ಹಾಲಿ, ಮಾಜಿ ಶಾಸಕರ ಜಗಳ ತಾರಕಕ್ಕೆ! : ಕುಣಿಯಲಾರದವಳು ನೆಲ ಡೊಂಕು ಎನ್ನುವಂತಿದೆ ಎಂದು ಮಾಜಿ ಶಾಸಕ ಸುರೇಶ್‌ಗೌಡ ತಿರುಗೇಟು

23Tmk_SureshGowda_PC
Published on

ತುಮಕೂರು: ಗೂಳೂರು-ಹೆಬ್ಬೂರು ಏತ ನೀರಾವರಿ ಯೋಜನೆ ಸಂಬಂಧಪಟ್ಟಂತೆ ಹಾಲಿ, ಮಾಜಿ ಶಾಸಕರ ನಡುವಿನ ಆರೋಪ, ಪ್ರತ್ಯಾರೋಪಗಳು ತಾರಕಕ್ಕೇರಿವೆ.

ಗ್ರಾಮಾಂತರ ಕ್ಷೇತ್ರಕ್ಕೆ 972 ಎಂಸಿಎಫ್‌ಟಿ ಹೇಮೆ ನೀರು ಹರಿಸಿದರೆ ನಾನು ನಿಮ್ಮ ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ನೀರು ಹರಿಸದಿದ್ದರೆ ಕ್ಷೇತ್ರ ಬಿಟ್ಟು ಹೋಗುತ್ತೀರಾ ಎಂದು ಸವಾಲು ಎಸೆದಿದ್ದ ಹಾಲಿ ಶಾಸಕ ಗೌರಿಶಂಕರ್‌ಗೆ ಏತ ನೀರಾವರಿ ಯೋಜನೆಯೇ ಅವೈಜ್ಞಾನಿಕ ಎನ್ನುತ್ತಿರುವುದಕ್ಕೆ ಕುಣಿಯಲಾರದವಳು ನೆಲ ಡೊಂಕು ಎನ್ನುವಂತಿದೆ ಎಂದು ಮಾಜಿ ಶಾಸಕ ಬಿ.ಸುರೇಶ್‌ಗೌಡ ತಿರುಗೇಟು ಕೊಟ್ಟರು.

ನಾಲ್ಕು ದಶಕಗಳ ಕಾಲ ರೈತರು ಹೋರಾಟ ಮಾಡಿದ ಫಲವಾಗಿ ಜಾರಿಯಾದ ಗೂಳೂರು-ಹೆಬ್ಬೂರು ಏತ ನೀರಾವರಿ ಯೋಜನೆ ಅವೈಜ್ಞಾನಿಕ ಎನ್ನುವವರು ತಾಂತ್ರಿಕ ಸಮಿತಿ ವರದಿಯಂತೆ ಸತತ 3 ತಿಂಗಳ ಕಾಲ ನೀರು ಹರಿಸಲಿ ಕೆರೆ ತುಂಬುವುದೋ ಇಲ್ಲವೋ ನೋಡೋಣ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.

ಈ ಹಿಂದೆ ನಾಗವಲ್ಲಿ, ಹೆಬ್ಬೂರು, ಹೊನ್ನುಡಿಕೆ, ಹೊನಸಿಗೆರೆ ಕೆರೆಗಳಿಗೆ ಇದೇ ಯೋಜನೆಯಲ್ಲಿ ನೀರು ಹರಿಸಿ ಕೆರೆ ತುಂಬಿಸಲಾಗಿತ್ತು, ಅಲೋಕೇಷನ್ ಇಲ್ಲದ ಕೆರೆಗಳಿಗೆ ನೀರು ಹರಿಸಿ, ಕಾನೂನು ಉಲ್ಲಂಘಿಸುವವರು, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ನಿಗದಿಯಾಗಿರುವ ಕೆರೆಗಳಿಗೆ ನೀರು ಹರಿಸದೆ, ಏತ ನೀರಾವರಿ ಯೋಜನೆಯನ್ನು ಹಳ್ಳಹಿಡಿಸಲು ಷಡ್ಯಂತ್ರ ರೂಪಿಸಿದ್ದಾರೆ ಎಂದು ಪರೋಕ್ಷವಾಗಿ ಜಿಲ್ಲಾ ಸಚಿವ ಜೆ.ಸಿ.ಮಾಧುಸ್ವಾಮಿ, ಗೌರಿಶಂಕರ್ ವಿರುದ್ಧ ವಾಗ್ದಾಳಿ ನಡೆಸಿದರು.

ನೀರು ಹರಿಸದಿದ್ದರೆ ಹೋರಾಟ: ಗ್ರಾಮಾಂತರ ಕ್ಷೇತ್ರದಲ್ಲಿ ಕುಡಿಯುವ ನೀರಿನ ಯೋಜನೆಯ ಕೆರೆಗಳಿಗೆ ನೀರು ಹರಿಸದೇ ಇದ್ದರೆ ಸತ್ಯಾಗ್ರಹ ಮಾಡುತ್ತೇನೆ. ಅಲೋಕೇಷನ್ ಇಲ್ಲದ ಕೆರೆಗಳಿಗೆ ನೀರು ತುಂಬಿಸುವುದನ್ನು ಬಿಟ್ಟು, ಡಿಸಿ, ಜಿಪಂ ಸಿಇಒ ನೀರಾವರಿ ಯೋಜನೆಯ ಕೆರೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿದರು.

ಗೂಳೂರು-ಹೆಬ್ಬೂರು ಏತ ನೀರಾವರಿ ಯೋಜನೆಯೊಂದಿಗೆ ಪ್ರಾರಂಭವಾದ ತಿಪಟೂರು ತಾಲೂಕು ಹೊನ್ನವಳ್ಳಿ ಏತ ನೀರಾವರಿ ಯೋಜನೆ, ಅರಸೀಕೆರೆ ಯೋಜನೆಗಳಿಗೆ ನೀರು ಹರಿಸಲಾಗಿದೆ. ಚಿಕ್ಕನಾಯಕನಹಳ್ಳಿಯ ಕೆರೆಗಳಿಗೂ ನೀರು ಹರಿಸಿಕೊಳ್ಳಲಾಗಿದೆ. ಆದರೆ, ಈ ಯೋಜನೆ ವಿಚಾರದಲ್ಲಿ ಮಾತ್ರ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ. ನೀರಾವರಿ ಬಗ್ಗೆ ಅರಿವಿಲ್ಲದಿದ್ದರೆ ನೀರಾವರಿ ತಜ್ಞರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರ ಬಳಿ ತಿಳಿದುಕೊಳ್ಳಲಿ ಎಂದು ಹರಿಹಾಯ್ದರು.

ಮಕ್ಮಲ್ ಟೋಪಿ: ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಬೀಳುತ್ತಿದ್ದು ನೀರು ಸಮುದ್ರದ ಪಾಲಾಗುತ್ತಿದ್ದರೂ ಜಿಲ್ಲೆಯಲ್ಲಿ ನಿಗದಿಯಾಗಿರುವ ಕೆರೆಗಳಿಗೆ ಹೇಮೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ ಎಂದರೆ ಎಂತಹ ಅಸಮರ್ಥರು ಎನ್ನುವುದನ್ನು ಜನ ಅರ್ಥಮಾಡಿಕೊಳ್ಳಬೇಕು. ಬರೀ ಸುಳ್ಳುಗಳನ್ನೇ ಹೇಳಿಕೊಂಡು ಜನರಿಗೆ ಮಕ್ಮಲ್ ಟೋಪಿ ಹಾಕುವುದನ್ನು ಬಿಟ್ಟು ನೀರು ಹರಿಸಲಿ ಎಂದು ಬಿ.ಸುರೇಶ್‌ಗೌಡ ಆಗ್ರಹಿಸಿದರು.

ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಅರಕೆರೆ ರವೀಶ್, ಜಿಪಂ ಮಾಜಿ ಸದಸ್ಯ ಗೂಳೂರು ಶಿವಕುಮಾರ್, ತಾಪಂ ಮಾಜಿ ಸದಸ್ಯ ನರಸಿಂಹಮೂರ್ತಿ, ಎಪಿಎಂಸಿ ಅಧ್ಯಕ್ಷ ಉಮೇಶ್‌ಗೌಡ, ಸಿದ್ದೇಗೌಡ, ಪ್ರಭಾಕರ್ ಮತ್ತಿತರರು ಹಾಜರಿದ್ದರು.

ಅಸಂಸದೀಯ ಪದ ಬಳಕೆ ಸಮರ್ಥನೆ! : ನೀರು ತುಂಬಿಸುವ ಯೋಗ್ಯತೆ ಇಲ್ಲದ ಅಸಮರ್ಥ ಶಾಸಕರು ಎಂದು ವಾಗ್ದಾಳಿ ನಡೆಸುವ ಭರದಲ್ಲಿ ಮಾಜಿ ಶಾಸಕ ಸುರೇಶ್‌ಗೌಡ, ಅಸಂಸದೀಯ ಪದ ಬಳಸಿ ಅದನ್ನು ಹಳ್ಳಿ ಭಾಷೆ ಪ್ರಯೋಗ ಮಾಡಿದ್ದಾಗಿ ಸಮರ್ಥಿಸಿಕೊಂಡರು. ಎಲ್ಲೋ ಇದ್ದ ಗಿರಾಕಿ, ಇಲ್ಲಿ ಬಂದು ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು ಗೆದ್ದ ಗೌರಿಶಂಕರ್‌ಗೆ ನೀರಾವರಿ ಹೋರಾಟದ ಗಂಧಗಾಳಿ ಗೊತ್ತಿಲ್ಲ. ನೀರು ಕೊಡಿ ಅಂದರೆ ಬೀರು ಕೊಡ್ತೀವಿ ಅನ್ನುವವರಿಗೆ ನಾಗವಲ್ಲಿ ಕೆರೆ ತುಂಬಿತ್ತಾ ಎನ್ನುವುದು ಗೊತ್ತಿಲ್ಲವಾ? ಯೋಜನೆ ಅವೈಜ್ಞಾನಿಕ ಎನ್ನುವವರಿಗೆ ನೀರು ತುಂಬಿಸುವ ಯೋಗ್ಯತೆ ಇಲ್ಲ ಎಂದು ಸುದ್ದಿಗೋಷ್ಠಿಯುದ್ದಕ್ಕೂ ಟೀಕಾ ಪ್ರಹಾರ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net