ಕುವೆಂಪು ವಿವಿ ಕುಲಪತಿಗೆ ಎಂಎಲ್‌ಸಿ ಅರುಣ್ ಬಹಿರಂಗ ಪತ್ರ

Arun
Published on

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯ ಸಂಸ್ಥಾಪನಾ ದಿನದಂದೇ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅವರಿಗೆ ಬಹಿರಂಗ ಪತ್ರ ಬರೆದಿರುವ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ವಿವಿ ಆಡಳಿತದ ಅವ್ಯವಸ್ಥೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಹಲವು ಪ್ರಶ್ನೆಗಳನ್ನು ಕುಲಪತಿ ಮುಂದೆ ಇರಿಸಿದ್ದಾರೆ.

ಫೆ.10ರಂದು ಪ್ರಾರಂಭವಾದ ಸಮ ಸೆಮಿಸ್ಟರ್‌ಗಳನ್ನು ಕೇವಲ 90 ದಿನಗಳಲ್ಲೇ ಪೂರ್ಣಗೊಳಿಸಿ, ಮೇ 15ರೊಳಗೆ ಶೈಕ್ಷಣಿಕ ವರ್ಷ ಮುಕ್ತಾಯಗೊಳಿಸಿದ್ದು ಏಕೆ? ಇತರ ವಿವಿ ವೇಳಾಪಟ್ಟಿಯೊಂದಿಗೆ ಹೋಲಿಸಿದರೆ ಈ ಅನಿವಾರ್ಯ ಕ್ರಮದ ಅಗತ್ಯವಿತ್ತೇ? ವಿದ್ಯಾರ್ಥಿಗಳು ಪಾಠ ಪ್ರವಚನಗಳಿಂದ ವಂಚಿತರಾಗಲಿಲ್ಲವೇ? ಅಧ್ಯಾಪಕರು ಇದರಿಂದ ಒತ್ತಡ ಎದುರಿಸುವಂತಾಗಲಿಲ್ಲವೇ ಎಂದು ಡಿ.ಎಸ್.ಅರುಣ್ ಪತ್ರಿಕಾ ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.

ಜೂ.13ರಂದು ಎಲ್ಲ ಪದವಿ ಪರೀಕ್ಷೆಗಳು ಮುಗಿದಿದ್ದು, ಅಂತಿಮ ವರ್ಷದ ಪರೀಕ್ಷೆಗಳು ಜೂ.4ರಂದೇ ಪೂರ್ಣಗೊಂಡರೂ ಮೌಲ್ಯಮಾಪನ ಇನ್ನೂ ಪ್ರಾರಂಭಿಸದಿರುವುದು ನಿರ್ಲಕ್ಷೃ. ಮೌಲ್ಯಮಾಪನ ನಡೆಸದ ಮೇಲೆ ತುರ್ತಾಗಿ ಪರೀಕ್ಷೆಗಳನ್ನು ನಡೆಸಿದ್ದೇಕೆ, ಕೆಲ ಪ್ರಾಧ್ಯಾಪಕರು ಮೌಲ್ಯಮಾಪನ ಬಹಿಷ್ಕರಿಸಿರುವ ಮಾಹಿತಿ ಇದೆಯೇ, ಇದರ ಬಗ್ಗೆ ಕೈಗೊಂಡ ನಿರ್ಧಾರಗಳೇನು? ಇನ್ನೂ ಅಧಿಕಾರಿಗಳ ಸಭೆಯನ್ನೇಕೆ ಕರೆದಿಲ್ಲ. ವಿವಿ ಮೌನಕ್ಕೆ ಕಾರಣವೇನು ಎಂದು ಕೇಳಿದ್ದಾರೆ.

ವಿದ್ಯಾರ್ಥಿಗಳು ಲಿತಾಂಶಕ್ಕಾಗಿ ಇನ್ನೆಷ್ಟು ದಿನ ಕಾಯಬೇಕು, ಅವರ ಭವಿಷ್ಯಕ್ಕೆ ಇದರಿಂದ ತೊಂದರೆಯಾಗುವುದಿಲ್ಲವೆ? ಬೇರೆ ವಿವಿಗಳಿಗೆ ಹೋಲಿಸಿದರೆ ಈ ವಿವಿ ಪರೀಕ್ಷಾ ಶುಲ್ಕ ದುಬಾರಿಯಾಗಿದೆ. ಆದರೂ ಮೌಲ್ಯಮಾಪಕರ ಸಂಭಾವನೆ ಕಡಿತಗೊಳಿಸಿರುವುದೇಕೆ, ಡಿಜಿಟಲ್ ಮೌಲ್ಯಮಾಪನ ಕೇವಲ ಪದವಿ ಪರೀಕ್ಷೆಗಳಿಗೆ ಸೀಮಿತವಾಗಿರುವುದೇಕೆ, ಡಿಜಿಟಲ್‌ನಿಂದ ಮೌಲ್ಯಮಾಪನದ ಗುಣಮಟ್ಟ, ಗೌಪ್ಯತೆ ಹಾಗೂ ಶ್ರೇಷ್ಠತೆಗೆ ಹಾನಿಯಾಗುವುದಿಲ್ಲವೇ ಎಂದು ಪ್ರಶ್ನಿಸಿರುವ ಅವರು ಸಮರ್ಪಕ ಉತ್ತರ ನೀಡುವಂತೆ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net