

ಶಿವಮೊಗ್ಗ: ನಗರದ ಮುಖ್ಯ ರೈಲ್ವೆ ನಿಲ್ದಾಣದ ಆವರಣದಲ್ಲಿ ಮಂಗಳವಾರ ಮಾಕ್ ಡ್ರಿಲ್ ನಡೆಸಲಾಯಿತು. ರೈಲ್ವೆ ಹಾಗೂ ಸ್ಥಳೀಯ ಅಧಿಕಾರಿಗಳು ತುರ್ತು ಸ್ಥಿತಿಯಲ್ಲಿ ಹೇಗೆ ಸ್ಪಂದಿಸಬೇಕು ಎಂಬುದನ್ನು ಅರಿವು ಮೂಡಿಸುವುದು ಈ ಮಾಕ್ ಡ್ರಿಲ್‌ನ ಮುಖ್ಯ ಉದ್ದೇಶವಾಗಿತ್ತು.
ರೈಲ್ವೆ ರಕ್ಷಣಾ ಪಡೆ, ಅಗ್ನಿಶಾಮಕ ಇಲಾಖೆ, ವೈದ್ಯಕೀಯ ತಂಡಗಳು ಇದರಲ್ಲಿ ಭಾಗವಹಿಸಿದ್ದವು. ಅಗ್ನಿಶಾಮಕ ರಕ್ಷಣಾ ಕಾರ್ಯಾಚರಣೆಗಳು ಮತ್ತು ಜನರನ್ನು ಸ್ಥಳಾಂತರಿಸುವ ಕಲ್ಪಿತ ಕಾರ್ಯಾಚರಣೆ ನಡೆಸಲಾಯಿತು. ತುರ್ತು ಹಾಗೂ ವಿಪತ್ತು ಸಂದರ್ಭದಲ್ಲಿ ಹೇಗೆ ಪ್ರತಿಕ್ರಿಯಿಸಬೇಕು ಎಂಬುದನ್ನು ಮಾಕ್ ಡ್ರಿಲ್ ಮೂಲಕ ಪ್ರಸ್ತುತಪಡಿಸಲಾಯಿತು.
ಅಗ್ನಿಶಾಮಕದಳದ ಜಿಲ್ಲಾಮಟ್ಟದ ಅಧಿಕಾರಿ ನರೇಂದ್ರ ಅಗ್ನಿ ಆಕಸ್ಮಿಕ ಸಂದರ್ಭದಲ್ಲಿ ಹೇಗೆ ಕಾರ್ಯನಿರ್ವಹಣೆ ಮಾಡಬೇಕು ಎಂಬುದನ್ನು ವಿವರಿಸಿದರು. ರೈಲ್ವೆ ಪೊಲೀಸ್ ಪಡೆಯ ಪೋಸ್ಟ್ ಕಮಾಂಡರ್ ಬಿ.ಕೆ.ಪ್ರಕಾಶ, ಮೆಗ್ಗಾನ್ ಸಿಬ್ಬಂದಿ, ಆಟೋ ಚಾಲಕರು, ರೈಲ್ವೆ ನಿಲ್ದಾಣದ ಸಿಬ್ಬಂದಿ ಕಲ್ಪಿತ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.