ಬುಡಕಟ್ಟು ಬಾಲಕಿ ಹತ್ಯೆ ಪ್ರಕರಣ; ಪೊಲೀಸ್​ ಠಾಣೆಗೆ ಬೆಂಕಿ

kaliyagunj
Published on

ಕೊಲ್ಕತಾ: ಅಪ್ರಾಪ್ತ ವಯಸ್ಸಿನ ಬುಡಕಟ್ಟು ಬಾಲಕಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆಯ ಕಾವು ಜೋರಾಗಿದ್ದು ಆಕ್ರೋಶ ಭರಿತರು ಪೊಲೀಸ್​ ಠಾಣೆಗೆ ಬೆಂಕಿ ಹಚ್ಚಿದ್ದಾರೆ.

ಕಲಿಯಾಗಂಜ್​ನಲ್ಲಿ ಪ್ರತಿಭಟನಾ ನಿರತರು ಪೊಲೀಸ್​ ಠಾಣೆಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ವಿಡಿಯೋ ವೈರಲ್​

ಕಳೆದ ವಾರ ಬುಡಕಟ್ಟು ಸಮುದಾಯದ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಇದಕ್ಕೆ ಪೂರಕ ಎಂಬಂತೆ ಪೊಲೀಸರು ಶವವನ್ನು ಬೀದಿಯಲ್ಲಿ ಎಳೆದುಕೊಂಡು ಹೋಗುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು.

ಇದರಿಂದ ಆಕ್ರೋಶಗೊಂಡ ಜನರು ನ್ಯಾಯಕ್ಕಾಗಿ ಆಗ್ರಹಿಸಿ ಪೊಲೀಸ್​ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದ್ದು ಪರಿಸ್ಥಿತಿ ಬುದಿ ಮುಚ್ಚಿದ ಕೆಂಡದಂತಾಗಿದೆ. ಆದರೆ, ವೈರಲ್​ ಆಗಿರುವ ವಿಡಿಯೋದಲ್ಲಿ ಶವ ಬಾಲಕಿಯದ್ದ ಎಂಬ ಬಗ್ಗೆ ಖಚಿತ ಮಾಹಿತಿ ದೊರೆತ್ತಿಲ್ಲ.

Lathi charge

ಠಾಣೆಗೆ ಬೆಂಕಿ

ಉತ್ತರ ದಿನಾಜ್​ಪುರ್​ ಜಿಲ್ಲೆಯ ಕಲಿಯಾಗಂಜ್​ ಪೊಲೀಸ್​ ಠಾಣೆ ಎದುರು ಆದಿವಾಸಿ ಹಾಗೂ ರಾಜ್​ಬಂಗ್​ಶಿ ಸಮುದಾಯದವರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಪ್ರತಿಭಟನಾ ನಿರತರು ಪೊಲೀಸ್​ ಠಾಣೆಯ ಒಳ ನುಗ್ಗಿ ಬೆಂಕಿ ಹಚ್ಚಿದ್ದಾರೆ.

ಪೊಲೀಸರು ಪ್ರತಿಭಟನಾ ನಿರತರನ್ನು ಚದುರಿಸಲು ಲಾಠಿ ಚಾರ್ಜ್​ ಹಾಗೂ ಆಶ್ರುವಾಯುವನ್ನು ಪ್ರಯೋಗಿಸಿ ಗುಂಪನ್ನು ಚದುರಿಸಿದ್ದಾರೆ. ಆದರೆ, ಬೆಂಕಿ ನಂದಿಸುವಲ್ಲಿ ವಿಫಲರಾದೆವು ಎಂದು ಹಿರಿಯ ಪೊಲೀಸ್​ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.

ರಾಜಕೀಯ ಕೆಸರೆರಚಾಟ

ಇನ್ನು ಪೊಲೀಸ್​ ಠಾಣೆಗೆ ಉದ್ರಿಕ್ತರ ಗುಂಪು ಬೆಂಕಿ ಹಚ್ಚಿರುವ ಪ್ರಕರಣ ರಾಜಕೀಯ ಕೆಸರೆರಚಾಟಕ್ಕೆ ಎಡೆ ಮಾಡಿಕೊಟ್ಟಿದ್ದು ಆಡಳಿತರೂಢ ಟಿಎಂಸಿ ಹಾಗೂ ವಿಪಕ್ಷ ಬಿಜೆಪಿ ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ಟಿಎಂಸಿ ಬಾಲಕಿಯ ಸಾವನ್ನು ಅತ್ಯಾಚಾರ ಮತ್ತು ಕೊಲೆಯ ಪ್ರಕರಣವೆಂದು ಹೇಳುವ ಮೂಲಕ ಬಿಜೆಪಿ ಕೋಪವನ್ನು ಪ್ರಚೋದಿಸುತ್ತಿದೆ. ಜನತೆ ಇದಕ್ಕೆ ಕಿವಿಗೊಡಬಾರದು ಎಂದು ವಿನಂತಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net