ಜೈಲಿನಲ್ಲಿ ನಿಂತಿಲ್ಲ ಮೊಬೈಲ್ ಬಳಕೆ

1311645-jail
Published on

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಮೊಬೈಲ್ ಬಳಸುವುದಕ್ಕೆ ಬ್ರೇಕ್ ಬಿದ್ದಂತೆ ಕಾಣುತ್ತಿಲ್ಲ. ಈಗಾಗಲೆ ಕೈದಿಗಳಿಗೆ ಐಷಾರಾಮಿ ಸವಲತ್ತು ಪೂರೈಕೆ ಆರೋಪ ಪ್ರಕರಣ ಬಿಸಿ ಆಗಿರುವ ಸಮಯದಲ್ಲೇ ಜೈಲಿನಲ್ಲಿ ಮೊಬೈಲ್ ಪತ್ತೆಯಾಗುತ್ತಿವೆ. ಇತ್ತೀಚೆಗೆ ಜೈಲು ಅಧಿಕಾರಿಗಳು ದಿಢೀರ್ ಪರಿಶೀಲನೆ ನಡೆಸಿದಾಗ ಪ್ರತ್ಯೇಕ ಕಡೆ 4 ಮೊಬೈಲ್, ಸಿಮ್ ಕಾರ್ಡ್ ಪತ್ತೆಯಾಗಿವೆ.

ನ. 13ರ ರಾತ್ರಿ 10.30ರಲ್ಲಿ ಜೈಲು ಅಧಿಕಾರಿಗಳು ವಿಚಾರಣಾಧೀನ ಬಂದಿಗಲ ವಿಭಾಗದ 9ನೇ ಬ್ಯಾರಕ್ ಕೊಠಡಿಯನ್ನು ತಪಾಸಣೆ ನಡೆಸಿದರು. 9ನೇ ಬ್ಯಾರಕ್‌ನ 4ನೇ ಕೊಠಡಿ ಶೌಚಗೃಹದಲ್ಲಿ 1 ಮೊಬೈಲ್ ಮತ್ತು ಸಿಮ್ ಕಾರ್ಡ್ ಪತ್ತೆಯಾಗಿದೆ. ಮಾರನೇ ದಿನ 14ರ ತಡರಾತ್ರಿ 2 ಗಂಟೆಯಲ್ಲಿ ಭದ್ರತಾ ವಿಭಾಗ-2ರ ಹಿಂಭಾಗದ ಕೊಠಡಿ 6ರಲ್ಲಿ ಜೈಲು ಅಧಿಕಾರಿಗಳು ತಪಾಸಣೆ ನಡೆಸಿದಾಗ ಶೌಚಗೃಹದ ಮೇಲ್ಭಾಗದಲ್ಲಿ ವಿವೋ ಕಂಪನಿಯ ಮೊಬೈಲ್ ಮತ್ತು 5ನೇ ಕೊಠಡಿಯಲ್ಲಿ 3 ನೋಕಿಯಾ ಮೊಬೈಲ್, ಸಿಮ್‌ಗಳು ಪತ್ತೆಯಾಗಿವೆ.

ಮಲಗುವ ವಿಚಾರಕ್ಕೆ ಗಲಾಟೆ

ನ. 13ರ ಬೆಳಗ್ಗೆ 8.30ರಲ್ಲಿ ಟವರ್ 1 ವಿಭಾಗ 8ನೇ ಬ್ಯಾರಕ್ ಕೊಠಡಿ ಸಂಖ್ಯೆ 2ರಲ್ಲಿ ವಿಚಾರಣಾಧೀನ ಬಂದಿ ಸೈಯದ್ ಜಬಿ ಮತ್ತು ಗೌತಮ್ ಅಲಿಯಾಸ್ ಕಲರ್ ಸೇರಿಕೊಂಡು ಮಲಗುವ ವಿಚಾರಕ್ಕೆ ರಿದ್ ಅಹಮ್ಮದ್ ಮೇಲೆ ಗಲಾಟೆ ಆಗಿತ್ತು. ಕೂಗಾಟದ ಸದ್ದು ಕೇಳಿ ಜೈಲು ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಗಲಾಟೆ ಬಿಡಿಸಿದ್ದರು. ರೀದ್ ಅಹಮ್ಮದ್‌ಗೆ ಗಾಯಗಳಾಗಿದ್ದು, ಜೈಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಆರೋಪಿಗಳಾದ ಸೈಯದ್ ಮತ್ತು ಗೌತಮ್ ವಿರುದ್ಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net