂಕಿನ ವಿರುದ್ಧ ಹೋರಾಡಿದ ಸೇನಾನಿಗಳಿಗೆ ನಾಗರಿಕ ಸನ್ಮಾನ ಆಯೋಜಿಸಲಾಗಿತ್ತು.
ಪಟ್ಟಣದ ಅಂಬೇಢ್ಕರ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ತಾಲೂಕಿನ ಉಪವಿಭಾಗಾಧಿಕಾರಿಯನ್ನೊಳಗೊಂಡು ವಿವಿಧ ಇಲಾಖೆಗಳ 20ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಅಂಬೇಡ್ಕರ್ ಭವನಕ್ಕೆ ಸೇನಾನಿಗಳನ್ನು ಪುಷ್ಪವೃಷ್ಟಿಯೊಂದಿಗೆ ಕೆಂಪುಹಾಸಿನ ಸ್ವಾಗತದೊಂದಿಗೆ ಭವನಕ್ಕೆ ಕರೆತರಲಾಯಿತು.
ಮಾಜಿ ಸಚಿವ ಎಚ್.ವಿಶ್ವನಾಥ್ ಸೇನಾನಿಗಳನ್ನು ಭವನದ ದ್ವಾರದಲ್ಲಿ ಸ್ವಾಗತಿಸಿದರು. ಬಿಜೆಪಿ ಕಾರ್ಯಕರ್ತರು ಭಾರತಾಂಬೆಗೆ ಜಯ ಘೋಷ ಮೊಳಗಿಸಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಜೈಕಾರ ಹಾಕಿದರು.
ಪಾಠ ಕಲಿಸಿದೆ: ನಂತರ ವೇದಿಕೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಸಚಿವ ಎಚ್.ವಿಶ್ವನಾಥ್, ವಿಶ್ವದ ಎಲ್ಲ ದೇಶಗಳ ಶತಮಾನದ ಹೆಮ್ಮಾರಿ ಕರೊನಾ ವೈರಸ್ ಮನುಷ್ಯನಿಗೆ ಜೀವನದಲ್ಲಿ ಹಲವು ಪಾಠಗಳನ್ನು ಕಲಿಸಿದೆ. ಜೀವನಶೈಲಿ ಬದಲಿಸಿಕೊಳ್ಳುವಂತೆ ಎಚ್ಚರಿಸಿದೆ. ಪ್ರಧಾನಿ ಮೋದಿ ಮಾತಿನಂತೆ ಜೀವವಿದ್ದರೆ ಮುಂದೆ ಜೀವನ ಇರುತ್ತದೆ. ದೇಶದ ನಾಗರಿಕರ ಜೀವ ಉಳಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಮಾ.23ರಿಂದ ಆರಂಭಗೊಂಡು ಚಪ್ಪಾಳೆ ತಟ್ಟುವ, ದೀಪ ಹಚ್ಚುವುದು ಮಾತ್ರವಲ್ಲದೆ ಸತತವಾಗಿ ಲಾಕ್‌ಡೌನ್ 4.0ವರೆಗೂ ಅವರು ತಿಳಿಸಿದಂತೆ ದೇಶ ನಡೆದುಕೊಂಡಿದೆ. ಜೀವ ಉಳಿಸುವ ಕಾರ್ಯವನ್ನು ಸರ್ಕಾರ ಕೈಗೆತ್ತಿಕೊಂಡಾಗ ಜನತೆ ಸ್ಪಂದಿಸಿದ್ದಾರೆ. ಲಾಕ್‌ಡೌನ್ ಮೂಲಕ ಜೀವನಜ್ಯೋತಿಯನ್ನು ಮೋದಿ ಬೆಳಗಿಸಿದ್ದಾರೆ ಎಂದು ಹರ್ಷವ್ಯಕ್ತಪಡಿಸಿದರು.
ಇಲಾಖೆಗಳಿಗೆ ಶಹಬ್ಬಾಸ್‌ಗಿರಿ:
ತಾಲೂಕಿನ ಪೊಲೀಸ್, ಕಂದಾಯ, ಆರೋಗ್ಯ ಇಲಾಖೆ ಸೇರಿ ಸಂಬಂಧಪಟ್ಟ ಎಲ್ಲ ಇಲಾಖೆಗಳೂ ಕರೊನಾ ತೊಲಗಿಸುವಲ್ಲಿ ಅವಿರತವಾಗಿ ಶ್ರಮಿಸಿವೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಜನರ ಆರೋಗ್ಯ ಕಾಪಾಡಲು ಹಗಲಿರುಳು ಶ್ರಮಿಸಿದ್ದಾರೆ. ಕಂದಾಯ ಇಲಾಖೆ ಇಡೀ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಮಾಧ್ಯಮದವರು ವಿಷಯವನ್ನು ಜನರಿಗೆ ತಲುಪಿಸಿ ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಎಲ್ಲ ಇಲಾಖೆಗಳ ಉತ್ತಮ ಕಾರ್ಯವನ್ನು ಗುರುತಿಸುವ ಜವಾಬ್ದಾರಿಯನ್ನು ಮನಗಂಡು ನಾಗರಿಕ ಸನ್ಮಾನ ಮಾಡಲಾಗುತ್ತಿದೆ. ಈ ಸನ್ಮಾನಕ್ಕೆ ಇವರೆಲ್ಲರು ಅರ್ಹರಾಗಿದ್ದಾರೆ ಎಂದರು. ಉಪವಿಭಾಗಾಧಿಕಾರಿ ಬಿ.ಎನ್.ವೀಣಾ, ತಹಸೀಲ್ದಾರ್ ಐ.ಇ.ಬಸವರಾಜು, ಡಿವೈಎಸ್‌ಪಿ ಕೆ.ಎಸ್.ಸುಂದರರಾಜ್, ತಾಲೂಕು ಆರೋಗ್ಯಾಧಿಕಾರಿ ಡಾ.ಕೀರ್ತಿಕುಮಾರ್ ಅನುಭವ ಹಂಚಿಕೊಂಡರು. ಬಿಜೆಪಿ ತಾಲೂಕು ಅಧ್ಯಕ್ಷ ನಾಗಣ್ಣಗೌಡ, ನಗರಾಧ್ಯಕ್ಷ ಗಣೇಶ್‌ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಹರವೆ ರವಿಕುಮಾರ್, ಮುಖಂಡರಾದ ಯುವಬ್ರಿಗೇಡ್ ಚೇತನ್‌ಕುಮಾರ್, ಜಿಲ್ಲಾ ಪ್ರಧಾನಕಾರ್ಯದರ್ಶಿ ಬಿ.ಎಸ್.ಯೋಗಾನಂದಕುಮಾರ್, ಸತ್ಯಪ್ಪ, ಸಿ.ಟಿ.ರಾಜಣ್ಣ., ಹನಗೋಡು ಮಂಜುನಾಥ್, ಗೋವಿಂದನಾಯ್ಕ, ವಿ.ಎನ್.ದಾಸ್ ಇತರರು ಇದ್ದರು.ಉಪವಿಭಾಗಾಧಿಕಾರಿ ಬಿ.ಎನ್. ವೀಣಾ, ತಹಸೀಲ್ದಾರ್ ಐ.ಇ.ಬಸವರಾಜು, ಇಒ ಗಿರೀಶ್, ಡಾ.ಕೀರ್ತಿಕುಮಾರ್, ಆಯುಷ್ ವೈದ್ಯ ಡಾ.ಅನಂತಶಯನ, ವೃತ್ತನಿರೀಕ್ಷಕ ಕೆ.ಸಿ.ಪೂವಯ್ಯ, ಮೂರು ಠಾಣೆಗಳ ಪಿಎಸ್‌ಐಗಳು, ಬಿಇಒ ಎಸ್.ಪಿ.ನಾಗರಾಜ್, ಆಶಾ ಕಾರ್ಯಕರ್ತೆಯರ ಸಂಘದ ಮೇಲ್ವಿಚಾರಕಿ ಸವಿತಾ, ದಾದಿಯರಾದ ರಾಧಾ, ಲಕ್ಷ್ಮೀ, ಮಾಲಿನಿ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶಿವಕುಮಾರ್.ವಿ.ರಾವ್, ಆರ್‌ಸಿಎನ್ ಕೇಬಲ್ ಮಾಲೀಕ ವಿ.ಪಿ.ಸಾಯಿನಾಥ್, ಸೆಸ್ಕ್ ಎಇಇ ಸಿದ್ದಪ್ಪ, ನಗರಸಭೆ ಪರಿಸರ ಮಾಲಿನ್ಯ ವಿಭಾಗದ ಇಂಜಿನಿಯರ್ ಎಲ್.ರೂಪಾ, ಪೌರಕಾರ್ಮಿಕರ ಪರವಾಗಿ ಆರೋಗ್ಯ ನಿರೀಕ್ಷಕ ಸತೀಶ್ ಅವರನ್ನು ಸನ್ಮಾನಿಸಲಾಯಿತು.