

ಬೆಂಗಳೂರು: ಜೆಡಿಎಸ್‌ಗೆ ಮೈತ್ರಿ ಮತ್ತೆ ಮುಳುವಾಗಿದೆ. ಮೇಲ್ಮನೆಗೆ ನಡೆಯುವ ಆರು ಕ್ಷೇತ್ರಗಳ ಚುನಾವಣೆಯಲ್ಲಿ ಜೆಡಿಎಸ್‌ಗೆ ಒಂದೇ ಒಂದು ಸ್ಥಾನ ಬಿಟ್ಟುಕೊಡಲಾಗಿದೆ. ಹೀಗಾಗಿ ಮೈತ್ರಿ ಮುಂದುವರಿಯುವ ಬಗ್ಗೆ ಅನುಮಾನಗಳು ಶುರುವಾಗಿವೆ.
ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಿಂದ ತತ್ತರಿಸಿದ್ದ ಜೆಡಿಎಸ್‌ಗೆ ಬಿಜೆಪಿ ಮತ್ತೊಂದು ಮರ್ಮಾಘಾತ ನೀಡಿದೆ. ಈ ಹಿಂದೆ ರಾಜ್ಯಮಟ್ಟದ ನಾಯಕರ ಜತೆ ಚರ್ಚಿಸಿದಂತೆ ಆರು ಕ್ಷೇತ್ರಗಳ ಪೈಕಿ 2 ಕ್ಷೇತ್ರ ಬಿಟ್ಟುಕೊಡುವ ಮಾತಾಗಿತ್ತು. ಆದರೆ ಈಗ ಆ ಮಾತುಕತೆ ಮುರಿದಂತಾಗಿದೆ. ಹೀಗಾಗಿ ಒಂದು ಸ್ಥಾನಕ್ಕೆ ಜೆಡಿಎಸ್ ತೃಪ್ತಿಪಟ್ಟುಕೊಳ್ಳುವ ಬಗ್ಗೆ ಸಂದೇಹವಿದೆ.
ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ ಎರಡು ಸ್ಥಾನ ಬಿಟ್ಟುಕೊಡುವ ಮಾತು ಕೇಳಿ ಬಂದಾಗ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ‘ಎರಡು ಕ್ಷೇತ್ರಕ್ಕೆ ನನಗೆ ಈ ಮೈತ್ರಿ ಬೇಕಿತ್ತ್ತಾ?’ ಎಂದು ಗುಟುರು ಹಾಕಿದ್ದರು.
ಮೇಲ್ಮನೆ ಚುನಾವಣೆಗೆ ಎರಡು ಸ್ಥಾನ ನೀಡುವ ಒಡಂಬಡಿಕೆ ಮಾಡಿಕೊಂಡು ಹಠಾತ್ ಬೆಳವಣಿಗೆಯಲ್ಲಿ ಒಂದು ಸ್ಥಾನ ನೀಡಿದರೆ ಜೆಡಿಎಸ್ ಒಪ್ಪುವುದು ಕಷ್ಟ ಎನ್ನಲಾಗುತ್ತಿದೆ. ಅಲ್ಲದೆ ಬಿಜೆಪಿ ಈಗಾಗಲೇ ಅಭ್ಯರ್ಥಿಗಳನ್ನು ೋಷಿಸಿದ್ದು, ಈ ಹಂತದಲ್ಲಿ ಅಭ್ಯರ್ಥಿಗಳನ್ನು ಬದಲಿಸುವುದು ಕಷ್ಟ ಹಾಗಾಗಿ ಜೆಡಿಎಸ್ ಇಕ್ಕಟ್ಟಿಗೆ ಸಿಲುಕಿದೆ.
ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಎಸ್.ಎಲ್.ಭೋಜೇಗೌಡ ಹಾಗೂ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಕೆ.ಟಿ. ಶ್ರೀಕಂಠೇಗೌಡರನ್ನು ಕಣಕ್ಕಿಳಿಸಲು ಜೆಡಿಎಸ್ ನಿರ್ಧರಿಸಿತ್ತು. ಈಗ ಎಸ್.ಎಲ್.ಭೋಜೇಗೌಡರಿಗೆ ಮಾತ್ರ ಅವಕಾಶ ಸಿಗಲಿದೆ.
ಮೈತ್ರಿಯಿಂದ ಹಿಂದೆ ಸರಿಯಲು ಬಿಜೆಪಿ ಈ ತಂತ್ರ ಅನುಸರಿಸಿತೆ ಎಂಬ ಜಿಜ್ಞಾಸೆಯೂ ರಾಜಕೀಯ ವಲಯದಲ್ಲಿ ಶುರುವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡ ಬಿಜೆಪಿ, ಪ್ರಜ್ವಲ್ ಪ್ರಕರಣದಿಂದ ರಾಷ್ಟ್ರ, ಅಂತಾರಾಷ್ಟ್ರ ಮಟ್ಟದಲ್ಲಿ ಮುಜುಗರ ಅನುಭವಿಸುತ್ತಿದೆ. ಈಗ ತಾನಾಗಿಯೇ ಮೈತ್ರಿ ಮುರಿದುಕೊಳ್ಳುವ ಬದಲು ಜೆಡಿಎಸ್ ಮೈತ್ರಿ ಕಡಿದುಕೊಳ್ಳಲಿ ಎಂಬ ತಂತ್ರ ಈ ಟಿಕೆಟ್ ಹಂಚಿಕೆ ಹಿಂದೆ ಅಡಗಿರಬಹುದು ಎಂಬ ಚರ್ಚೆ ನಡೆದಿದೆ.