

ಶಿವಮೊಗ್ಗ: ಉಪನ್ಯಾಸಕರು ಆಧುನಿಕ ತಂತ್ರಜ್ಞಾನ ಹಾಗೂ ಕಾಲಘಟ್ಟಕ್ಕೆ ಪೂರಕವಾಗಿ ಪಠ್ಯಕ್ರಮ ಬೋಧಿಸುವ ಕೌಶಲಗಳನ್ನು ಕಲಿಯುವುದು ಅತ್ಯಂತ ಅವಶ್ಯಕ ಎಂದು ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಡಾ. ಕೆ.ಎ.ವಿಷ್ಣುಮೂರ್ತಿ ಹೇಳಿದರು.
ನಗರದ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಚಿಕ್ಕಮಗಳೂರಿನ ಎವಿಎಸ್ ಶಿಕ್ಷಣ ಕಾಲೇಜು ಮತ್ತು ಕುವೆಂಪು ವಿಶ್ವವಿದ್ಯಾಲಯ ಬಿಎಡ್ ಕಾಲೇಜಿನ ಪ್ರಾಚಾರ್ಯರು ಮತ್ತು ಶಿಕ್ಷಕರ ಸಂಘದ ಸಹಯೋಗದಲ್ಲಿ ಶನಿವಾರ ಪಠ್ಯಕ್ರಮದಲ್ಲಿ ಇತ್ತೀಚಿನ ಬೆಳವಣಿಗೆಗಳು ವಿಷಯ ಕುರಿತು ಒಂದು ದಿನದ ರಾಜ್ಯಮಟ್ಟದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಪಠ್ಯಕ್ರಮವನ್ನು ಪರಿಣಾಮಕಾರಿಯಾಗಿ ಬೋಧಿಸಲು ಇಂದಿನ ಯುಗದ ಹೊಸ ತಂತ್ರಜ್ಞಾನವನ್ನು ಉಪನ್ಯಾಸಕರು ಕಲಿತುಕೊಳ್ಳಬೇಕು. ನಮಗೆ ಹೊಸ ಹೊಸ ವಿಷಯಗಳ ಬಗ್ಗೆ ಅರಿವು ಇಲ್ಲದಿದ್ದರೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಿಲ್ಲ. ಉತ್ತಮ ವಿದ್ಯಾರ್ಥಿಗಳ ರೂಪಿಸಲು ಉಪನ್ಯಾಸಕರು ಕೌಶಲ್ಯಗಳನ್ನು ಹೆಚ್ಚು ಹೆಚ್ಚು ಕಲಿಯಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಎವಿಎಸ್ ಶಿಕ್ಷಣ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಡಾ. ವೀರಣ್ಣ ಸಜ್ಜನ್, ಪಠ್ಯಕ್ರಮದಲ್ಲಿ ಇತ್ತೀಚಿನ ಬೆಳವಣಿಗೆಗಳು ಕುರಿತ ಕಾರ್ಯಾಗಾರ ಅತ್ಯಂತ ಉಪಯುಕ್ತ ಕಾರ್ಯಕ್ರಮ ಆಗಿದ್ದು, ಉಪನ್ಯಾಸಕರು ಹಾಗೂ ಪ್ರಶಿಕ್ಷಣಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಎಂ.ವೆಂಕಟೇಶ್, ನಿವೃತ್ತ ಪ್ರಾಚಾರ್ಯ ಪ್ರೊ. ಪಂಚಾಕ್ಷರಯ್ಯ ಮಾತನಾಡಿದರು.
ಎವಿಎಸ್ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ವಿ.ಎಸ್.ಅಜೇಶ್, ಕುವೆಂಪು ವಿಶ್ವವಿದ್ಯಾಲಯ ಬಿಎಡ್ ಕಾಲೇಜಿನ ಪ್ರಾಚಾರ್ಯರು ಮತ್ತು ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಎಂ.ಡಾ. ಪರಮೇಶ್ವರಪ್ಪ, ಪ್ರೊ. ಸಿ.ಗೀತಾ, ಜಿಪಂನ ನವೀದ್ ಉಪಸ್ಥಿತರಿದ್ದರು.