

ಕೋಲಾರ: ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ನಾಗಮಂಗಲ ಗಣೇಶೋತ್ಸವ ಗಲಾಟೆಯ ಬಗ್ಗೆ ಹರಿಯಾಣ ಚುನಾವಣಾ ಪ್ರಚಾರದಲ್ಲಿ ಪ್ರಸ್ತಾಪಿಸಿರುವುದು ಉರಿಯೋ ಬೆಂಕಿಗೆ ತುಪ್ಪ ಸುರಿದಂತಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗಮಂಗಲ ಪ್ರಕರಣ ಸೂಕ್ಷ್ಮವಾಗಿದ್ದು, ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ತಪ್ಪು ಮಾಡಿದವರು ಕಾನೂನಿನಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಹಿಂದು ಆಗಲಿ, ಮುಸ್ಲಿಂ ಆಗಲಿ ಸೌಹಾರ್ದಯುತವಾಗಿರಬೇಕು. ಕ್ಷುಲ್ಲಕ ಕಾರಣಗಳಿಗೆ ಜಗಳವಾಡುವುದು ಸರಿಯಲ್ಲ. ಇನ್ನು ಸೂಕ್ಷ್ಮ ವಿಚಾರಗಳ ಬಗ್ಗೆ ಮಾತನಾಡುವಾಗ ಪ್ರಧಾನಿ ಸೇರಿ ಎಲ್ಲರೂ ಜವಾಬ್ದಾರಿ ತೋರಬೇಕು ಎಂದರು.
ಇನ್ನು ಶಾಸಕ ಮುನಿರತ್ನ ಧ್ವನಿ ಪರಿಶೀಲನೆ ಆಗಬೇಕು ಎಂಬ ಆರ್.ಅಶೋಕ್ ಹೇಳಿಕೆಗೆ ಕಿಡಿಕಾರಿದ ಬೈರತಿ ಸುರೇಶ್, ಜೀವನದಲ್ಲಿ ಎಂದೂ ಆರ್.ಅಶೋಕ ಸತ್ಯ ಮಾತನಾಡಿಲ್ಲ. ಬಿಜೆಪಿ ಮಾಡುವುದು ಎಲ್ಲ ಸರಿ, ಕಾಂಗ್ರೆಸ್ ಮಾಡುವುದು ತಪ್ಪು ಎಂಬುದು ಅವರ ನಿರ್ಧಾರ ಎಂದು ವ್ಯಂಗ್ಯವಾಡಿದರು.
ಮುಡಾ ಪ್ರಕರಣ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಸಿಎಂ ಸಿದ್ದರಾಮಯ್ಯ ಅವರ ಆಸ್ತಿ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಆಸ್ತಿ ತುಲನೆ ಮಾಡಲಿ. ಸಿದ್ದರಾಮಯ್ಯ ಅವರ ಆಸ್ತಿ ಕುಮಾಸ್ವಾಮಿಗಿಂತಲೂ ಕಡಿಮೆ ಇದೆ ಎಂದರು.
ರಾಜ್ಯದಲ್ಲಿ ಹಾಲಿನ ದರ ಹೆಚ್ಚಳ ಪ್ರಸ್ತಾಪಕ್ಕೆ ಪ್ರತಿಕ್ರಿಯೆ ನೀಡಿದ ಸುರೇಶ್, ನೆರೆಯ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಹಾಲಿನ ದರ ಕಡಿಮೆಯಿದೆ. ಹಾಲಿನ ದರ ಏರಿಕೆ ಬಗ್ಗೆ ಸಿಎಂ ಪರಿಶೀಲನೆ ಮಾಡಿ ಕ್ರಮ ವಹಿಸಲಿದ್ದಾರೆ ಎಂದರು.