

ಬೆಂಗಳೂರು: ಎಫ್ ಐಆರ್ ನಲ್ಲಿ ಉದ್ದೇಶಪೂರ್ವಕವಾಗಿ ಶಾಸಕರಾದ ಎ.ಎಸ್.ಪೊನ್ನಣ್ಣ, ಮಂಥರಗೌಡ ಹೆಸರು ಕೈಬಿಡಲಾಗಿದೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿ, ದೂರಿನ ಪ್ರಕಾರ ಎಫ್ ಐಆರ್ ಪಟ್ಟು ಹಿಡಿದು ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ಆಸ್ಪತ್ರೆ ಆವರಣದಲ್ಲಿ ಶುಕ್ರವಾರ ಧರಣಿ ನಡೆಸಿತು.
ಬಿಜೆಪಿ ಕಾರ್ಯಕರ್ತ, ಖಾಸಗಿ ಕಂಪನಿ ಉದ್ಯೋಗಿ ಮೂಲತಃ ಕೊಡಗು ಜಿಲ್ಲೆಯ ವಿನಯ್ ಆತ್ಮಹತ್ಯೆಗೆ ಶರಣಾಗುವ ಮುನ್ನ ಡೆತ್‌ನೋಟ್‌ನಲ್ಲಿ ಎಲ್ಲ ವಿವರಿಸಿ, ಪುರಾವೆಗಳನ್ನು ಒದಗಿಸಿದ್ದಾರೆ.
ಮೃತನ ಹಿರಿಯ ಸೋದರ ಜೀವನ್ ಈ ಬಗ್ಗೆ ನೀಡಿದ ದೂರಿನಲ್ಲಿ ಶಾಸಕರಿಬ್ಬರನ್ನು ಹೆಸರಿಸಿದ್ದರೂ ಎಫ್ ಐಆರ್ ನಲ್ಲಿ ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ ಎಂದು ಧರಣಿ ನಿರತರು ಆರೋಪಿಸಿದರು.
ವಿಧಾನ ಮಂಡಲದ ಉಭಯ ಸದನಗಳ ಪ್ರತಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಶಾಸಕ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಮತ್ತಿತರ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಆಸ್ಪತ್ರೆ ಆವರಣದಲ್ಲಿ ಬೆಳಗ್ಗೆ 11 ರಿಂದ ಹೂಡಿದ್ದ ಧರಣಿ ರಾತ್ರಿ 8ಗಂಟೆಯಾದರೂ ಮುಂದುವರಿದ ಕಾರಣ ಹೆಣ್ಣೂರು ವಲಯದ ಡಿಸಿಪಿ ದೇವರಾಜ ಸ್ಥಳಕ್ಕೆ ಆಗಮಿಸಿ, ಮತ್ತೊಮ್ಮೆ ದೂರು ನೀಡಲು ಹೇಳಿದಾಗ ಬಿಜೆಪಿ ಮುಖಂಡರು ದೂರಿದರು.
ಮೊದಲು ಕೊಟ್ಟ ದೂರನ್ನೇ ಪರಿಗಣಿಸಿ ಶಾಸಕರಿಬ್ಬರ ಹೆಸರು ದಾಖಲಿಸಲು ಒತ್ತಾಯಿಸಿದಾಗ ಎ್ಐಆರ್ ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದೆ ಎಂದು ಡಿಸಿಪಿ ತಾಂತ್ರಿಕ, ಕಾನೂನು ತೊಡಕು ವಿವರಿಸಿದರು. ಆದರೆ ಬಿಜೆಪಿ ಮುಖಂಡರ ಒತ್ತಾಯಕ್ಕೆ ಸ್ಪಂದಿಸಿ ಮೃತನ ಸೋದರ ಜೀವನ್ ನೀಡಿದ ಮನವಿಯನ್ನು ಸ್ವೀಕರಿಸಿದರು.
ಈಗ ವಾಪಸ್ ಪಡೆದ ಧರಣಿಯನ್ನು ಕೊಡಗಿನಲ್ಲಿ ಶನಿವಾರ ಮುಂದುವರಿಸುತ್ತೇವೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭಾಗಿಯಾಗಲಿದ್ದಾರೆ. ಎಫ್ ಐಆರ್ ನಲ್ಲಿ ಒಂದೇ ಹೆಸರಿದ್ದು, ಇನ್ನೂ ಎರಡು ಹೆಸರು ಸೇರಿಸಲು ಒತ್ತಾಯಿಸಿದ್ದೇವೆ ಎಂದು ಆರ್.ಅಶೋಕ್ ಹೇಳಿದರು.
ಡೆತ್‌ನೋಟ್, ದೂರಿನಲ್ಲಿ ಮೂವರ ಹೆಸರುಗಳಿದ್ದರೂ ಪೊಲೀಸರು ಉದ್ದೇಶಪೂರ್ವಕವಾಗಿ ಶಾಸಕರಾದ ಪೊನ್ನಣ್ಣ ಹಾಗೂ ಮಂಥರಗೌಡ ಹೆಸರುಗಳನ್ನು ಬಿಟ್ಟಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.