

ವಿಜಯಪುರ: ಆಲಮಟ್ಟಿ ಜಲಾಶಯದಲ್ಲಿ 524.256 ಮೀಟರ್‌ವರೆಗೆ ನೀರು ನಿಲ್ಲಿಸಲು ಅವಕಾಶವಿದ್ದರೂ 522 ಮೀಟರ್‌ಗೆ ಮಾತ್ರ ನೀರು ನಿಲ್ಲಿಸಲು ಮುಂದಾಗಿರುವ ಬಗ್ಗೆ ನಡೆಯುತ್ತಿರುವ ಚರ್ಚೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಬೇಕೆಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಆಗ್ರಹಿಸಿದರು.
ಆಲಮಟ್ಟಿ ಜಲಾಶಯದ ಎತ್ತರವನ್ನು ಹೆಚ್ಚಿಸುವ ನಿರ್ಧಾರದಿಂದ ಸರ್ಕಾರ ಯಾವ ಕಾರಣಕ್ಕೂ ಹಿಂದಕ್ಕೆ ಸರಿಯಬಾರದು. ನೀರಾವರಿ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಸರ್ಕಾರ ಯಾವುದೇ ಆಗಿರಲಿ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ರ ಅನುಷ್ಟಾನದ ವಿಷಯದಲ್ಲಿ ನಮ್ಮದು ನಿರಂತರ ಹೋರಾಟ ಇರಲಿದೆ. ಪ್ರಸಂಗ ಬಂದರೆ ಅಧಿಕಾರದಿಂದ ದೂರವುಳಿಯಲೂ ಸಿದ್ಧ ಎಂದು ಗುರುವಾರ ಗಟ್ಟಿಧ್ವನಿಯಲ್ಲಿ ಅವರು ಪ್ರತಿಪಾದಿಸಿದರು.
ಈಗಾಗಲೇ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಪೂರ್ಣತೆಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ನಮ್ಮದು ಸಂಪೂರ್ಣ ಬೆಂಬಲವಿದೆ. ಹೋರಾಟದಲ್ಲಿ ಕಾಂಗ್ರೆಸ್ ಶಾಸಕರೂ ಇದ್ದಾರೆ. ನೀರಾವರಿ ವಿಚಾರದಲ್ಲಿ ಇದು ನಮ್ಮ ಬದ್ಧತೆಯನ್ನು ಪ್ರದರ್ಶಿಸುತ್ತದೆ ಎಂದ ಯಶವಂತರಾಯಗೌಡ ಪಾಟೀಲರು, ನಮ್ಮ ಜಿಲ್ಲೆಗೆ ಜನಪ್ರಿಯ ಯೋಜನೆಗಳನ್ನು ಒಂದು ವರ್ಷ ನಿಲ್ಲಿಸಿದರೂ ಚಿಂತೆಯಿಲ್ಲ ನೀರಾವರಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಲಿ ಎಂದು ಕಳಕಳಿ ವ್ಯಕ್ತಪಡಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆ ಘೋಷಣೆಯಾಗಬೇಕಿದೆ. ಕೃಷ್ಣೆ, ಕಾವೇರಿಗೆ ನೀಡುವ ಆದ್ಯತೆ ಉಳಿದ ನದಿಗಳಿಗೂ ಸಿಗಬೇಕಿದೆ. ಭೀಮೆಯ ಬಗ್ಗೆ ಗಮನ ಹರಿಸಬೇಕಿದೆ. ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಬ್ಯಾರೇಜ್‌ಗಳ ನಿರ್ವಹಣೆಗೆ ಅನುದಾನ ನೀಡಲಿ ಎಂದ ಯಶವಂತರಾಯಗೌಡರು, ಚುನಾವಣೆ ಪೂರ್ವದಲ್ಲಿ ನಡೆಸಿದ ಕೃಷ್ಣಾ ಜಲಾಂದೋಲನ ಸಮಾವೇಶದಲ್ಲಿ ವರ್ಷಕ್ಕೆ 40 ಸಾವಿರ ಕೋಟಿ ರೂಪಾಯಿ ಮೀಸಲಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಇನ್ನೂ ಕಾಲಾವಕಾಶವಿದ್ದು, ಆ ನಿಟ್ಟಿನಲ್ಲಿ ಸರ್ಕಾರ ಕ್ರಮ ವಹಿಸಲಿದೆ ಎಂದು ಪ್ರತಿಕ್ರಿಯಿಸಿದರು.
ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ತಂದ ಕೀರ್ತಿ ಕಾಂಗ್ರೆಸ್‌ನ ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿಗೆ ಸಲ್ಲುತ್ತದೆ. ರಾಜ್ಯದಲ್ಲಿ ತಾಂತ್ರಿಕ ಕಾರಣಗಳಿಂದಾಗಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಗೆ ಚುನಾವಣೆ ನಡೆದಿಲ್ಲ. ಶೀಘ್ರದಲ್ಲಿಯೇ ಸರ್ಕಾರ ಚುನಾವಣೆ ನಿಗದಿಮಾಡಬೇಕೆಂದು ಒತ್ತಾಯಿಸಲಾಗುವುದು. ಪಂಚಾಯತ್ ವ್ಯವಸ್ಥೆಯಿಂದ ಮಾತ್ರ ಅಧಿಕಾರ ವಿಕೇಂದ್ರೀಕರಣವಾಗಿ, ಸಂವಿಧಾನದ ಮೂಲ ಆಶಯ ಈಡೇರಲಿದೆ. ಕೆಳ ಹಂತದಿಂದ ಬಂದ ನಮಗೆ ಅದರ ಮಹತ್ವ ಗೊತ್ತಿದ್ದು, ಸರ್ಕಾರಕ್ಕೆ ಒತ್ತಾಯಿಸಿ ಚುನಾವಣೆ ನಡೆಯುವಂತೆ ನೋಡಿಕೊಳ್ಳಲಾಗುವುದು ಎಂದು ಯಶವಂತರಾಯಗೌಡರು ಪ್ರತಿಕ್ರಿಯಿಸಿದರು.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದಾಗಿ ಇತರೆ ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲವೆಂಬ ಆಪಾದನೆ ಇದೆ. ಆದರೆ, ಗ್ಯಾರಂಟಿ ಯೋಜನೆಗಳಿಂದ ಕಡುಬಡವರಿಗೆ ಸಾಕಷ್ಟು ಅನುಕೂಲವಾಗಿದೆ. ರಸ್ತೆಗಳು ಹದಗೆಟ್ಟಿರುವುದು ನಿಜ. ಆತ್ಮಸಾಕ್ಷಿಯಾಗಿ ಇದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಮೂಲ ಸೌಕರ್ಯಕ್ಕೆ ಆದ್ಯತೆ ಸಿಗಬೇಕಿದೆ. ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ನಡೆಸುವುದು ಕಷ್ಟದಾಯಕವಾಗಿದ್ದು, ಸರ್ಕಾರ ನೆರವಿಗೆ ಧಾವಿಸಬೇಕಿದೆ. ಯಾವುದೇ ಕಾರಣಕ್ಕೂ ಉತ್ತರ ಕರ್ನಾಟಕ ಪ್ರತ್ಯೇಕತೆಯ ಭಾವ ಬರದಂತೆ ಆಳುವ ಸರ್ಕಾರಗಳು ನೋಡಿಕೊಳ್ಳಬೇಕಿದೆ ಎಂದು ಶಾಸಕ ಪಾಟೀಲ ಪ್ರಶ್ನೆಗಳಿಗೆ ಉತ್ತರಿಸಿದರು.
‘ಬಸವಣ್ಣನವರ ಹಾಗೆ ನದಿಗೆ ಜಿಗಿಯಬೇಕಾಗುತ್ತದೆ’ ಎಂಬ ಪದ ಬಳಕೆ ಮೂಲಕ ಬಸವಣ್ಣನವರು ಆತ್ಮಹತ್ಯೆ ಮಾಡಿಕೊಂಡರು ಎಂಬಂತೆಯೋ...ಬಸವಣ್ಣ ಪಲಾಯಾನವಾದಿ ಎಂಬಂತೆಯೋ ಬಿಂಬಿಸಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳರ ವಿರುದ್ಧ ಕೇಳಿ ಬರುತ್ತಿರುವ ಟೀಕೆಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಯಶವಂತರಾಯಗೌಡ ಪಾಟೀಲರು, ಬಸವಣ್ಣನವರು ಏನೆಂದು ತಿಳಿಯದೇ ಮಾತನಾಡುವವರ ಬಗ್ಗೆ ನಾನು ಮಾತನಾಡಲ್ಲ. ಬಸವಣ್ಣ ವಿಶ್ವ ನಾಯಕ. ಜಗತ್ತಿಗೆ ಬೆಳಕು. ಏನೇ ಮಾತನಾಡುವ ಮುನ್ನ ಅವರ ಬಗ್ಗೆ ಸಂಪೂರ್ಣ ತಿಳಿದುಕೊಳ್ಳಬೇಕೆಂದು ಟಾಂಗ್ ನೀಡಿದರು.
ಇನ್ನು ಸಚಿವ ಸಂಪುಟ ಪುನಾರಚನೆಗೆ ಸಂಬಂಧಿಸಿದಂತೆ ಮಾತನಾಡುತ್ತಾ, ಯಾರಿಗೆ ಏನು ಸಿಗಬೇಕೋ ಅದು ಸಿಗಲಿದೆ. ಈ ಬಗ್ಗೆ ಹೈಕಮಾಂಡ್ ಸ್ಪಷ್ಟವಾಗಿ ಹೇಳಿದ್ದು, ಸದ್ಯಕ್ಕೆ ಆ ಕುರಿತ ಚರ್ಚೆ ಬೇಡ ಎಂದರು.