

ಬೆಂಗಳೂರು:
ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಗೆ ಆಡಳಿತರೂಢ ಕಾಂಗ್ರೆಸ್, ಐವರು ಹೊಸ ಮುಖಗಳು ಸೇರಿದಂತೆ ಎಂಟು ಅಭ್ಯರ್ಥಿಗಳನ್ನು ಪ್ರಕಟಿಸಿದೆ.
ಎನ್.ಎಸ್.ಬೋಸರಾಜು, ವಸಂತಕುಮಾರ್, ಡಾ.ಯತೀಂದ್ರ ಸಿದ್ದರಾಮಯ್ಯ, ಕೆ.ಗೋವಿಂದರಾಜು, ಐವಾನ್ ಡಿಸೋಜ, ಬಲ್ಕೀಶ್ ಬಾನು, ಜಗದೇವ್ ಗುತ್ತೇದಾರ್ ಅವರು ಕೈ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲಿದ್ದಾರೆ.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಸಿಂಧನೂರಿನ ಬಸನಗೌಡ ಬಾದರ್ಲಿ ಅವರನ್ನು ಅಭ್ಯರ್ಥಿಯನ್ನಾಗಿ ೋಷಿಸಲಾಗಿದೆ.
ವಿಧಾನ ಪರಿಷತ್‌ನ 7 ಸ್ಥಾನಕ್ಕೆ 400ಕ್ಕೂ ಹೆಚ್ಚು ಜನರು ಟಿಕೆಟ್ ಆಕಾಂಕ್ಷಿತರಾಗಿದ್ದರು. ಈ ಪಟ್ಟಿಯನ್ನು ಅಳೆದು ಸುರಿದು 60ಕ್ಕೆ ಇಳಿಸಲಾಗಿತ್ತು. ಅಂತಿಮವಾಗಿ ಹೈಕಮಾಂಡ್ ಯಾರಿಗೆ ಟಿಕೆಟ್ ಎನ್ನುವುದನ್ನು ನಿರ್ಣಯಿಸಿ ಪಟ್ಟಿ ಪ್ರಕಟಿಸಿದ್ದು, ಕಳೆದ ಒಂದು ತಿಂಗಳಿಂದ ನಡೆಯುತ್ತಿದ್ದ ಟಿಕೆಟ್ ಸರ್ಕಸ್‌ಗೆ ತೆರೆ ಬಿದ್ದಿದೆ.
ಕಲ್ಯಾಣ ಕರ್ನಾಟಕಕ್ಕೆ ಬಂಪರ್
ಕೈ ಪಟ್ಟಿಯಲ್ಲಿ ಈ ಬಾರಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಬಂಪರ್ ಉಡುಗೊರೆ ದೊರೆತಿದ್ದು, ಮೂವರು ಮೇಲ್ಮನೆ ಪ್ರವೇಶಿಸಲಿದ್ದಾರೆ. ರಾಯಚೂರು ಲೋಕಸಭಾ ಕ್ಷೇತ್ರದ ವಸಂತ ಕುಮಾರ್ ಮತ್ತು ಬಸನಗೌಡ ಬಾದರ್ಲಿ, ಕಲಬುರ್ಗಿಯ ಜಗದೇವ್ ಗುತ್ತೇದಾರ್ ಅವರು ಟಿಕೆಟ್ ಪಡೆದ ಅದೃಷ್ಠವಂತರು. ಈ ಮೂರು ಆಯ್ಕೆಗಳ ಹಿಂದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಭಾವವಿದೆ. ಇನ್ನು ಕರಾವಳಿ ಭಾಗದಿಂದ ಐವಾನ್ ಡಿಸೋಜ, ಮಲೆನಾಡು ಭಾಗದಿಂದ ಬಲ್ಕೀಸ್ ಬಾನು, ಹಳೆಮೈಸೂರು ಪ್ರಾಂತ್ಯದಿಂದ ಡಾ.ಯತೀಂದ್ರ, ಗೋವಿಂದರಾಜು ಅವಕಾಶ ಪಡೆದುಕೊಂಡಿದ್ದಾರೆ.
ಇಬ್ಬರು ಹಾಲಿಗಳಿಗೆ ಟಿಕೆಟ್
ಹಾಲಿ ವಿಧಾನ ಪರಿಷತ್ ಸದಸ್ಯರಾಗಿದ್ದ ಎಸ್.ಎನ್.ಬೋಸರಾಜು ಮತ್ತು ಕೆ.ಗೋವಿಂದರಾಜು ಅವರು ಮರಳಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸಣ್ಣ ನೀರಾವರಿ ಸಚಿವರು ಮತ್ತು ವಿಧಾನ ಪರಿಷತ್‌ನಲ್ಲಿ ಸಭಾ ನಾಯಕರೂ ಆಗಿದ್ದ ಎಸ್.ಎನ್.ಬೋಸರಾಜು ಅವರು ರಾಹುಲ್ ಗಾಂಧಿ ಕೃಪೆಯಿಂದ ಟಿಕೆಟ್ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹ್ಯಾಟ್ರಿಕ್ ಹೀರೋ
ಕೋಲಾರ ಜಿಲ್ಲೆಯ ಒಕ್ಕಲಿಗರಾದ ಕೆ.ಗೋವಿಂದರಾಜು ಅವರು ಕಾಂಗ್ರೆಸ್‌ನಿಂದ ಸತತವಾಗಿ 3ನೇ ಬಾರಿಗೆ ಟಿಕೆಟ್ ಗಿಟ್ಟಿಸಿಕೊಂಡು ಹ್ಯಾಟ್ರಿಕ್ ಹೀರೋ ಆಗಿರುವುದು ಪಕ್ಷದಲ್ಲಿಯೂ ಅಚ್ಚರಿ ಮೂಡಿಸಿದೆ. ಕೊನೆ ಕ್ಷಣದಲ್ಲಿ ಕೆ.ಗೋವಿಂದರಾಜು ಅವರು ಸಿಎಂ ಸಿದ್ದರಾಮಯ್ಯ ಕೃಪೆಯಿಂದ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಐವಾನ್‌ಗೆ ಒಲಿದ ಅದೃಷ್ಠ
ವಿಧಾನ ಪರಿಷತ್‌ನಲ್ಲಿ ಒಮ್ಮೆ ಸದಸ್ಯರಾಗಿ, ಮುಖ್ಯ ಸಚೇತಕರೂ ಆಗಿ ಕ್ರೀಯಾಶೀಲವಾಗಿ ಗುರುತಿಸಿಕೊಂಡಿದ್ದ ಮಂಗಳೂರಿನ ಐವಾನ್ ಡಿಸೋಜ ಅವರಿಗೆ ಮತ್ತೊಮ್ಮೆ ಅವಕಾಶ ಹರಸಿ ಬಂದಿದೆ. ಆ ಮೂಲಕ ಕರಾವಳಿಗೂ ಆದ್ಯತೆ ನೀಡಿದ್ದು, ಇದರಲ್ಲಿಯೇ ಕ್ರಿಶ್ಚಿಯನ್ ಕೋಟದ ಪಟ್ಟಿಯನ್ನು ಹಚ್ಚಿ ಡಬಲ್ ನ್ಯಾಯ ಒದಗಿಸಲಾಗಿದೆ.
ಅಚ್ಚರಿಯ ಆಯ್ಕೆ ಬಲ್ಕೀಸ್ ಬಾನು
ಕೈ ಪಟ್ಟಿಯಲ್ಲಿ ಕೊನೆಯ ತನಕ ಭದ್ರವಾತಿಯ ಬಲ್ಕೀಸ್ ಬಾನು ಅವರ ಹೆಸರು ಇರಲಿಲ್ಲ. ಹೈಕಮಾಂಡ್ ಹಂತದಲ್ಲಿ ಈ ಹೆಸರು ಕೊನೆ ಕ್ಷಣದಲ್ಲಿ ತೂರಿ ಬಂದಿದೆ. ಮುಸ್ಲೀಂ ಸಮುದಾಯ ಮಹಿಳೆಗೊಂದು ಸ್ಥಾನ ನೀಡಬೇಕು ಎನ್ನುವ ನಿರ್ಣಯ ಬಲ್ಕೀಸ್ ಬಾನು ಅವರಿಗೆ ವರವಾಗಿ ಪರಿಣಮಿಸಿದೆ. ಮೂಲತಂ ಶಿಕ್ಷಕಿಯಾಗಿದ್ದ ಬಲ್ಕೀಸ್ ಬಾನು ಜಿಲ್ಲಾ ಪರಿಷತ್ ಸದಸ್ಯೆಯಾಗಿ, ಶಿವಮೊಗ್ಗ ಜಿಪಂ ಅಧ್ಯಕ್ಷರಾಗಿಯೂ ಗಮನ ಸೆಳೆದಿದ್ದರು. ಜನತಾ ಪರಿವಾ ಮೂಲಕ ಬಾನು, ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷೆಯಾಗಿಯೂ ಕೆಲಸ ಮಾಡಿದ್ದರು.
ಪದಾಧಿಕಾರಿಗಳಿಗೂ ಆದ್ಯತೆ
ಪಕ್ಷದ ಸಂಘಟನೆಯ ದೃಷ್ಟಿಯಿಂದ ಪಕ್ಷದ ಪದಾಧಿಕಾರಿಗಳಾಗಿದ್ದವರಿಗೂ ಆದ್ಯತೆ ನೀಡಲಾಗಿದೆ.
ಇತ್ತೀಚೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದ ಪರಿಶಿಷ್ಟ ಜಾತಿಯ (ಎಡಗೈ) ವಸಂತ ಕುಮಾರ್, ಕಲಬುರ್ಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಜಗದೇವ ಗುತ್ತೇದಾರ್, ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಬಸನಗೌಡ ಬಾದರ್ಲಿ ಅವರಿಗೆ ಅದೃಷ್ಟ ಒಲಿದುಬಂದಿದೆ.
ಖರ್ಗೆ, ಸಿಎಂ ಮಾತಿಗೆ ಮಣೆ
ಕೈ ಪಕ್ಷದ 8 ಅಭ್ಯರ್ಥಿಗಳ ಪೈಕಿ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೆಚ್ಚಿನ ಕೋಟಾ ಲಭ್ಯವಾಗಿದೆ. ಅವರ ಪಟ್ಟಿಯಲ್ಲಿದ್ದ ಮೂವರು ಟಿಕೆಟ್ ಗಿಟ್ಟಿದ್ದಾರೆ. ಇನ್ನು ಸಿಎಂ ನೀಡಿದ್ದ ನಾಲ್ವರು ಪಟ್ಟಿಯಲ್ಲಿ ಇಬ್ಬರಿಗೆ ಟಿಕೆಟ್ ಸಿಕ್ಕಿದೆ. ಡಾ.ಯತೀಂದ್ರ ಮತ್ತು ಎನ್.ಎಸ್.ಬೋಸರಾಜು ಅವರು ರಾಹುಲ್ ಗಾಂಧಿ ಕೃಪೆಯಿಂದ ಟಿಕೆಟ್ ಪಡೆದಿದ್ದಾರೆ ಎಂದು ಹೇಳಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಈ ಬಾರಿ ಹೆಚ್ಚಿನ ಆಯ್ಕೆ ಲಭ್ಯವಾಗಿಲ್ಲ. ಬಸನಗೌಡ ಬಾದರ್ಲಿ ಅವರು ಡಿಕೆಶಿ ಆಯ್ಕೆ ಎಂದು ಹೇಳಲಾಗುತ್ತಿದೆ.
ಅಭ್ಯರ್ಥಿಗಳು:
ಎನ್.ಎಸ್.ಬೋಸರಾಜು
ವಸಂತಕುಮಾರ್
ಡಾ.ಯತೀಂದ್ರ ಸಿದ್ದರಾಮಯ್ಯ
ಕೆ.ಗೋವಿಂದರಾಜು
ಐವಾನ್ ಡಿಸೋಜ
ಬಲ್ಕೀಶ್ ಬಾನು
ಜಗದೇವ್ ಗುತ್ತೇದಾರ್
ಬಸನಗೌಡ ಬಾದರ್ಲಿ
ಜಾತಿವಾರು
ಕುರುಬ-1
ಒಕ್ಕಲಿಗ-1
ಲಿಂಗಾಯಿತ-1
ಮುಸ್ಲಿಂ-1
ಕ್ರಿಶ್ಚಿಯನ್-1
ಪರಿಶಿಷ್ಟ ಜಾತಿ(ಎಡಗೈ)-1
ಬಿಸಿಎಂ-2
ಪ್ರದೇಶವಾರು:
ಕಲ್ಯಾಣ ಕರ್ನಾಟಕ-4
ಹಳೆಮೈಸೂರು ಭಾಗ-2
ಕರಾವಳಿ -1
ಮಲೆನಾಡು-1
ಕಲ್ಯಾಣ ಕರ್ನಾಟಕ-ಇಲ್ಲ