ಶಾಸಕರ ಅಮಾನತು ಆದೇಶ ವಾಪಸ್: ಸ್ಪೀಕರ್‌ಗೆ ಮತ್ತೊಮ್ಮೆ ಮನವಿಗೆ ನಿರ್ಧಾರ | Suspended 18 MLAs confident

C N Ashwath Narayan
Published on

ಬೆಂಗಳೂರು: ವಿಧಾನಸಭೆಯಿಂದ ಆರು ತಿಂಗಳು ಅಮಾನತು ಜತೆಗೆ ಕಠಿಣ ನಿರ್ಬಂಧ ವಿಧಿಸಿರುವುದು ಸದನದ ಕಾರ್ಯಕಲಾಪಗಳ ನಿಯಮಾವಳಿಗೆ ವಿರುದ್ಧವಾಗಿದೆ. ಈ ಆದೇಶ ವಾಪಸ್ ಪಡೆಯಬೇಕು ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ಗೆ ಬಿಜೆಪಿಯ ಅಮಾನತಾದ ಶಾಸಕರು ಮತ್ತೊಮ್ಮೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.

ನಗರದ ಖಾಸಗಿ ಹೋಟೆಲ್‌ವೊಂದರಲ್ಲಿ ಈ ಶಾಸಕರು ಸಭೆ ಸೇರಿ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚಿಸಿದರು. ಸರ್ಕಾರದ ಹಠಮಾರಿತನ, ಸಂವಿಧಾನಬಾಹಿರ ನಿರ್ಧಾರದ ವಿರುದ್ಧ ಪ್ರತಿಭಟನೆ ಮಾಡಿದ್ದೇವೆಯೇ ಹೊರತು ಸ್ಪೀಕರ್ ಪೀಠಕ್ಕೆ ಅಗೌರವ ತೋರಿಲ್ಲ.

ಸ್ಪೀಕರ್‌ಗೆ ಸಲ್ಲಿಸಲಿರುವ ಮನವಿಯಲ್ಲಿ ಈ ಅಂಶವನ್ನು ಪ್ರಧಾನವಾಗಿ ಉಲ್ಲೇಖಿಸಿ, ಅಮಾನತು ಆದೇಶ ಹಿಂಪಡೆಯಲು ಕೋರುವುದಕ್ಕೆ ಸಭೆಯಲ್ಲಿ ಒಮ್ಮತ ವ್ಯಕ್ತವಾಗಿದೆ. ಸುಪ್ರೀಂ ಕೋರ್ಟ್‌ಗೆ ಮೊರೆ ಹೋದರೆ ಸ್ಪೀಕರ್ ಆದೇಶ ರದ್ದಾಗುವುದು ನಿಶ್ಚಿತವೆಂಬ ವಿಶ್ವಾಸ ವ್ಯಕ್ತಪಡಿಸಿದೆ.

ಮಹಾರಾಷ್ಟ್ರ ಪ್ರಕರಣದ ನಿದರ್ಶನ

ಮಹಾರಾಷ್ಟ್ರದಲ್ಲೂ ಹೀಗೆ ನಿಯಮ ಮೀರಿ ಹಲವು ಶಾಸಕರನ್ನು ಒಂದು ವರ್ಷದ ಅಮಾನತು ಮಾಡಲಾಗಿತ್ತು. ಆದರೆ ಸುಪ್ರೀಂ ಕೋರ್ಟ್, ಮಹಾರಾಷ್ಟ್ರ ಸರ್ಕಾರದ ಸ್ಪೀಕರ್ ಆದೇಶ ಅತಾರ್ಕಿಕ, ಅಸಮಂಜಸ, ನಿಯಮಬಾಹಿರವಾಗಿ ವರ್ತಿಸಿದ್ದಾರೆ ಎಂದು ತೀರ್ಪು ನೀಡಿ, ಸಸ್ಪೆಂಡ್ ಆದೇಶವನ್ನು ಅಸಿಂಧುವೆಂದು ಹೇಳಿದ್ದೂ ಸಭೆಯಲ್ಲಿ ಪ್ರಸ್ತಾಪವಾಗಿದೆ.

ಕಾರ್ಯಕಲಾಪಗಳ ನಿಯಮಾವಳಿಗೆ ವಿರುದ್ಧವಾದ ಆದೇಶವೆಂದು ಸ್ಪೀಕರ್ ಯು.ಟಿ.ಖಾದರ್ ಅರ್ಥ ಮಾಡಿಕೊಂಡು ವಾಪಸ್ ಪಡೆಯಲಿದ್ದು, ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಬೇಕಾದ ಅಗತ್ಯವಿಲ್ಲವೆಂದು ಸಭೆ ತೀರ್ಮಾನಿಸಿದೆ.

ಅಮಾನತಾದ ಶಾಸಕರಾದ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ದೊಡ್ಡನಗೌಡ ಪಾಟೀಲ, ಮುನಿರತ್ನ, ಡಾ.ಶೈಲೇಂದ್ರ ಬೆಲ್ದಾಳೆ, ಬಸವರಾಜ ಮತ್ತಿಮೂಡ್, ಧೀರಜ್ ಮುನಿರಾಜು, ಎಂ.ಆರ್.ಪಾಟೀಲ್ ಮತ್ತಿತರರು ಇದ್ದರು.

ಕಾರ್ಯಕಲಾಪಗಳ ನಿಯಮಾವಳಿ 348ರ ಪ್ರಕಾರ ಒಂದು ದಿನ ಹೆಚ್ಚೆಂದರೆ ಆ ಸದನದ ಅವಧಿಗೆ ಮಾತ್ರ ಅಮಾನತು ಮಾಡಬಹುದು. ಕೋರ್ಟ್‌ಗೆ ಹೋಗುವುದಿಲ್ಲ, 18 ಶಾಸಕರ ಅಮಾನತ್ ಆದೇಶ ವಾಪಸ್ ಪಡೆಯಲು ಸ್ಪೀಕರ್‌ಗೆ ಮನವಿ ಮಾಡುತ್ತೇವೆ. -ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಶಾಸಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net