

ನಂಜನಗೂಡು: ಪಟ್ಟಣದ ತಾಲೂಕು ಕಚೇರಿ ಮುಂಭಾಗ ಒಂದು ವಾರದಿಂದ ತಾಲೂಕಿನ ಗ್ರಾಮ ಲೆಕ್ಕಾಧಿಕಾರಿಗಳು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಶಾಸಕ ದರ್ಶನ್ ಧ್ರುವನಾರಾಯಣ ಶನಿವಾರ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದರು.
ಈ ವೇಳೆ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ನಿಂಗಯ್ಯ ಮಾತನಾಡಿ, ತಾಲೂಕಿನಲ್ಲಿ ಕೆಲಸ ಮಾಡಲು ವಿವಿಧ ಮೂಲಭೂತ ಸೌಕರ್ಯಗಳು ಇಲ್ಲ. ಅನೇಕ ವರ್ಷಗಳಿಂದ ವರ್ಗಾವಣೆ ಆಗುತ್ತಿಲ್ಲ ಎಂದು ದೂರಿದರು.
ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ಆರು ವರ್ಷಗಳಿಂದ ಸರ್ಕಾರಿ ಕಚೇರಿ ಹಾಗೂ ತಾಲೂಕಿನಲ್ಲಿ ಹೆಚ್ಚು ಮಹಿಳಾ ಗ್ರಾಮ ಲೆಕ್ಕಾಧಿಕಾರಿಗಳು ಇರುವುದರಿಂದ ಕಚೇರಿ ಮತ್ತು ಶೌಚಗೃಹ ನಿರ್ಮಿಸಿ ಕೊಡುದಾಗಿ ಭರವಸೆ ನೀಡಿದರು.
ಈ ಬಗ್ಗೆ ಸಂಬಂಧಪಟ್ಟಂತ ಸಚಿವರು ಹಾಗೂ ಮುಖ್ಯಮಂತ್ರಿ ಅವರ ಜೊತೆ ಮಾತನಾಡಿ ನಿಮ್ಮ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡುತ್ತೇನೆ. ಅಗತ್ಯವಿರುವ ಕಂಪ್ಯೂಟರ್ ಇತರ ಪರಿಕರಗಳ ಪಟ್ಟಿ ನೀಡಿದರೆ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು.ಈಗಾಗಲೇ ಎಸ್ ಎಸ್ ಎಲ್ ಸಿ ಪಿಯುಸಿ ಪರೀಕ್ಷೆಗಳು ಹತ್ತಿರಕ್ಕೆ ಬರುತ್ತಿದ್ದು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಸಹಕಾರ ನೀಡಬೇಕು ಎಂದರು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ತಾಲೂಕು ದಂಡಾಧಿಕಾರಿ ಶಿವಕುಮಾರ್ ಕಾಸ್ನೂರು, ರಾಜಸ್ವ ನಿರೀಕ್ಷಕರಾದ ಡಿಸೋಜ, ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಪದಾಧಿಕಾರಿಗಳು, ನೌಕರರು ಹಾಜರಿದ್ದರು.