

ಬೆಂಗಳೂರು: ಅಭಿವೃದ್ಧಿ ಕುಂಠಿತ, ಅನುದಾನ ವಂಚಿತರಾಗಿರುವ ಆಡಳಿತ ಕಾಂಗ್ರೆಸ್ ಪಕ್ಷದ ಶಾಸಕರೇ ಸರ್ಕಾರದ ವಿರುದ್ಧ ತಿರುಗಿ ಬಿದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ಲೇಷಿಸಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ‘ಸಂಘಟನಾ ಪರ್ವ’ ರಾಜ್ಯಮಟ್ಟದ ಕಾರ್ಯಾಗಾರದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ರಾಜ್ಯದ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ಆಡಳಿತ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುತ್ತಿದೆ. ಇದರಿಂದಾಗಿ ಆಡಳಿತ ಪಕ್ಷದ ಶಾಸಕರು ರೋಸಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಅತಿವೃಷ್ಟಿ, ಪ್ರವಾಹದಿಂದ ತತ್ತರಿಸಿರುವ ರೈತರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಆದರೆ ಮೂರು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯೇ ಕಾಂಗ್ರೆಸ್‌ಗೆ ಮುಖ್ಯವಾಗಿದೆ. ಒಂದೊಂದು ವಿಧಾನಸಭೆ ಕ್ಷೇತ್ರಕ್ಕೆ ತಲಾ 10 ಸಚಿವರು, ಶಾಸಕರಿಗೂ ಜವಾಬ್ದಾರಿ ನೀಡಿ, ಹಣ, ಹೆಂಡ ಹಂಚಿ ಗೆಲ್ಲಲು ಹೊಂಚು ಹಾಕಿದ್ದಾರೆ ಎಂದು ಆರೋಪಿಸಿದರು.
ಕೇವಲ ಒಂದೂವರೆ ವರ್ಷದಲ್ಲಿ ಕಾಂಗ್ರೆಸ್ ಸರ್ಕಾರದ ಬಗ್ಗೆ ಜನರು ಬೇಸತ್ತಿದ್ದಾರೆ. ತೆರಿಗೆಗಳ ಹೊರೆ ಹೆಚ್ಚಳ, ಭ್ರಷ್ಟಾಚಾರ, ದಲಿತ, ರೈತ ವಿರೋಧಿ ನಡೆಯು ಆಡಳಿತ ವಿರೋಧಿ ಅಲೆಯನ್ನು ಸೃಷ್ಟಿಸಿದೆ ಎಂದರು.
ಪ್ರತಿಪಕ್ಷ ಬಿಜೆಪಿಯು ಧ್ವನಿ ಎತ್ತಿ ಹೋರಾಟ ಮಾಡಿರುವುದು ಜನರ ಗಮನಸೆಳೆದಿದೆ. ಸಂಡೂರು, ಶಿಗ್ಗಾಂವಿ ಕ್ಷೇತ್ರಗಳಲ್ಲಿ ಬಿಜೆಪಿ, ಚನ್ನಪಟ್ಟಣದಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲ್ಲುವ ವಾತಾವರಣವಿದೆ ಎಂದು ಹುರಿದುಂಬಿಸಿದರು.
ಪಕ್ಷದಿಂದ ಎಲ್ಲ ಅವಕಾಶ, ಅಧಿಕಾರ ಪಡೆದಿದ್ದ ಚನ್ನಪಟ್ಟಣದ ಮುಖಂಡ ಬಿಜೆಪಿ ತೊರೆದು, ಬೇರೆ ಪಕ್ಷಕ್ಕೆ ಹೋಗಿದ್ದಾರೆ. ಕ್ಷೇತ್ರದ ಜನರು ತಕ್ಕಪಾಠ ಕಲಿಸುತ್ತಾರೆ ಎಂದು ಸಿ.ಪಿ.ಯೋಗೇಶ್ವರ್ ಹೆಸರೆತ್ತದೆ ಬಿ.ವೈ.ವಿಜಯೇಂದ್ರ ಹರಿಹಾಯ್ದರು.
ಸದಸ್ಯತ್ವ ನೋಂದಣಿ ಅಭಿಯಾನದಡಿ ರಾಜ್ಯದಲ್ಲಿ ಈಗಾಗಲೇ 65 ಲಕ್ಷ ಜನರು ಸದಸ್ಯತ್ವ ನೋಂದಣಿ ಮಾಡಿಕೊಂಡಿದ್ದು, 58 ಸಾವಿರ ಬೂತ್‌ಗಳಲ್ಲಿ ಈ ಪ್ರಕ್ರಿಯೆ ನಡೆದಿದೆ. ಎಲ್ಲರೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಂದಿನ ಹಂತದಲ್ಲಿ ಪಕ್ಷದ ವಿವಿಧ ಸಮಿತಿಗಳು ರಚನೆ ಮತ್ತಿತರ ಸಂಘಟನಾತ್ಮಕ ಪ್ರಕ್ರಿಯೆ ನಡೆಯಲಿವೆ. ಬೇರೆ ಯಾವುದೇ ರಾಜಕೀಯ ಪಕ್ಷಗಳಲ್ಲಿ ಇಷ್ಟೊಂದು ವ್ಯವಸ್ಥಿತ, ಸಂಘಟನಾತ್ಮಕ ಚಿಂತನೆಯಿಲ್ಲವೆಂದು ಬಿ.ವೈ.ವಿಜಯೇಂದ್ರ ಹೇಳಿಕೊಂಡರು.
ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ 2.15 ಲಕ್ಷ ಸದಸ್ಯತ್ವ ನೋಂದಾಯಿಸಿ ದೇಶದಲ್ಲೇ ನಂಬರ್ ಒನ್ ಸ್ಥಾನ ಪಡೆದಿದ್ದಕ್ಕೆ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್ ಹಾಗೂ ಬೀದರ್ ಜಿಲ್ಲೆಯ ಔರಾದ್ ಮಂಡಲ ರಾಜ್ಯದಲ್ಲಿ ಐದನೇ ಸ್ಥಾನ ಪಡೆದ ಸಾಧನೆಗಾಗಿ ಮಾಜಿ ಸಚಿವ, ಶಾಸಕ ಪ್ರಭು ಚವ್ಹಾಣ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ವಿಜಯಪುರ ಜಿಲ್ಲೆಯಾದ್ಯಂತ ವಕ್ಫ್ ಮಂಡಳಿಯಿಂದ ಆಗುತ್ತಿರುವ ತೊಂದರೆ ಹಾಗೂ ಬಾಧಿತ ರೈತರ ಅಹವಾಲು ಕೇಳಲು ರಾಜ್ಯ ಬಿಜೆಪಿ ರಚಿಸಿದ್ದ ಅಧ್ಯಯನ ತಂಡವನ್ನು ಪರಿಷ್ಕರಿಸಲಾಗಿದೆ.
ಈ ತಂಡಕ್ಕೆ ಮತ್ತಷ್ಟು ಸದಸ್ಯರನ್ನು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೋಮವಾರ ಸೇರಿಸಿದ್ದು, ತಂಡವು ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ, ರೈತರ ಸಮಸ್ಯೆಯ ಸಮಗ್ರ ವರದಿ ನೀಡಲು ಸೂಚಿಸಿದ್ದಾರೆ.
ತಂಡದಲ್ಲಿ ಯಾರೆಲ್ಲ ಇದ್ದಾರೆ ?: ಸಂಸದರಾದ ಗೋವಿಂದ ಕಾರಜೋಳ, ರಮೇಶ್ ಜಿಗಜಿಣಗಿ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ್, ಹರೀಶ್ ಪೂಂಜಾ, ಮಹೇಶ್ ಟೆಂಗಿನಕಾಯಿ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಪುರ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ, ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಎಂ.ಬಿ.ಜಿರಲಿ.