Vaamshi Uday - ಚಂದನವನದಲ್ಲಿ ಮಾಡೆಲಿಂಗ್ ಸುಂದರಿ​ ವಂಶಿ ಉದಯ!

ವಂಶಿ ಉದಯ್​
ವಂಶಿ ಉದಯ್​
Published on
Vaamshi Uday -
ಯುವ ಕಲಾವಿದರು ನಟಿಸಿದ ಮೊದಲ ಸಿನಿಮಾ ಬಿಡುಗಡೆಯಾಗಿ, ಅದರಲ್ಲಿ ಪಾರ್ಮೆನ್ಸ್​ ನೋಡಿ ಅವರನ್ನು ಮುಂದಿನ ಚಿತ್ರಗಳಿಗೆ ಆಯ್ಕೆ ಮಾಡಿಕೊಳ್ಳುವುದು ಸಾಮಾನ್ಯ. ಆದರೆ, ಚಿಕ್ಕಮಗಳೂರು ಹುಡುಗಿ ವಂಶಿ ಉದಯ್​, ಮೊದಲ ಸಿನಿಮಾ ರಿಲೀಸ್​ಗೂ ಮುನ್ನವೇ ಮೂರು ಭಾಷೆಗಳ ಒಟ್ಟು ನಾಲ್ಕು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದಲ್ಲಿ "ಬೇಲ್​', "ರುದ್ರ ಕಾಲ', ತೆಲುಗಿನ "ಕೈಗಲ್​' ಜತೆಗೆ ತಮಿಳಿನಲ್ಲೂ ವಂಶಿ ಉದಯ್​ ಅಭಿನಯಿಸುತ್ತಿದ್ದಾರೆ. ಮಾಡೆಲಿಂಗ್​ ಲೋಕದಲ್ಲಿ ಛಾಪು ಮೂಡಿಸಿರುವ ಅವರು, "ಕಳೆದ ಮೂರು ವರ್ಷಗಳಿಂದ ಮಾಡೆಲಿಂಗ್​ನಲ್ಲಿ ತೊಡಗಿಸಿಕೊಂಡಿದ್ದೆ. ಬೆಂಗಳೂರು, ಮುಂಬೈ, ದೆಹಲಿ ಸೇರಿ ಹಲವೆಡೆ ಪ್ರಸಾದ್​ ಬಿದಪ್ಪ, ಮನೀಷ್​ ಮಲ್ಹೋತ್ರಾ, ರಿತು ಕುಮಾರ್​ ಸೇರಿ ಹೆಸರಾಂತ ಡಿಸೈನರ್​ಗಳ ಜತೆ ಕೆಲಸ ಮಾಡಿದ್ದೇನೆ. ಕಳೆದ ವರ್ಷ ಮಿಸ್​ ಯೂನಿವರ್ಸ್​ ಕರ್ನಾಟಕ ಗೆದ್ದ ನಂತರ ಮಿಸ್​ ಯೂನಿವರ್ಸ್​ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಟಾಪ್​ 10ರಲ್ಲಿ ಸ್ಥಾನ ಪಡೆದಿದ್ದೆ. ನಂತರ ಜಾಹೀರಾತುಗಳಲ್ಲಿ ಅವಕಾಶಗಳು ಬಂದವು. ಎರಡು ವರ್ಷಗಳ ಹಿಂದೆ ಸಿನಿಮಾಗೆ ಬರಬೇಕು ಅಂತ ಅನ್ನಿಸಿತ್ತು. ಆದರೆ, 5.9 ಅಡಿ ಎತ್ತರವಿರುವ ಕಾರಣ ಅವಕಾಶಗಳು ಸಿಗುವುದಿಲ್ಲವೇನೋ ಅಂತ ಹಿಂಜರಿದಿದ್ದೆ. ನಂತರ ಅನುಷ್ಕಾ ಶೆಟ್ಟಿ ಎತ್ತರವಿದ್ದರೂ, ಸೂರ್ಯ ಜತೆ ನಟಿಸಿದ್ದಾರೆ. ಪಾತ್ರ ಐದು ನಿಮಿಷವಿರಲಿ ಅಥವಾ 20 ನಿಮಿಷವಿರಲಿ, ನಾವು ತೆರೆಯ ಮೇಲೆ ಎಷ್ಟು ಹೊತ್ತು ಇರುತ್ತೇವೆ ಎನ್ನುವುದಕ್ಕಿಂತ ಎಷ್ಟು ಚೆನ್ನಾಗಿ ನಟಿಸುತ್ತೇವೆ ಎಂಬುದು ಮುಖ್ಯ ಅಂತ ನಿರ್ಧರಿಸಿದೆ' ಎಂದು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಬಗ್ಗೆ ಮಾಹಿತಿ ನೀಡುತ್ತಾರೆ ವಂಶಿ.

ಶಿವಣ್ಣನೇ ಸ್ಪೂರ್ತಿ

"ಶಿವರಾಜಕುಮಾರ್​ ನನ್ನ ಫೇವರಿಟ್​ ನಟ' ಎನ್ನುವ ವಂಶಿಗೆ ಚಿತ್ರರಂಗಕ್ಕೆ ಬರಲು ಅವರೇ ಸ್ಪೂರ್ತಿಯಂತೆ. ಈ ಬಗ್ಗೆ, "ಶಿವಣ್ಣ ಜತೆಗೂ ನಾನು ಜಾಹೀರಾತಿನಲ್ಲಿ ನಟಿಸಿದ್ದೇನೆ. ಸೆಟ್​ನಲ್ಲಿ ಅವರು ನಡೆದುಕೊಳ್ಳುತ್ತಿದ್ದ ರೀತಿ ತುಂಬ ಇಷ್ಟವಾಯಿತು. ಹೇಗೆ ನಟಿಸಬೇಕು ಅಂತ ನನಗೆ ಹೇಳಿಕೊಟ್ಟರು. ಅವರಿಂದ ಪ್ರೇರೇಪಿತಳಾಗಿ ನಾನೂ ಯಾಕೆ ನಟನೆ ಪ್ರಯತ್ನಿಸಬಾರದು ಅಂತ ಆಡಿಷನ್​ ನೀಡತೊಡಗಿದೆ. ಪ್ರಾರಂಭದಲ್ಲಿ ನನ್ನನ್ನು ನಾನು ಪರಿಚಯಿಸಿಕೊಳ್ಳಲು ಮಾಡೆಲಿಂಗ್​, ಸೌಂದರ್ಯ ಸ್ಪರ್ಧೆಗಳ ಅನುಭವ ಸಹಕಾರಿಯಾದವು. ಕ್ರಮೇಣ ಅವಕಾಶಗಳು ಬರತೊಡಗಿದವು' ಎಂದು ಹೇಳಿಕೊಳ್ಳುತ್ತಾರೆ.

ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳು

ಕನ್ನಡದ "ಬೇಲ್​'ನಲ್ಲಿ ಮಾಡರ್ನ್​ ವಿಲನ್​ ಪಾತ್ರದ ಮೂಲಕ ವಂಶಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಬಳಿಕ "ರುದ್ರ ಕಾಲ'ದಲ್ಲಿ ಎರಡನೇ ನಾಯಕಿಯಾಗಿ ಆಯ್ಕೆಯಾಗಿದ್ದು, ಸದ್ಯ ಈ ಚಿತ್ರಗಳ ಶೂಟಿಂಗ್​ ಭರದಿಂದ ಸಾಗಿದೆ. ಜತೆಗೆ "ಜೈ ಸಿದ್ಧಾರ್ಥ್​ ನಾಯಕನಾಗಿರುವ ತೆಲುಗಿನ "ಕೈಗಲ್​'ನಲ್ಲಿ ನಟಿಸುತ್ತಿದ್ದೇನೆ. ಅದು 13 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಇದೊಂದು ಸ್ವಾತಂತ್ರ$್ಯಪೂರ್ವ ಕಥೆಯಾಗಿದ್ದು, ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಜತೆಗೆ ತಮಿಳಿನಲ್ಲೂ ಒಂದು ಚಿತ್ರದಲ್ಲಿ ನಟಿಸುತ್ತಿದ್ದೇನೆ. ಸಿನಿಮಾ ಕಥೆಗಳ ಜತೆ ವೆಬ್​ಸರಣಿ ಕಥೆಗಳನ್ನೂ ಕೇಳುತ್ತಿದ್ದೇನೆ' ಎನ್ನುತ್ತಾರೆ ವಂಶಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net