ನಾಲೆಗಳ ಆಧುನೀಕರಣ ನನ್ನ ಗುರಿ

03M.D.R.5
ಮದ್ದೂರು ಪಟ್ಟಣದ ಐ ಬಿ ವೃತ್ತದ ಬಳಿ ಕಾವೇರಿ ನೀರಾವರಿ ನಿಗಮದ ವಿಭಾಗ ಕಚೇರಿ 2 ಅನ್ನು ಶಾಸಕ ಕೆ.ಎಂ.ಉದಯ್ ಉದ್ಘಾಟಿಸಿದರು. ದಿನೇಶ್‌ಗೂಳಿಗೌಡ, ಕೋಕಿಲಾ ಅರುಣ್, ಪ್ರಸನ್ನ, ಪಿ.ಸಂದರ್ಶ, ಹರೀಶ್, ಬಸವರಾಜು ಇದ್ದರು.
Published on

ಮದ್ದೂರು : ಮದ್ದೂರಿಗೆ ಕಾವೇರಿ ನೀರಾವರಿ ನಿಗಮದ ವಿಭಾಗ ಕಚೇರಿ 2 ಅನ್ನು ತರಲು ಬಹಳಷ್ಟು ಶ್ರಮಿಸಿದ್ದೇನೆ. ಅದರ ಫಲವಾಗಿಯೇ ಕಚೇರಿ ಉದ್ಘಾಟನೆಯಾಗಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.

ಪಟ್ಟಣದ ಐಬಿ ವೃತ್ತದ ಬಳಿ ಶುಕ್ರವಾರ ಸಂಜೆ ಕಾವೇರಿ ನೀರಾವರಿ ನಿಗಮದ ವಿಭಾಗ ಕಚೇರಿ 2 ಅನ್ನು ಉದ್ಘಾಟಿಸಿದ ಬಳಿಕ ನಡೆದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ನಾನು ಶಾಸಕನಾದ ಬಳಿಕ ಕೊನೇ ಭಾಗದ ರೈತರ ಕೋರಿಕೆ ಹಾಗೂ ಒತ್ತಾಸೆಯ ಮೇರೆಗೆ ನೀರಾವರಿ ಇಲಾಖೆಯ ಸಚಿವರು, ಉಪಮುಖ್ಯಮಂತ್ರಿಗಳೂ ಆದ ಡಿ.ಕೆ.ಶಿವಕುಮಾರ್ ರವರೊಂದಿಗೆ ಹಲವಾರು ಬಾರಿ ಚರ್ಚಿಸಿ 15 ತಿಂಗಳು ತಿರುಗಿ ಬೇಡಿಕೆಯಿಟ್ಟು ಶ್ರಮವಹಿಸಿದ್ದರಿಂದ ವಿಭಾಗ ಕಚೇರಿ ದೊರಕಿದೆ ಎಂದರು.

ಮುಂದಿನ ದಿನಗಳಲ್ಲಿ ಹಲವು ನೀರಾವರಿ ಯೋಜನೆಗಳ ಮೂಲಕ ನಾಲೆಗಳ ಆಧುನೀಕರಣ ಮಾಡುವುದು ನನ್ನ ಗುರಿ. ಈಗಾಗಲೇ ನೂರಾರು ಕೋಟಿ ರೂ. ವೆಚ್ಚದಲ್ಲಿ ಕೆರೆಗಳ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಯೋಜನೆಗಳನ್ನು ಮಾಡುವ ಆಶಯ ಹೊಂದಿದ್ದೇನೆ ಎಂದರು.

ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳೀಗೌಡ ಮಾತನಾಡಿ, ಈ ಹಿಂದೆ ಹಲವಾರು ಉಪಕಚೇರಿಯನ್ನು ತಾಲೂಕಿಗೆ ತರಲು ಪ್ರಯತ್ನಿಸಿದ್ದರೂ ಅದು ಪ್ರಯೋಜನವಾಗಿರಲಿಲ್ಲ, ಆದರೆ ಶಾಸಕ ಕೆ.ಎಂ.ಉದಯ್ ಅವರು ಸರ್ಕಾರದೊಂದಿಗೆ ಚರ್ಚಿಸಿ ಉಪಕಚೇರಿಯನ್ನು ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪುರಸಭಾ ಅಧ್ಯಕ್ಷೆ ಕೋಕಿಲಾ ಅರುಣ್, ಉಪಾಧ್ಯಕ್ಷ ಟಿ.ಆರ್.ಪ್ರಸನ್ನಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಮನ್ ಮುಲ್ ನಿರ್ದೇಶಕ ಹರೀಶ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಬಸವರಾಜು, ನೀರಾವರಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್‌ಗಳಾದ ಜಯಂತ್, ನಂಜುಂಡೇಗೌಡ, ಶೇಖರ್, ಎಇಇ ನಾಗರಾಜು ಹಾಗೂ ಅಜಯ್, ಪ್ರಶಾಂತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net