ಕುಡಿಯುವ ನೀರು, ವಿದ್ಯುತ್ ಸಮಸ್ಯೆ ಆಗದಿರಲಿ

SRP_10-01jpj
ಶ್ರೀರಂಗಪಟ್ಟಣದ ಪುರಸಭೆ ಕಚೇರಿಯಲ್ಲಿ ಬೇಸಿಗೆ ನಿರ್ವಹಣೆಯ ಸಭೆ ನಡೆಯಿತು. ಎ.ಬಿ.ರಮೇಶ ಬಂಡೀಸಿದ್ದೇಗೌಡ ಇತರರು ಇದ್ದರು.
Published on

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ಸೇರಿದಂತೆ ಕ್ಷೇತ್ರದ ಗ್ರಾಮಗಳಲ್ಲಿ ಕುಡಿಯುವ ನೀರು ಹಾಗೂ ವಿದ್ಯುತ್ ಸರಬರಾಜಿನಲ್ಲಿ ಯಾವುದೇ ಸಮಸ್ಯೆ ಉಂಟಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳುವ ಜತೆಗೆ ಬೇಸಿಗೆಯಲ್ಲಿ ಎದುರಾಗುವ ಸಮಸ್ಯೆಗಳನ್ನು ನಿರ್ವಹಣೆ ಮಾಡುವಲ್ಲಿ ಎಚ್ಚರ ವಹಿಸಬೇಕು ಎಂದು ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ತಾಕೀತು ಮಾಡಿದರು.

ಪಟ್ಟಣ ಪುರಸಭೆ ಸಭಾಂಗಣದಲ್ಲಿ ಸೋಮವಾರ ತಾಲೂಕು ಆಡಳಿತ ಹಾಗೂ ಪಂಚಾಯಿತಿ ಅಧಿಕಾರಿಗಳೊಂದಿಗೆ ನಡೆದ ಬೇಸಿಗೆ ನಿರ್ವಹಣೆಯ ಮುಂಜಾಗ್ರತಾ ಸಭೆಯಲ್ಲಿ ಮಾತನಾಡಿದರು.

ಬೇಸಿಗೆ ಆರಂಭವಾಗಿದ್ದು ಸದ್ಯದ ಪರಿಸ್ಥಿತಿಯಲ್ಲಿ ಒಟ್ಟು 21 ಗ್ರಾಪಂಗಳಲ್ಲಿ 10, 12 ಪಂಚಾಯಿತಿಗಳನ್ನು ಹೊರತುಪಡಿಸಿ ಗಾಮನಹಳ್ಳಿ, ತಡಗವಾಡಿ, ಕೊಡಿಯಾಲ, ಟಿ.ಎಂ.ಹೊಸೂರು, ಮುಂಡುಗದೊರೆ, ಮಹದೇವಪುರ, ಸಬ್ಬನಕುಪ್ಪೆ, ಬಲ್ಲೇನಹಳ್ಳಿ ಗ್ರಾಪಂಗಳಲ್ಲಿ ನೀರಿನ ಸಮಸ್ಯೆ ಎದುರಾಗುವ ಸಂಭವವಿದೆ. ಈ ಬಾರಿ ಏಪ್ರಿಲ್ ತಿಂಗಳಲ್ಲಿ ಮುಂಗಾರು ಆಗಮನ ನೀರಿಕ್ಷೆ ಇದ್ದು, ಒಂದು ವೇಳೆ ಇದು ಸಾಧ್ಯವಾಗದಿದ್ದಲ್ಲಿ ನೀರಿನ

ಸಮಸ್ಯೆ ಎದುರಾಗುವ ಗ್ರಾಮಗಳನ್ನು ಪಟ್ಟಿ ಮಾಡಿ, ಸಮರ್ಪಕವಾಗಿ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಕ್ಷೇತ್ರದ ಜನರಿಗೆ ಶುದ್ಧೀಕರಿಸಿದ ನೀರನ್ನು ಪೂರೈಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮವಹಿಸಬೇಕು. ಅಂತರ್ಜಲ ಬತ್ತಿರುವ ಬೋರ್‌ಗಳನ್ನು ಗುರುತಿಸಿ ಇಂಗು ಗುಂಡಿ, ಮಳೆ ನೀರು ಕೊಯ್ಲು ಮೂಲಕ ರಿಚಾರ್ಜ್ ಮಾಡಲು ಕ್ರಮವಹಿಸಿ. ಬರ ಎದುರಾಗುವಂತಹ ಪ್ರದೇಶ ಗುರುತಿಸಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸುವ ಹಾಗೂ ಖಾಸಗಿ ಮಾಲೀಕತ್ವದ ಬೋರ್‌ವೆಲ್‌ಗಳಿಂದ ನೀರು ಪಡೆದು ಜನರಿಗೆ

ಪೂರೈಸಲು ಮೊದಲೇ ಸಿದ್ಧ್ದತೆ ಮಾಡಿಕೊಳ್ಳಿ. ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ವಚ್ಛತೆಯೊಂದಿಗೆ ಸುಸ್ಥಿಯಲ್ಲಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು. ಕೆರೆ-ಕಟ್ಟೆಗಳಲ್ಲಿ ಸಾಧ್ಯವಾದಷ್ಟು ನೀರು ಇರುವಂತೆ ಗಮನವಹಿಸಬೇಕು. ಇದರಿಂದ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಕುಗ್ಗುವುದನ್ನು ತಪ್ಪಿಸಬಹುದು ಎಂದರು.

ರೈತಾಪಿ ಜನರಿಗೆ ಕುಡಿಯಲು ಹಾಗೂ ಕೃಷಿ ಕಾರ್ಯಗಳಿಗೆ ತೊಂದರೆಯಾಗದಂದೆ ದಿನದಲ್ಲಿ 6 ಅಥವಾ 7 ತಾಸುಗಳ ಕಾಲ ಯಾವುದೇ ಸಬೂಬು ನೀಡದೆ ವಿದ್ಯುತ್ ಪೂರೈಸಬೇಕು. ಎಇಇ ಹಾಗೂ ಜೆಇಗಳು ಆಯಾ ವ್ಯಾಪ್ತಿಯ ಫೀಡರ್‌ಗಳ ನಿರ್ವಹಣಾ ಕಾಮಗಾರಿಯನ್ನು ತ್ವರಿತವಾಗಿ ನಿರ್ವಹಿಸಿ ವಿದ್ಯುತ್ ಪೂರೈಕೆ ಮಾಡಬೇಕು. ಒಂದು ವೇಳೆ ರೈತರಿಂದ ದೂರುಗಳು ಕೇಳಿಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.

ತಾಲೂಕಿನಲ್ಲಿರುವ ನೋಡಲ್ ಅಧಿಕಾರಿಗಳು 15 ದಿನಗಳಿಗೊಮ್ಮೆ ತಮ್ಮ ವ್ಯಾಪ್ತಿಯ ಗ್ರಾಮಗಳಿಗೆ ತೆರಳಿ ಪರಿಶೀಲನೆ ನಡೆಸಿ, ಸಮಸ್ಯೆಗಳನ್ನು ಉಲ್ಲೇಖಿಸಿ ಪಿಡಿಒಗಳಿಂದ ಆಗಬೇಕಿರುವ ಕೆಲಸ ಮಾಡಿಸುವ ಜತೆಗೆ ನನ್ನ ಗಮನಕ್ಕೆ ತರಬೇಕು. ದನಕರುಗಳ ನೀರಿನ ತೊಟ್ಟಿಗಳಲ್ಲಿ ಸ್ವಚ್ಛತೆ, ಚರಂಡಿಗಳು ಹಾಗೂ ಗ್ರಾಮದ ವಾತವರಣ ಶುಚಿತ್ವ, ಸೊಳ್ಳೆ-ನೊಣಗಳಿಂದ ರೋಗ ರುಜಿನಗಳು ಹರಡದಂತೆ ಫಾಗಿಂಗ್ ಮಾಡಿಸಬೇಕು.

ಸದ್ಯದ ಪರಿಸ್ಥಿತಿಯಲ್ಲಿ ಕ್ಷೇತ್ರದ ಯಾವ ಗ್ರಾಮಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ. ಆದರೂ ಈ ಬಗ್ಗೆ ನಿರ್ಲಕ್ಷಿಸದೆ ಅಧಿಕಾರಿಗಳು ಅಗತ್ಯ ಸಿದ್ಧ್ದತೆಯಲ್ಲಿರಬೇಕು. ಜತೆಗೆ ತಹಸೀಲ್ದಾರ್ ಮತ್ತು ತಾಪಂ ಇಒ ಈ ಬಗ್ಗೆ ಕ್ರಮವಹಿಸುವಂತೆ ಸೂಚನೆ ನೀಡಿದರು.

ವಿಧಾಸಭೆ ಅಧಿವೇಶನ ಬಳಿಕ ಕ್ಷೇತ್ರದ ಸೇರಿದಂತೆ ತಾಲೂಕಿನ 21 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಎಲ್ಲ್ಲ ಗ್ರಾಮಗಳಿಗೂ ವಾರದಲ್ಲಿ ಮಂಗಳವಾರ ಅಥವಾ ಶನಿವಾರ ಅಧಿಕಾರಿಗಳೊಂದಿಗೆ ತೆರಳಿ, ಗ್ರಾಮಸ್ಥರಿಂದ ಸಮಸ್ಯೆ ಆಲಿಸುವ ಜತೆಗೆ ಸಾಧ್ಯವಾದಷ್ಟು ಸ್ಥಳದಲ್ಲೇ ಪರಿಹರಿಸುವ ಕಾರ್ಯಕ್ಕೆ ಮುಂದಾಗುವ ಯೋಜನೆ ಹಮ್ಮಿಕೊಳ್ಳಲಾಗುತ್ತಿದ್ದು, ಅಧಿಕಾರಿ-ಸಿಬ್ಬಂದಿ ಕಡ್ಡಾಯವಾಗಿ ಹಾಜರಾಗಬೇಬೇಕು.

ತಾಲೂಕಿನಲ್ಲಿ ಜಾತ್ರೆ, ಉತ್ಸವ ಹಾಗೂ ಹಬ್ಬದ ಪರಗಳು ನಡೆಯುವ ಸಂದರ್ಭವಾದ ಕಾರಣ ಪಂಕ್ತಿ ಭೋಜನ ನಡೆಯುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಹಾಗೂ ಗ್ರಾಪಂ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಏಪ್ರಿಲ್ ಮೊದಲ ವಾರದಲ್ಲಿ ಕ್ಷೇತ್ರದ ಜನರಿಗೆ ಹಕ್ಕು ಪತ್ರ ವಿತರಣೆ ಕಾರ್ಯ ಹಮ್ಮಿಕೊಂಡಿದ್ದು, ಫಲಾನುಭವಿಗಳಿಗೆ ಈ ಯೋಜನೆ ತಲುಪಿಸಲು ಎಲ್ಲರೂ ಸಹಕಾರ ನೀಡಬೇಕು ಎಂದು ತಿಳಿಸಿದರು.

ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ತಾಪಂ ಇಒ ವೇಣು, ಪುರಸಭಾ ಮುಖ್ಯಾಧಿಕಾರಿ ಎಂ.ರಾಜಣ್ಣ, ಸೆಸ್ಕ್ ಎಇಇ ಮಧುಸೂದನ್, ಜಿಪಂ ಎಇಇ ರಾಮಕೃಷ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net