ಮಾದಪ್ಪನ ಹುಂಡಿಯಲ್ಲಿ 2.90 ಕೋಟಿ ರೂ. ಸಂಗ್ರಹ

04 HANUR 1
Published on

ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಹದೇಶ್ವರ ಬೆಟ್ಟದ ಶ್ರೀ ಮಲೆಮಹದೇಶ್ವರಸ್ವಾಮಿ ದೇವಾಲಯದ ಹುಂಡಿಗಳಲ್ಲಿ 33 ದಿನಗಳ ಅವಧಿಯಲ್ಲಿ 2.90 ಕೋಟಿ ರೂ. ಸಂಗ್ರಹವಾಗಿದೆ.

ಬೆಟ್ಟದ ಬಸ್ ನಿಲ್ದಾಣ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ ಬುಧವಾರ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಎಣಿಕೆ ಆರಂಭಿಸಲಾಯಿತು. ಬೆಳಗ್ಗೆ 8ಕ್ಕೆ ಆರಂಭವಾದ ಎಣಿಕೆ ಕಾರ್ಯ ರಾತ್ರಿ 10.20 ರವರೆಗೂ ನಡೆಯಿತು.

ಈ ಬಾರಿ ಭಟ್ಟಿ ಅಮಾವಾಸ್ಯೆ, ಧನುರ್ಮಾಸ, 4ನೇ ಶನಿವಾರ, ಕ್ರಿಸ್‌ಮಸ್, ಸರ್ಕಾರಿ ರಜೆಗಳು ಹಾಗೂ ಹೊಸ ವರ್ಷದ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತರು ಬೆಟ್ಟಕ್ಕೆ ಭೇಟಿ ನೀಡಿದ್ದರು. ಹರಕೆ ಹೊತ್ತ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹಣ, ಚಿನ್ನ ಹಾಗೂ ಬೆಳ್ಳಿ ಪದಾರ್ಥಗಳನ್ನು ಹುಂಡಿಗೆ ಹಾಕಿದ್ದರು. ಇದರಿಂದ 2,90,00,732 ರೂ. ನಗದು, 102 ಗ್ರಾಂ ಚಿನ್ನ ಹಾಗೂ 3 ಕೆಜಿ 355 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.
ಕಳೆದ ಡಿ.1 ರಂದು ನಡೆದಿದ್ದ ಹುಂಡಿ ಎಣಿಕೆಯಲ್ಲಿ 24 ದಿನಗಳ ಅವಧಿಯಲ್ಲಿ 2,00,41,724 ರೂ. ನಗದು, 76 ಗ್ರಾಂ ಚಿನ್ನ ಹಾಗೂ 1 ಕೆಜಿ 514 ಗ್ರಾಂ ಬೆಳ್ಳಿ ಸಂಗ್ರಹವಾಗಿತ್ತು. ಮಾರ್ಚ್‌ನಲ್ಲಿ ನಡೆದಿದ್ದ ಹುಂಡಿ ಎಣಿಕೆಯಲ್ಲಿ ಸಂಗ್ರಹವಾಗಿದ್ದ 2,86,17,698 ರೂ. ಹೆಚ್ಚಿನ ಮೊತ್ತವಾಗಿದ್ದರೆ, ಈ ಬಾರಿ ಹುಂಡಿಗಳಲ್ಲಿ ದೊರೆತ ಹಣ ಅದಕ್ಕಿಂತಲೂ ಹೆಚ್ಚಿನದ್ದಾಗಿದೆ.

ವಿದೇಶಿ ಕರೆನ್ಸಿ: ಹುಂಡಿ ಎಣಿಕೆಯಲ್ಲಿ ಕೆನಡಾದ 100, ಅಮೆರಿಕದ 22 ಹಾಗೂ ಥೈಲ್ಯಾಂಡ್ ದೇಶದ 2 ಕರೆನ್ಸಿಗಳು ದೊರೆತಿವೆ. ಜತೆಗೆ, ಚಲಾವಣೆಯಲ್ಲಿ ಇಲ್ಲದ 2 ಸಾವಿರ ರೂ. ಮುಖಬೆಲೆಯ 12 ನೋಟುಗಳು ಸಿಕ್ಕಿವೆ. ಎಣಿಕೆ ಸಂದರ್ಭದಲ್ಲಿ ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ, ಉಪ ಕಾರ್ಯದರ್ಶಿ ಚಂದ್ರಶೇಖರ್, ಲೆಕ್ಕಾಧೀಕ್ಷಕ ನಾಗೇಶ್, ಬ್ಯಾಂಕ್ ಆಫ್ ಬರೋಡ ನೌಕರರು ಹಾಗೂ ಪ್ರಾಧಿಕಾರದ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net