ಯೂಕ್ರೇನ್​-ರಷ್ಯಾ ಯುದ್ಧದಲ್ಲಿ ಮಡಿದ ಮಕ್ಕಳನ್ನು ನೆನದು ಪ್ರಧಾನಿ ಮೋದಿ ಭಾವುಕ

Untitled-design-2024-08-23T171257.620
Published on

ಕೈವ್​​: ಯೂಕ್ರೇನ್​​ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ(ಆಗಸ್ಟ್​​ 17) ರಷ್ಯಾ ಮತ್ತು ಯೂಕ್ರೇನ್​​ ಯುದ್ಧದಲ್ಲಿ ಮಡಿದ ಮಕ್ಕಳಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಈ ಸಮಯದಲ್ಲಿ ಯೂಕ್ರೇನ್​​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕೂಡ ಉಪಸ್ಥಿತರಿದ್ದರು.

ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ನಾನು ಕೈವ್​ನಲ್ಲಿ ಹುತಾತ್ಮರಾದ ಮಕ್ಕಳಿಗೆ ಗೌರವ ಸಲ್ಲಿಸಿದ್ದೇವೆ. ಯುದ್ಧವು ಚಿಕ್ಕ ಮಕ್ಕಳಿಗೆ ವಿನಾಶಕಾರಿಯಾಗಿದೆ. ಪ್ರಾಣ ಕಳೆದುಕೊಂಡ ಮಕ್ಕಳ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ನಾನು ರಷ್ಯಾದ ಆಕ್ರಮಣದಲ್ಲಿ ಪ್ರಾಣ ಕಳೆದುಕೊಂಡ ಮಕ್ಕಳಿಗೆ ಗೌರವ ಸಲ್ಲಿಸಿದ್ದೇವೆ. ಪ್ರತಿಯೊಂದು ದೇಶದ ಮಕ್ಕಳು ಸುರಕ್ಷಿತವಾಗಿ ಬದುಕಲು ಅರ್ಹರಾಗಿದ್ದಾರೆ. ನಾವು ಅದನ್ನು ಸಾಧ್ಯವಾಗಿಸಬೇಕು ಎಂದು ಝೆಲೆನ್ಸ್ಕಿಅವರು ಸಾಮಾಜಿಕ ಜಾಲತಾಣ ಎಕ್ಸ್​​ನಲ್ಲಿ ಮಾಡಿರುವ ಪೋಸ್ಟ್​​ನಲ್ಲಿ ಬರೆದಿದ್ದಾರೆ.

ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು, ಕೈವ್‌ನ ಓಯಸಿಸ್ ಆಫ್ ಪೀಸ್ ಪಾರ್ಕ್‌ನಲ್ಲಿರುವ ಮಹಾತ್ಮ ಗಾಂಧಿಯವರ ಪ್ರತಿಮೆಗೆ ನಮನ ಸಲ್ಲಿಸಿದರು. ಗಾಂಧೀಜಿ ಅವರ ಆದರ್ಶಗಳು ಸಾರ್ವತ್ರಿಕವಾಗಿವೆ ಮತ್ತು ಲಕ್ಷಾಂತರ ಜನರಿಗೆ ಭರವಸೆ ನೀಡುತ್ತವೆ. ಅವರು ಮಾನವೀಯತೆಗೆ ತೋರಿದ ಮಾರ್ಗದಲ್ಲಿ ನಾವೆಲ್ಲರೂ ನಡೆಯೋಣ ಎಂದು ಹೇಳಿದರು. ಯೂಕ್ರೇನ್​​ಗೆ ತೆರಳುವ ಮುನ್ನ, ರಷ್ಯಾ ಮತ್ತು ಯೂಕ್ರೇನ್​ ಯುದ್ಧದ ಶಾಂತಿಯುತ ಪರಿಹಾರದ ಬಗ್ಗೆ ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net