

ಅಥಣಿ: ಶಾಸಕ ಮುನಿರತ್ನ ಪ್ರಕರಣದ ಹಿಂದೆ ಸಿಡಿ ಶಿವು ಇದ್ದಾನೆ. ಅವನ ವಿರೋಧಿಗಳೆಲ್ಲ ಜೈಲಿನಲ್ಲಿದ್ದಾರೆ. ಈ ಕೆಲಸ ಬಿಟ್ಟರೆ, ಅವನಿಗೆ ಬೇರೇನೂ ಗೊತ್ತಿಲ್ಲ ಎಂದು ಶಾಸಕ ರಮೇಶ ಜಾರಕಿಹೊಳಿ ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಕಂಪನಿಯವರು ಮೊದಲು ನನ್ನ ಬಲಿ ಪಡೆದರು. ನಂತರ ದೇವೇಗೌಡರ ಕುಟುಂಬದ ಬಲಿ ಪಡೆದರು. ಈಗ ಮುನಿರತ್ನ ಬಲಿ ಪಡೆದಿದ್ದಾರೆ' ಎಂದರು.
ಸಿ.ಡಿ ಶಿವು ಹೋರಾಟದಿಂದ ಬೆಳೆದಿಲ್ಲ. ಗ್ರಾಮ ಪಂಚಾಯಿತಿ ಸದಸ್ಯನಾಗಲೂ ಅರ್ಹತೆ ಇಲ್ಲ. ಹೊಂದಾಣಿಕೆ ರಾಜಕಾರಣಿ ಆದ ಕಾರಣ, ಏಳೆಂಟು ಬಾರಿ ಶಾಸಕನಾಗಿದ್ದಾನೆ. ಈಗ ಮತ್ತೆ ಚುನಾವಣೆಯಾದರೆ ಆತ ಸೋಲುತ್ತಾನೆ ಎಂದು ವಾಗ್ದಾಳಿ ನಡೆಸಿದರು.
ಪಕ್ಷದ ವರಿಷ್ಠರು ನೋಟಿಸ್ ಜಾರಿಗೊಳಿಸಬೇಕು: ದಲಿತರು ಮತ್ತು ಒಕ್ಕಲಿಗರಿಗೆ ಮುನಿರತ್ನ ಅವರು ಬಯ್ದಿದ್ದು ಇನ್ನೂ ದೃಢಪಟ್ಟಿಲ್ಲ. ಆ ಆಡಿಯೊ ಕಟ್ ಆ್ಯಂಡ್ ಪೇಸ್ಟ್ ಇರಬಹುದು. ಎಫ್ಎಸ್ಎಲ್ ವರದಿ ಬರುವವರೆಗೆ ನಮ್ಮ ಪಕ್ಷದವರೂ ಮುನಿರತ್ನ ವಿರುದ್ಧ ಮಾತನಾಡಬಾರದು. ಬಿಜೆಪಿಯವರೇ ನಮ್ಮ ಪಕ್ಷದ ಶಾಸಕನನ್ನು ಬಯ್ಯುವುದು ಎಷ್ಟರಮಟ್ಟಿಗೆ ಸರಿ? ಬಿಜೆಪಿಯಲ್ಲೇ ಇದ್ದುಕೊಂಡು ಮುನಿರತ್ನ ವಿರುದ್ಧ ಹೇಳಿಕೆ ಕೊಡುವವರಿಗೆ ಪಕ್ಷದ ವರಿಷ್ಠರು ನೋಟಿಸ್ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ನಾನು ಮತ್ತು ಉಮೇಶ ಕತ್ತಿ ಬೇರೆ ಬೇರೆ ಪಕ್ಷದಲ್ಲಿದ್ದಾಗ, ಪರಸ್ಪರ ಜಾತಿ ನಿಂದನೆ ಮಾಡುತ್ತಿದ್ದೆವು. ನನ್ನ ಜಾತಿಯನ್ನು ಅವರು, ಉಮೇಶ ಜಾತಿಯನ್ನು ನಾನು ನಿಂದಿಸುತ್ತಿದ್ದೆ. ಸ್ನೇಹಿತರು ಸಹಜವಾಗಿ ಮಾತನಾಡುತ್ತಾರೆ. ಜಾತಿ ವಿಚಾರವಾಗಿ ಸಾವಿರಾರು ಮಂದಿಗೆ ಬಯ್ದರೆ ಅದು ಅಪರಾಧ. ಹೀಗಿರುವಾಗ ಮುನಿರತ್ನ ಮಾತನಾಡಿದ್ದನ್ನು ಆಡಿಯೊ ಮಾಡಿಬಿಟ್ಟರೆ ಹೇಗೆ ಎಂದು ಪ್ರಶ್ನಿಸಿದರು.