ಅರ್ಹ ರೈತರಿಗೆ ಭೂಮಿ ದೊರಕಿಸುವ ಪ್ರಯತ್ನ

12KDR1 meeting
ಕಡೂರು ತಾಲೂಕು ಕಚೇರಿಯಲ್ಲಿ ನಡೆದ ತಾಲೂಕು ಬಗರ್‌ಹುಕುಂ ಸಮಿತಿ ಸಭೆಯಲ್ಲಿ ಶಾಸಕ ಕೆ.ಎಸ್.ಆನಂದ್ ಮಾತನಾಡಿದರು. ಸಿ.ಎಸ್.ಪೂರ್ಣಿಮಾ, ಹೊಗರೇಹಳ್ಳಿ ಶಶಿಕುಮಾರ್, ಬಿ.ಜಿ. ಶಾಂತಕುಮಾರ್, ಕುಮಾರಿಬಾಯಿ ಇದ್ದರು.
Published on

ಕಡೂರು: ತಾಲೂಕು ಬಗರ್ ಹುಕುಂ ಸಮಿತಿ ಮೂಲಕ ಪಾರದರ್ಶಕವಾಗಿ ಅರ್ಹ ರೈತರಿಗೆ ಭೂಮಿ ದೊರಕಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಲಾಗುವುದು ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ತಾಲೂಕು ಕಚೇರಿಯಲ್ಲಿ ಬುಧವಾರ ನಡೆದ ತಾಲೂಕು ಬಗರ್‌ಹುಕುಂ ಸಮಿತಿಯ ಪ್ರಥಮ ಸಭೆಯಲ್ಲಿ ಮಾತನಾಡಿ, ಾರ್ಮ್ 57ರ ಅಡಿಯಲ್ಲಿ ಒಟ್ಟು 20,162 ಅರ್ಜಿಗಳು ಸಲ್ಲಿಕೆಯಾಗಿವೆ. ಾರ್ಮ್ 50-53 ಅಡಿ ಇರುವ ಅರ್ಜಿಗಳನ್ನು ಮತ್ತೆ ಮರುಪರಿಶೀಲಿಸಿ ವರದಿ ನೀಡಲು ಸೂಚಿಸಲಾಗಿದೆ. ಹಿಂದಿನ ಅವಧಿಯಲ್ಲಿ ನಡೆದ ಘಟನಾವಳಿಗೆ ಸಂಬಂಧಿಸಿದಂತೆ ವಿಶೇಷ ಅಧಿಕಾರಿಗಳ ತಂಡ ತನಿಖೆ ನಡೆಸಿದೆ. ಆಗಿನ ಬಗರ್‌ಹುಕುಂ ಭೂಮಿ ಮಂಜೂರಾತಿ ಹಾಗೂ ತಪ್ಪಿತಸ್ಥರ ಕುರಿತು ಸರ್ಕಾರ ನಿಯಮಾನುಸಾರ ಕ್ರಮ ಕೈಗೊಳ್ಳಲಿದೆ. ಈಗಿನ ತಾಲೂಕು ಬಗರ್‌ಹುಕುಂ ಸಮಿತಿ ಮುಂದೆ ಅರ್ಹ ರೈತರಿಗೆ ನ್ಯಾಯ ಒದಗಿಸುವ ದೊಡ್ಡ ಸವಾಲು ಇದೆ ಎಂದರು.
ಯಾರಿಗೇ ಭೂಮಿ ಮಂಜೂರು ಮಾಡಿದರೂ ಮಂಜೂರಾತಿ ಪತ್ರದಲ್ಲಿ ಬಗರ್ ಹುಕುಂ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರೂ ಬೆರಳಚ್ಚು ನೀಡಿ ದೃಢೀಕರಿಸುವ ನಿಯಮವನ್ನು ಕಾಂಗ್ರೆಸ್ ಜಾರಿಗೆ ತಂದಿದೆ. ಹೀಗಾಗಿ ಮಂಜೂರಾತಿಯಲ್ಲಿ ಯಾವುದೇ ಲೋಪಗಳಾದರೂ ಅದಕ್ಕೆ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರೂ ಸಮಾನ ಹೊಣೆಗಾರರಾಗಬೇಕಾಗುತ್ತದೆ ಎಂದರು.
ಈ ಹಿಂದೆ ಮಂಜೂರಾತಿ ಪತ್ರ ನೀಡಿದ್ದರೂ ಕೆಲ ಮಂಜೂರು ಪ್ರಕರಣಗಳಲ್ಲಿ ಭೂಮಿ ಖಾತೆ, ಪಹಣಿ ಮುಂತಾದವುಗಳು ಆಗಿಲ್ಲ. ಅಂತಹ ಪ್ರಕರಣಗಳಿದ್ದರೆ ಸಮಗ್ರ ವರದಿ ನೀಡಲು ತಹಸೀಲ್ದಾರ್ ಅವರಿಗೆ ಸೂಚಿಸಿದ್ದೇನೆ. ಯಾವುದೇ ಸಮಸ್ಯೆಯಾಗದಂತೆ ಬಗರ್‌ಹುಕುಂ ಸಮಿತಿ ಕಾರ್ಯನಿರ್ವಹಿಸಬೇಕೆಂಬುದು ನನ್ನ ಆಶಯ. ಅದಕ್ಕೆ ಸಮಿತಿ ಸದಸ್ಯರ ಪೂರ್ಣ ಸಹಕಾರ ಮುಖ್ಯ ಎಂದರು.
ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ತಾಲೂಕು ಬಗರ್‌ಹುಕುಂ ಸಮಿತಿ ಸದಸ್ಯರಾದ ಹೊಗರೇಹಳ್ಳಿ ಶಶಿಕುಮಾರ್, ಬಿ.ಜಿ. ಶಾಂತಕುಮಾರ್, ಕುಮಾರಿಬಾಯಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net