

ನವದೆಹಲಿ: ಬಿಹಾರದ ಆಡಳಿತಪಕ್ಷವಾದ ಜೆಡಿಯು ಶಾಸಕ ಗೋಪಾಲ್ ಮಂಡಲ್ ಅವರು ಗುರುವಾರ ರೈಲಿನಲ್ಲಿ ಪ್ರಯಾಣಿಸುವಾಗ, ಬೋಗಿಯಲ್ಲಿ ಬನಿಯನ್ ಮತ್ತು ಅಂಡರ್ವೇರ್ನಲ್ಲಿ ಓಡಾಡುತ್ತಿದ್ದುದು ಕಂಡುಬಂದಿದೆ. ಈ ಬಗ್ಗೆ ಇತರ ಪ್ರಯಾಣಿಕರು ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದು, ಜಗಳದ ಪ್ರಮೇಯ ಎದುರಾಗಿತ್ತು ಎಂದು ವರದಿಯಾಗಿದೆ.
ಗುರುವಾರ ತೇಜಸ್ ರಾಜಧಾನಿ ಎಕ್ಸ್ಪ್ರೆಸ್ ಟ್ರೈನಿನಲ್ಲಿ ಶಾಸಕ ಗೋಪಾಲ್ ಮಂಡಲ್ ಅವರು ಪಟ್ನಾದಿಂದ ನವದೆಹಲಿಗೆ ಪ್ರಯಾಣ ಬೆಳೆಸಿದ್ದರು. ಆ ಸಮಯದಲ್ಲಿ ತಮ್ಮ ಎಸಿ ಕೋಚ್ನಲ್ಲಿ ಬಿಳಿ ಬನಿಯನ್ ಮತ್ತು ಅಂಡರ್ವೇರ್ ಮಾತ್ರ ತೊಟ್ಟು ಓಡಾಡಿದರು ಎನ್ನಲಾಗಿದೆ.
"ಸಹಪ್ರಯಾಣಿಕರು ಶಾಸಕರ ನಡವಳಿಕೆ ಬಗ್ಗೆ ದೂರು ನೀಡಿದರು. ರೈಲ್ವೆ ಪೊಲೀಸ್ ಮತ್ತು ಟಿಟಿಇ, ಎರಡೂ ಕಡೆಯವರ ಮನವೊಲಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು" ಎಂದು ಈಸ್ಟ್ ಸೆಂಟ್ರಲ್ ರೈಲ್ವೆ ಸಿಪಿಆರ್ಒ ರಾಜೇಶ್ ಕುಮಾರ್ ತಿಳಿಸಿದ್ದಾರೆಂದು ಎನ್ಡಿಟಿವಿ ವರದಿ ಮಾಡಿದೆ.
ಮತ್ತೊಂದೆಡೆ ಮಂಡಲ್ ಅವರು ತಾವು ಆ ರೀತಿ ಓಡಾಡಿದ್ದಕ್ಕೆ ತಮ್ಮ ಹೊಟ್ಟೆ ಕೆಟ್ಟಿದ್ದದ್ದೇ ಕಾರಣ ಎಂದು ಸಮಜಾಯಿಷಿ ನೀಡಿದ್ದಾರೆ. "ಪ್ರಯಾಣದ ವೇಳೆ ನನ್ನ ಹೊಟ್ಟೆ ಕೆಟ್ಟಿದ್ದರಿಂದ ನಾನು ಒಳಉಡುಪುಗಳನ್ನು ಮಾತ್ರ ಧರಿಸಿದ್ದೆ" ಎಂದು ತಿಳಿಸಿರುವ ವಿಡಿಯೋವನ್ನು ಎಎನ್ಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ. (ಏಜೆನ್ಸೀಸ್)