ಹಿರಿಯರನ್ನೂ ಕಾಪಾಡಬಲ್ಲ ಮಾಡೆರ್ನಾ ಕರೊನಾ ಲಸಿಕೆ; ಆರಂಭಿಕ ಪ್ರಯೋಗದಲ್ಲಿ ಯಶಸ್ಸು

Moderna- vaccine
Published on

ನವದೆಹಲಿ: ಕರೊನಾ ಲಸಿಕೆ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದ ಮಾಡೆರ್ನಾ ಕಂಪನಿ ಮತ್ತೊಂದು ಶುಭ ಸುದ್ದಿ ನೀಡಿದೆ. ತಾನು ಅಭಿವೃದ್ಧಿಪಡಿಸುತ್ತಿರುವ ಲಸಿಕೆ ಹಿರಿಯರನ್ನು ಕೋವಿಡ್​ ಸೋಂಕಿನಿಂದ ಕಾಪಾಡಬಲ್ಲುದು ಎಂಬುದು ಫಲಿತಾಂಶದಲ್ಲಿ ಸಾಬೀತಾಗಿದೆ ಎಂದು ಹೇಳಿದೆ.

ಕರೊನಾ ವೈರಸ್​ನಲ್ಲಿರುವ ಕೆಲ ಲಕ್ಷಣಗಳನ್ನು ಈ ಲಸಿಕೆ ದೇಹದಲ್ಲಿ ಉಂಟುಮಾಡುತ್ತದೆ. ದೇಹದಲ್ಲಿ ಪ್ರತಿರೋಧ ಶಕ್ತಿ ಉಂಟುಮಾಡುವ ವ್ಯವಸ್ಥೆ ಇದನ್ನು ಗುರುತಿಸುತ್ತದೆ. ಬಳಿಕ ನಮ್ಮಲ್ಲೂ ಅದಕ್ಕೆ ಪ್ರತಿಯಾಗಿ ರೋಗ ನಿರೋಧಕ ಶಕ್ತಿಯನ್ನು ಸೃಷ್ಟಿಸುತ್ತದೆ ಎಂದು ಮಾಡೆರ್ನಾ ಹೇಳಿದೆ.

ಮಾನವರ ಮೇಲೆ ಪ್ರಯೋಗದ ಮೊದಲ ಹಂತದ ಫಲಿತಾಂಶವನ್ನು ಕಂಪನಿ ಬಿಡುಗಡೆ ಮಾಡಿದೆ. ಹಿರಿಯ ವ್ಯಕ್ತಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರತಿಕಾಯಗಳು ಹಾಗೂ ವೈರಸ್​ಅನ್ನು ಕೊಲ್ಲುವ ಕಣಗಳನ್ನು (ಟಿ-ಸೆಲ್​) ಉತ್ಪಾದಿಸಿರುವುದು ಕಂಡು ಬಂದಿದೆ. ಅದೇರೀತಿ ಕಿರಿಯರಲ್ಲೂ ಇಂಥದ್ದೇ ಬೆಳವಣಿಗೆ ಕಂಡುಬಂದಿದೆ.

ಸಂಶೋಧಕರ ಪ್ರಕಾರ ಇದು ಅತ್ಯಂತ ಆಶಾದಾಯಕ ಬೆಳವಣಿಗೆ. ಏಕೆಂದರೆ ಹಿರಿಯರಲ್ಲಿ ಪ್ರತಿರೋಧಕ ಶಕ್ತಿ ಕುಂದಿರುತ್ತದೆ. ಹೀಗಿದ್ದರೂ ರೋಗನಿರೋಧಖ ಶಕ್ತಿ ಸೃಷ್ಟಿಯಾಗಿರುವುದು ಉತ್ತಮ ಲಕ್ಷಣವಾಗಿದೆ. ಇನ್ನೂ ಸಂತೋಷದ ಸಂಗತಿ ಎಂದರೆ ಕೋವಿಡ್​ನಿಂದ ಗುಣವಾದವರಿಗಿಂತಲೂ ಕೆಚ್ಚಿನ ಪ್ರಮಾಣದಲ್ಲಿ ಇವರಲ್ಲಿ ಪ್ರತಿಕಾಯಗಳು ಉತ್ಪತ್ತಿಯಾಗಿವೆ ಎಂದು ಹೇಳಿದ್ದಾರೆ.

ಜತೆಗೆ, ಚುಚ್ಚುಮದ್ದಿನಿಂದ ಕೊಂಚ ಅಡ್ಡಪರಿಣಾಮಗಳು ಕೂಡ ಗೋಚರಿಸಿವೆ. ಸುಸ್ತು, ಚಳಿ ಮೊದಲಾದ ಲಕ್ಷಣಗಳು ಕಂಡಬಂದಿದ್ದು, ಎರಡು ದಿನಗಳಲ್ಲಿ ಲಸಿಕೆ ಪಡೆದವರು ಚೇತರಿಸಿಕೊಂಡಿದ್ದಾರೆ ಎಂದು ಕಂಪನಿ ಹೇಳಿದೆ. 56-70 ವರ್ಷ ಹಾಗೂ 71ಕ್ಕಿಂತಲೂ ಹೆಚ್ಚು ವಯಸ್ಸಾದವರಲ್ಲಿ ಈ ಪರೀಕ್ಷೆ ನಡೆಸಲಾಗಿತ್ತು. ಸದ್ಯ ಈ ಲಸಿಕೆಯನ್ನು ಅಂತಿಮ ಹಂತದಲ್ಲಿ 30,000 ಜನರ ಮೇಲೆ ಪ್ರಯೋಗ ನಡೆಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net