ಕಬ್ಬು ಬೆಳೆಗಾರರ ನೆರವಿಗೆ ಬರಲಿದೆ ಮೊಬೈಲ್ ಆ್ಯಪ್​: ಸಕ್ಕರೆ ಕಾರ್ಖಾನೆಗಳ ಮೋಸದಾಟಕ್ಕೂ ಬೀಳಲಿದೆ ಬ್ರೇಕ್...

Cane
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ರಾಜ್ಯದ ಸಕ್ಕರೆ ಕಾರ್ಖಾನೆಗಳು ಹಾಗೂ ಕಬ್ಬು ಬೆಳೆಗಾರರ ನಡುವಿನ ವ್ಯವಹಾರವನ್ನು ಸಂಪೂರ್ಣ ಡಿಜೀಟಲಿಕರಣದ ಮೂಲಕ ಪಾರದರ್ಶಕತೆ ತರಲು ದಿಟ್ಟ ಹೆಜ್ಜೆಯನ್ನಿಟ್ಟಿರುವ ಸರ್ಕಾರ, ಅದಕ್ಕಾಗಿ ಹೊಸ ಆಪ್ ಅಭಿವೃದ್ದಿಪಡಿಸಲು ಮುಂದಾಗಿದೆ. ಆ ಮೂಲಕ ಸಕ್ಕರೆ ಕಾರ್ಖಾನೆಗಳ ಕಳ್ಳಾಟಕ್ಕೂ ಬ್ರೇಕ್ ಹಾಕುವ ದೃಢ ನಿರ್ಧಾರ ಮಾಡಿದೆ. ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶದಲ್ಲಿ ಆಪ್ ಅಭಿವೃದ್ದಿ ಮಾಡಿದ್ದು, ಅದರ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ. ಕೇಂದ್ರ ಸರ್ಕಾರದ ಆಲೋಚನೆಯಾದ ರೈತರ ಆದಾಯ ದುಪ್ಪಟ್ಟು ಮಾಡುವ ಯೋಜನೆಗೆ ಪೂರಕವಾಗಿ ರಾಜ್ಯದಲ್ಲಿಯೂ ಇದೇ ಮಾದರಿ ಅನುಸರಿಸಲಾಗುತ್ತದೆ.

ಆ್ಯಪ್​ ಏಕೆ?: ಕಬ್ಬು ಬೆಳೆಯುವಲ್ಲಿ ಮೂರನೇ ಅತಿದೊಡ್ಡ ರಾಜ್ಯ ಕರ್ನಾಟಕವಾಗಿದ್ದರೆ, ಸಕ್ಕರೆ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ. ರಾಜ್ಯದ 16 ಜಿಲ್ಲೆಗಳಲ್ಲಿ ಕಬ್ಬು ಬೆಳೆಯಲಾಗುತ್ತದೆ. ಪ್ರಸ್ತುತ ನಿಯಮಗಳ ಪ್ರಕಾರ, ಕಬ್ಬು ಕಟಾವಿನಿಂದ ಹಿಡಿದು ಸಾಕಣೆ, ಕಾರ್ಖಾನೆಯಲ್ಲಿ ತೂಕ, ಇಳುವರಿ, ಹಣ ಪಾವತಿ ವಿಚಾರದಲ್ಲಿ ರೈತರ ಶೋಷಣೆ ನಡೆಯುತ್ತಿದೆ. ಆಪ್ ಅಭಿವೃದ್ಧಿ ಮೂಲಕ ಡಿಜಿಟಲೀಕರಣ ಮಾಡಿದರೆ ರೈತರಿಗೆ ಆಗುವ ಮೋಸ ತಪ್ಪಿ ನಿಯಮದ ಪ್ರಕಾರ ಹಣ ಪಾವತಿಯಾಗುತ್ತದೆ.

ಕಾರ್ಯನಿರ್ವಹಣೆ ಹೇಗೆ?: ಕಬ್ಬು ಬೆಳೆ ನಾಟಿಯಾದ ಕೂಡಲೇ ರೈತರು ಆಪ್​ನಲ್ಲಿ ನೋಂದಣಿ ಮಾಡಬೇಕು. ಬೆಳೆ ಬರುತ್ತಿದ್ದಂತೆ ಸಿನಿಯಾರಿಟಿಯಲ್ಲಿ ಕಟಾವು ಮಾಹಿತಿ ಕಾರ್ಖಾನೆಗೆ ತಲುಪುತ್ತದೆ. ಅದರಂತೆ ಕಟಾವು ಮಾಡಿ ಸಾಗಣೆ ಮಾಡಬೇಕು. ತೂಕ ಆಗುತ್ತಿದ್ದಂತೆ ಆಪ್​ನಲ್ಲಿ ದಾಖಲಾಗುತ್ತದೆ. ಎಷ್ಟು ಇಳುವರಿ ಬಂದಿದೆ ಎಂಬ ಮಾಹಿತಿ ಸಹ ಸಿಗುತ್ತದೆ. ನಿಯಮದ ಪ್ರಕಾರ, 15 ದಿನದಲ್ಲಿ ಹಣ ಪಾವತಿ ಮಾಡಬೇಕಾಗುತ್ತದೆ. ಇದು ಆಪ್ ಕಾರ್ಯನಿರ್ವಹಿಸುವ ವಿಧಾನವಾಗಿದೆ. ಮಹಾರಾಷ್ಟ್ರದಲ್ಲಿ ನೇರವಾಗಿ ಕಾರ್ಖಾನೆ ಮತ್ತು ರೈತರ ನಡುವೆ ವ್ಯವಹಾರವಿದೆ. ಉತ್ತರ ಪ್ರದೇಶದಲ್ಲಿ ಪ್ರತಿ ಹಳ್ಳಿಯಲ್ಲಿಯೂ ಸಹಕಾರ ಸಂಘಗಳನ್ನು ಸ್ಥಾಪಿಸಲಾಗಿದೆ. ಅದರ ಮೂಲಕ ಆಪ್​ನಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಮಹಾರಾಷ್ಟ್ರದಲ್ಲಿ ಆಪ್ ಅಭಿವೃದ್ಧಿ ಮಾಡಿಕೊಟ್ಟ ತಂತ್ರಜ್ಞರ ಜತೆ ರಾಜ್ಯ ಸರ್ಕಾರದ ಅಧಿಕಾರಿಗಳು ಮಂಗಳವಾರ (ಜೂ.14) ಸಭೆ ನಡೆಸುತ್ತಿದ್ದಾರೆ. ಮುಂದಿನ ಅಕ್ಟೋಬರ್​ನಲ್ಲಿ ಹಂಗಾಮು ಆರಂಭವಾಗಲಿದ್ದು ಆ ವೇಳೆಗೆ ಆಪ್ ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಸಕ್ಕರೆ ನಿರ್ದೇಶನಾಲಯದ ಮೂಲಗಳು ಹೇಳುತ್ತವೆ.

ಸಮಿತಿ ರಚನೆ: ಆಪ್ ಅಭಿವೃದ್ಧಿ, ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಕ್ಕರೆ ನಿರ್ದೇಶಕರ ನೇತೃತ್ವದಲ್ಲಿ ಕೃಷಿ, ತೂಕ ಮತ್ತು ಅಳತೆ, ಅಬಕಾರಿ ಇಲಾಖೆ ಅಧಿಕಾರಿಗಳ ಸಮಿತಿಯನ್ನು ಸರ್ಕಾರ ರಚನೆ ಮಾಡಿದೆ.

ಹಿಂದೆ ಕಬ್ಬಿನ ಬಾಕಿ ವರ್ಷಗಟ್ಟಲೆ ತೀರುವಳಿ ಆಗುತ್ತಿರಲಿಲ್ಲ. ಈಗ ಅದಕ್ಕೆ ಕಡಿವಾಣ ಹಾಕಿ ಆದಷ್ಟು ಬೇಗ ಪಾವತಿ ಆಗುವಂತೆ ನೋಡಿಕೊಂಡಿದ್ದೇವೆ. ಇದೀಗ ಡಿಜಿಟಲೀಕರಣ ಮೂಲಕ ಪಾರದರ್ಶಕ ವ್ಯವಸ್ಥೆ ತರಲಿದ್ದೇವೆ. | ಶಂಕರ ಪಾಟೀಲ್ ಮುನೇನಕೊಪ್ಪ ಸಕ್ಕರೆ ಸಚಿವ ಕಬ್ಬು ನಿಯಂತ್ರಣ ಮಂಡಳಿ ಸಭೆಯಲ್ಲಿ ನೀಡಿದ ಸಲಹೆಯಂತೆ ಸರ್ಕಾರ ಇದೀಗ ಆಪ್ ಅಭಿವೃದ್ಧಿಗೆ ಮುಂದಾಗಿದೆ. ಮುಂದಾದರೂ ಸಕ್ಕರೆ ಕಾರ್ಖಾನೆಗಳಿಂದ ರೈತರ ಶೋಷಣೆ ತಪು್ಪತ್ತದೆ ಎಂಬ ವಿಶ್ವಾಸವಿದೆ. | ಕುರುಬೂರು ಶಾಂತಕುಮಾರ್ ಅಧ್ಯಕ್ಷ, ಕಬ್ಬು ಬೆಳೆಗಾರರ ಸಂಘ ಕಬ್ಬಿನ ಬಾಕಿ ಪಾವತಿ ವಿಳಂಬ ಸೇರಿ ಅನೇಕ ದೂರುಗಳಿವೆ. ಆಪ್ ಅಭಿವೃದ್ದಿ ಪಡಿಸಲಾಗುತ್ತಿದ್ದು, ಮುಂದಿನ ಹಂಗಾಮಿನ ವೇಳೆಗೆ ಒಂದು ಕ್ರೋಡೀಕೃತ ವ್ಯವಸ್ಥೆ ತರುತ್ತೇವೆ. | ಶಿವಾನಂದ ಎಚ್. ಕಳಕೇರಿ ಕಬ್ಬು ಅಭಿವೃದ್ಧಿ ಆಯುಕ್ತ

ಮೋಸ ನಡೆಯುವುದು ಎಲ್ಲಿ?

  • ಬೆಳವಣಿಗೆ ಆದ ಕಬ್ಬನ್ನು ಕಟಾವು ಮಾಡದೇ ಇರುವುದು
  • ತೂಕದಲ್ಲಿ ಒಂದು ಲೋಡ್​ಗೆ ಕನಿಷ್ಠ 2 ಟನ್ ಕಡಿಮೆ ದಾಖಲು
  • ಇಳುವರಿಯಲ್ಲಿ ಕಡಿಮೆ ತೋರಿಸುವುದು
  • ನಿಯಮದ ಪ್ರಕಾರ 15 ದಿನದಲ್ಲಿ ಪಾವತಿ ಮಾಡದಿರುವುದು
  • ಸಕ್ಕರೆ ಉತ್ಪಾದನೆ ಕಡಿಮೆ ತೋರಿಸುವುದರಿಂದ ಸರ್ಕಾರಕ್ಕೆ ತೆರಿಗೆ ವಂಚನೆ
  • ಸಕ್ಕರೆ ನಿರ್ದೇಶನಾಲಯಕ್ಕೆ ಸಲ್ಲಿಸುವ ದಾಖಲೆಗಳ ಅಂಕಿ-ಅಂಶಗಳಲ್ಲಿ ವ್ಯತ್ಯಾಸ.

ಅನುಕೂಲಗಳೇನು?

  • ನಿಖರವಾದ ಅಂಕಿ-ಅಂಶ ಲಭ್ಯ
  • ಹಣ ಪಾವತಿಸದಿದ್ದರೆ ಉಪ ಉತ್ಪನ್ನಗಳ ಹಣ ರೈತರಿಗೆ ನೀಡಿಕೆ
  • ಸರ್ಕಾರ ಸಕ್ಕರೆಗೆ ಗ್ಯಾರಂಟಿ ಕೊಡಿಸಿ ಸಾಲ ಸೌಲಭ್ಯ
  • ಕಾರ್ಖಾನೆಗಳ ಮೇಲೆ ಸರ್ಕಾರದ ಸಂಪೂರ್ಣ ನಿಯಂತ್ರಣ
  • ಉಪ ಉತ್ಪನ್ನಗಳ ಉತ್ಪಾದನೆಯ ಮಾಹಿತಿ
  • ಕಾರ್ಖಾನೆಗಳಿಂದ ಸರ್ಕಾರಕ್ಕೆ ಮ್ಯಾನ್ಯುವಲ್ ಮಾಹಿತಿಗೆ ಬ್ರೇಕ್

ಮಾಹಿತಿ

  • ರಾಜ್ಯದಲ್ಲಿರುವ ಕಾರ್ಖಾನೆಗಳು 70
  • ಕಬ್ಬು ಬೆಳೆ ಪ್ರದೇಶ 15 ಲಕ್ಷ ಎಕರೆ
  • ಇಳುವರಿಯ ಅಂದಾಜು 7 ಕೋಟಿ ಟನ್
  • ಕಬ್ಬು ಬೆಳೆಗಾರರು 30 ಲಕ್ಷ
  • ರೈತರಿಗೆ ಬರಬೇಕಾಗಿರುವ ಅಂದಾಜು ಬಾಕಿ 380 ಕೋಟಿ ರೂ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net