

ಶಿವಮೊಗ್ಗ: ಈ ಚುನಾವಣೆ ಬಳಿಕ ವಿಧಾನಪರಿಷತ್ನಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮ ಲಿದೆ. ನಮ್ಮ ಪಕ್ಷದ ಕನಿಷ್ಠ 15 ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಶಿಕಾರಿಪುರದಲ್ಲಿ ಶುಕ್ರವಾರ ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಮುಖಂಡರ ಟೀಕೆ ಬಗ್ಗೆ ಮಾತನಾಡುವುದಿಲ್ಲ. ಅದಕ್ಕೆ ಪ್ರತಿಕ್ರಿಯೆ ನೀಡುವ ಅಗತ್ಯವೂ ಇಲ್ಲ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳೀಪಟವಾಗಲಿದೆ ಎಂದರು. ವಾಸ್ತವದಲ್ಲಿ ಈ ಚುನಾವಣೆ ಫಲಿತಾಂಶ ಗ್ರಾಮಾಂತರ ಭಾಗದಲ್ಲಿ ಪಕ್ಷದ ಸಾಮರ್ಥ್ಯವನ್ನು ಸೂಚಿಸುತ್ತದೆ. ಹಳ್ಳಿಗಳಲ್ಲಿ ಬಿಜೆಪಿ ಎಷ್ಟು ಆಳವಾಗಿ ಬೇರುಬಿಟ್ಟಿದೆ ಎಂಬುದನ್ನು ಅನಾವರಣಗೊಳಿಸಲಿದೆ ಎಂದರು.
ಬೆಳಗಾವಿ: ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿರುವ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಉತ್ತಮ ವಾತಾವರಣ ವ್ಯಕ್ತವಾಗಿದೆ. ಪ್ರತಿ ಚುನಾವಣೆಯೂ ಅದರದ್ದೇ ಆದ ಮತದಾರರ ಮೇಲೆ ತೀರ್ವನವಾಗುತ್ತದೆ. ಉಪಚುನಾವಣೆಯೇ ಇರಲಿ, ಪರಿಷತ್ ಚುನಾವಣೆಯೇ ಇರಲಿ, ಸಂದರ್ಭಕ್ಕನುಸಾರವಾಗಿ ಅದರದ್ದೇ ಆದ ನೆಲೆಗಟ್ಟಿನ ಮೇಲೆ ನಡೆಯುತ್ತದೆ. ಅಲ್ಲದೆ, 2023ರ ವಿಧಾನಸಭಾ ಚುನಾವಣೆಯೂ ಆವತ್ತಿನ ಸಂದರ್ಭಕ್ಕನುಸಾರವಾಗಿ ಯಾವ ರಾಜಕೀಯ ಸನ್ನಿವೇಶ ಇರುತ್ತದೆಯೋ ಆ ನೆಲೆಗಟ್ಟಿನ ಮೇಲೆ ನಡೆಯುತ್ತದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಚನ್ನಪಟ್ಟಣ: ಬೆಂಬಲ ಕೊಟ್ಟಂತೆ ನಾಟಕವಾಡಿ ಕತ್ತು ಕುಯ್ಯುವುದೇ ಕಾಂಗ್ರೆಸ್ಸಿಗರ ಕೆಲಸವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ನಗರಸಭೆಯಲ್ಲಿ ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಚುನಾವಣೆಯಲ್ಲಿ ಕೆಲ ಕಡೆ ಜೆಡಿಎಸ್ ಬಿಜೆಪಿಗೆ ಬೆಂಬಲ ನೀಡಿದ್ದರೆ, ಮತ್ತೆ ಕೆಲವು ಕಡೆ ಕಾಂಗ್ರೆಸ್ಗೆ ಬೆಂಬಲ ನೀಡಿದೆ. ಇಷ್ಟಾದರೂ ಕಾಂಗ್ರೆಸ್ ನಾಯಕರಿಗೆ ಸ್ವಲ್ಪವೂ ಕೃತಜ್ಞತೆ ಇಲ್ಲ ಎಂದರು. ಹತಾಶೆಯಿಂದ ಮಾಜಿ ಸಿಎಂ ಯಡಿಯೂರಪ್ಪ ಜೆಡಿಎಸ್ ಬೆಂಬಲ ಕೋರಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ಸತ್ಯಕ್ಕೆ ದೂರವಾದದ್ದು. ನನ್ನನ್ನು ಪ್ರಧಾನಿ ಮಾಡಿ ಎಂದು ದೇವೇಗೌಡರು ಏನಾದರೂ ಅರ್ಜಿ ಹಿಡಿದುಕೊಂಡು ಕಾಂಗ್ರೆಸ್ ನಾಯಕರ ಬಳಿ ಹೋಗಿದ್ದರಾ.. ಅಥವಾ ನನ್ನನ್ನು ಮುಖ್ಯಮಂತ್ರಿ ಮಾಡಿ ಎಂದು ನಾನೇನಾದರೂ ಅರ್ಜಿ ಹಿಡಿದುಕೊಂಡು ಅವರ ಬಳಿ ಹೋಗಿದ್ದೆನಾ.. ಎಂದು ಎಚ್ಡಿಕೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ನ ಆರು ಅಭ್ಯರ್ಥಿಗಳೂ ಜಯ ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚನ್ನರಾಯಪಟ್ಟಣ: ಜೆಡಿಎಸ್ ಸದಸ್ಯರೊಬ್ಬರು ತಾವು ಹಕ್ಕು ಚಲಾಯಿಸಿರುವ ಮತಪತ್ರವನ್ನು ಮೊಬೈಲ್ನಲ್ಲಿ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಿಗೆ ಹಾಕಿದ್ದು, ಅದೀಗ ವೈರಲ್ ಆಗಿದೆ. ಹಾಸನ ಜೆಡಿಎಸ್ ಅಭ್ಯರ್ಥಿ ಡಾ.ಸೂರಜ್ ರೇವಣ್ಣರಿಗೆ ಮತ ನೀಡಿರುವ ಮತಪತ್ರ ಇದಾಗಿದ್ದು, ತಾಲೂಕಿನ ಕುಂದೂರು ಗ್ರಾಪಂ ವ್ಯಾಪ್ತಿಯಲ್ಲಿ ಬೆಳಗ್ಗೆ 7.30ರಿಂದಲೇ ವೈರಲ್ ಆಗಿದೆ. ಮತದಾನ ಗೌಪ್ಯತಾ ನಿಯಮ ಉಲ್ಲಂಘನೆಯಾಗಿರುವುದರಿಂದ ಮತದಾನ ರದ್ದುಪಡಿಸಿ ಮರು ಚುನಾವಣೆ ನಡೆಸಬೇಕು ಎಂದು ವಿಧಾನಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಒತ್ತಾಯಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಗಮನಕ್ಕೆ ತಂದಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ ಎಂದು ತಿಳಿಸಿದರು.
ಮಂಡ್ಯ: ಜಿಲ್ಲೆಯ ವಿಧಾನಪರಿಷತ್ ಚುನಾವಣೆಯಲ್ಲಿ ದಿಢೀರ್ ಬೆಳವಣಿಗೆ ಎಂಬಂತೆ ಶುಕ್ರವಾರ ಬಿಜೆಪಿ ಅಭ್ಯರ್ಥಿ ಬೂಕಹಳ್ಳಿ ಮಂಜು ‘ಕುತಂತ್ರ ಮಾಡಿ ನನಗೆ ಮೋಸ ಮಾಡಿದರು’ ಎಂದು ಕಣ್ಣೀರಿಟ್ಟರು. ಇದರೊಂದಿಗೆ ಯುದ್ಧಕ್ಕೂ ಮುನ್ನವೇ ಬಿಜೆಪಿ ಅಭ್ಯರ್ಥಿ ಶಸ್ತ್ರತ್ಯಾಗ ಮಾಡಿದಂತಾಗಿದೆ. ಗ್ರಾಮ ಪಂಚಾಯಿತಿ ಸದಸ್ಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಮಂಜು ಚುನಾವಣೆಯಲ್ಲಿ ಪ್ರಬಲ ಅಭ್ಯರ್ಥಿಯಾಗಿ ಕಾಣಿಸಿಕೊಂಡಿದ್ದರು. ಈವರೆಗೆ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಮಾತ್ರ ನೇರ ಹಣಾಹಣಿ ನಡೆಯುತ್ತಿತ್ತು. ಈ ಬಾರಿ ಬಿಜೆಪಿ ಕೂಡ ಪ್ರಬಲ ಪೈಪೋಟಿ ಕೊಡುವ ಸೂಚನೆ ನೀಡಿದ್ದರಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಅಂತಿಮ ಹಂತದಲ್ಲಿ ಎಲ್ಲವೂ ತಲೆಕೆಳಗಾಗಿದೆ. ಒಂದು ವರ್ಷದಿಂದ ಸಿದ್ಧತೆ ಮಾಡಿಕೊಂಡಿದ್ದೆ. ಗುರುವಾರ ಸಂಜೆ 4 ಗಂಟೆವರೆಗೂ ಎಲ್ಲವೂ ಸರಿಯಾಗಿತ್ತು. ನಂತರ ಎಲ್ಲವೂ ಬದಲಾವಣೆಯಾಗಿದೆ. ಒಂದು ವರ್ಷದ ಹೋರಾಟ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂದು ಬೂಕಹಳ್ಳಿ ಮಂಜು ಕಣ್ಣೀರಿಟ್ಟರು. ಮಂಡ್ಯದಲ್ಲಿ ಬಿಜೆಪಿ ನೆಲೆಯಾಗುವುದು ಇಷ್ಟವಿಲ್ಲದೇ ಷಡ್ಯಂತ್ರ ಮಾಡುತ್ತಿದ್ದಾರೆ. ಈಗ ನಾನು ಏನು ಹೇಳುವುದಿಲ್ಲ. ಕೊನೇ ಕ್ಷಣದವರೆಗೂ ಹೋರಾಟ ಮಾಡುತ್ತೇನೆ ಎಂದರು.
ಕಂಪ್ಲಿ(ಬಳ್ಳಾರಿ): ಹಂಪಾದೇವನಹಳ್ಳಿ ಗ್ರಾಪಂ ಕಾಂಗ್ರೆಸ್ ಬೆಂಬಲಿತ ಸದಸ್ಯರಿಗೆ ಬಿಜೆಪಿಯವರು ನೀಡಿದ್ದರು ಎನ್ನಲಾದ ಸೀರೆ, ಬೆಳ್ಳಿ ಕಾಯಿನ್ ವಾಪಸ್ ಮಾಡುತ್ತಿರುವ ವಿಡಿಯೋ ಶುಕ್ರವಾರ ಸಂಜೆ ವೈರಲ್ ಆಗಿದೆ. ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಗೆ ಮತ ನೀಡುವಂತೆ ಕಾಂಗ್ರೆಸ್ ಬೆಂಬಲಿತ ಸದಸ್ಯರಿಗೆ 11 ಸೀರೆ ಮತ್ತು 11 ಬೆಳ್ಳಿ ಕಾಯಿನ್ ನೀಡಿದ್ದರು. ಅವನ್ನೆಲ್ಲ ಬಿಜೆಪಿ ಮುಖಂಡರಿಗೆ ವಾಪಸ್ ಮಾಡಿದ್ದಾಗಿ ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ.
ಹಳಿಯಾಳ: ವಿಧಾನ ಪರಿಷತ್ ಚುನಾವಣೆಗೆ ಮತ ಚಲಾಯಿಸಿ ಮನೆಗೆ ವಾಪಾಸಾದ ಮುರ್ಕವಾಡ ಗ್ರಾಮದ ಗ್ರಾಪಂ ಸದಸ್ಯರೊಬ್ಬರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ತಾಲೂಕಿನ ಮುರ್ಕವಾಡ ಗ್ರಾಮ ಪಂಚಾಯಿತಿ ಸದಸ್ಯ ಲಕ್ಷ ್ಮ ಶಿವಾರಾಯ ಮಾನೆ (60) ಮೃತರಾದವರು. ಅವರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.
ಸರ್ಕಾರಿ ಯಂತ್ರ ದುರುಪ ಯೋಗ ಆಗಿರುವುದ ರಿಂದ ಒಂದೆರಡು ಕಡೆ ಹೆಚ್ಚು-ಕಮ್ಮಿ ಆಗಬಹುದು. ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಸೀಟುಗಳನ್ನು ಗೆಲ್ಲಲಿದ್ದೇವೆ. ಹಿಂದಿನ ಚುನಾವಣೆಯಲ್ಲಿ ಕಳೆದುಕೊಂಡಿದ್ದ ಸೀಟುಗಳನ್ನೂ ಗೆಲ್ಲುವ ಸೂಚನೆ, ಸಾಧ್ಯತೆಗಳಿವೆ. | ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ
ವಿಜಯಪುರ: ಪರಿಷತ್ ಚುನಾವಣೆಯಲ್ಲಿ ಚಲಾವಣೆಯಾದ ಮತದಾನದ ಬ್ಯಾಲೆಟ್ ಪೇಪರ್ ಬಹಿರಂಗಗೊಳಿಸಿದ ಕಾಂಗ್ರೆಸ್ ಮುಖಂಡ ಸೋಮನಾಥ ಕಳ್ಳಿಮನಿ ವಿರುದ್ಧ ಬಾದಾಮಿಯ ಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೋಮನಾಥ ಕಳ್ಳಿಮನಿ ಶುಕ್ರವಾರ ಬೆಳಗ್ಗೆ ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ ಹೆಸರು ಹಾಗೂ ಭಾವಚಿತ್ರ ಇರುವ ಬ್ಯಾಲೆಟ್ ಪೇಪರ್ ಮೇಲೆ ಮತ ಚಲಾಯಿಸಿದ ಪ್ರತಿಯನ್ನು ಗೌಪ್ಯವಾಗಿರಿಸದೆ ಫೋಟೊ ಹೊಡೆದು ಜಾಲತಾಣದಲ್ಲಿ ಹರಿಬಿಟ್ಟಿದ್ದರು.
ಮಂಡ್ಯ: ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಕಾಂಗ್ರೆಸ್ ಸೇರುತ್ತಾರೆನ್ನುವ ಚರ್ಚೆ ನಡೆಯುತ್ತಿದ್ದು, ಇದಕ್ಕೆ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಯಲ್ಲಿ ನಡೆದ ಅಚ್ಚರಿಯ ಬೆಳವಣಿಗೆಗಳು ಪುಷ್ಟಿ ನೀಡುತ್ತಿವೆ. ಈ ಬಾರಿಯ ಪರಿಷತ್ ಚುನಾವಣೆ
ಬಿಜೆಪಿಗಷ್ಟೇ ಅಲ್ಲದೆ ಕೆ.ಸಿ.ನಾರಾಯಣಗೌಡ ಅವರಿಗೂ ಪ್ರತಿಷ್ಠೆಯಾಗಿತ್ತು. ಅದೇ ರೀತಿ ಪ್ರಾರಂಭದಿಂದಲೂ ಚುನಾವಣೆಯನ್ನು ಸಮರ್ಪಕವಾಗಿ ಎದುರಿಸಿದ ಬಿಜೆಪಿ, ಕೊನೇ ಹಂತದಲ್ಲಿ ನಡೆದ ಬೆಳವಣಿಗೆಯಿಂದ ಕಂಗಾಲಾಯಿತು. ಈ ಬಗ್ಗೆ ಪಕ್ಷದೊಳಗೆ ಮತ್ತು ಕಾರ್ಯಕರ್ತರ ನಡುವೆ ನಡೆಯುತ್ತಿರುವ ಚರ್ಚೆ ಸಚಿವ ನಾರಾಯಣಗೌಡ ಕಾಂಗ್ರೆಸ್ ಸೇರುವುದು ಖಚಿತ ಎನ್ನುವಂತಿದೆ.
‘ಕೈ’ ಪರ ನಿಂತ ಸುಮಲತಾ: ವಿಧಾನಪರಿಷತ್ ಚುನಾವಣೆಯಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಷ್, ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗೂಳಿಗೌಡ ಪರ ನಿಂತಿದ್ದಾರೆ. ಲೋಕಸಭಾ ಚುನಾವಣೆ ವೇಳೆ ಜೆಡಿಎಸ್ ಹೊರತುಪಡಿಸಿ ಉಳಿದೆಲ್ಲ ಪಕ್ಷದವರು ಸುಮಲತಾಗೆ ಬೆಂಬಲ ನೀಡಿದ್ದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷದಿಂದಲೂ ಬೆಂಬಲ ಕೇಳಿದ್ದರು. ಆದರೆ ತಟಸ್ಥರಾಗಿರುವುದಾಗಿ ಹೇಳಿಕೊಂಡಿ ದ್ದರು. ಈ ನಡುವೆ ಸಂಸದೆ ಬೆಂಬಲಿಗರು ಕಾಂಗ್ರೆಸ್ ಪರ ಕೆಲಸ ಮಾಡಿದರು ಎನ್ನಲಾಗಿದೆ.
ಕೋಲಾರ: ಕಾಂಗ್ರೆಸ್ ಅಭ್ಯರ್ಥಿ ಅನಿಲಕುಮಾರ್ ಜತೆ ಸಂಭಾಷಣೆ ನಡೆಸುತ್ತಿದ್ದ ಬಿಜೆಪಿ ಸಂಸದ ಮುನಿಸ್ವಾಮಿ, ಅದನ್ನು ಚಿತ್ರೀಕರಿಸುತ್ತಿದ್ದ ಪತ್ರಕರ್ತರ ಮೊಬೈಲ್ ಕಸಿದುಕೊಂಡು ವಿಡಿಯೋ ಡಿಲೀಟ್ ಮಾಡಿ ಎಚ್ಚರಿಕೆ ನೀಡಿರುವ ಘಟನೆ ಬೇತಮಂಗಲದ ಮತದಾನದ ಕೇಂದ್ರದ ಬಳಿ ಶುಕ್ರವಾರ ನಡೆಯಿತು. ಮತದಾನ ಹಿನ್ನಲೆಯಲ್ಲಿ ಕೆಜಿಎಫ್ ತಾಲೂಕಿನ ಗ್ರಾಪಂ ಕೇಂದ್ರಗಳಿಗೆ ಭೇಟಿ ನೀಡಿದ್ದ ಮುನಿಸ್ವಾಮಿ, ಅಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜತೆ ಚರ್ಚೆ ನಡೆಸತೊಡಗಿದರು. ಇದನ್ನು ಕಂಡ ಪತ್ರಕರ್ತರೊಬ್ಬರು ಈ ದೃಶ್ಯ ಚಿತ್ರೀಕರಿಸುತ್ತಿದ್ದರು.