ಶಾಸಕರ ಖರೀದಿ 2500 ಕೋಟಿ ಎಲ್ಲಿದೆ? ಖರೀದಿ ಮಾಡುವರು ಯಾರು? ಜಾರಿ ನಿರ್ದೇಶನಾಲಯ ತನಿಖೆಗೆ ಆರ್.ಅಶೋಕ ಆಗ್ರಹ

LOP R Ashok
Published on

ಬೆಂಗಳೂರು:

ಸಿಎಂ ಸಿದ್ದರಾಮಯ್ಯ ಅವರೇ, ತಲಾ 50 ಕೋಟಿ ಕೊಟ್ಟು 50 ಶಾಸಕರನ್ನು ಖರೀದಿಸಲು ಬಿಜೆಪಿ ಮುಂದಾಗಿದೆ ಎಂದು ಹೇಳಿರುವುದರಿಂದ ಯಾವ ವ್ಯಕ್ತಿ ಖರೀದಿಸಲು ಮುಂದಾಗಿದ್ದಾರೆಂಬುದನ್ನು ಕೂಡಲೆ ಬಹಿರಂಗಪಡಿಸಬೇಕು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 50 ಶಾಸಕರನ್ನು ಕೊಳ್ಳಲು ಬೇಕಾದ 2,500 ಕೋಟಿ ರೂ. ಎಲ್ಲಿದೆ? ತಿಳಿಸಬೇಕು. ಈ ಕುರಿತು ಜಾರಿ ನಿರ್ದೇಶನಾಲಯ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.

ಸಿಎಂ ರಾಜೀನಾಮೆ ನೀಡುವ ಕಾಲ ಸನ್ನಿಹಿತವಾಗಿದ್ದು, ಅದಕ್ಕಾಗಿ ಶಾಸಕರಿಗೆ ದರ ನಿಗದಿ ಮಾಡಿದ್ದಾರೆ. ಗುಪ್ತಚರ ವಿಭಾಗ ಅವರ ಕೈಯಲ್ಲೇ ಇದ್ದು, ಎಲ್ಲಿ ಯಾರಿಗೆ ಎಷ್ಟು ಹಣ ನೀಡಲಾಗಿದೆ ಎಂಬ ವರದಿಯನ್ನು ಅವರು ತರಿಸಿಕೊಳ್ಳಬಹುದಿತ್ತು ಎಂದರು.

ತಮ್ಮ ಸ್ಥಾನ ಅಸ್ಥಿರವಾಗಿರುವುದರಿಂದ ಹೀಗೆ ಮಾತಾಡಿದ್ದಾರೆ. ಹೊಸ ಸರ್ಕಾರ ರಚನೆಯಾಗಲು 50 ಕ್ಕೂ ಅಧಿಕ ಶಾಸಕರು ಪಕ್ಷ ಬಿಟ್ಟು ಹೊರಗೆ ಬರಬೇಕಾಗುತ್ತದೆ. ಆ ಲೆಕ್ಕದಲ್ಲೂ ಅವರು ತಪ್ಪಾಗಿ ಹೇಳಿದ್ದಾರೆ ಎಂದರು.

50 ಶಾಸಕರಿಗೆ ತಲಾ 50 ಕೋಟಿ ರೂ. ಎಂದರೆ 2,500 ಕೋಟಿ ರೂ. ಬೇಕಾಗುತ್ತದೆ. ಇಷ್ಟೊಂದು ಹಣ ಯಾರ ಬಳಿ ಇದೆ? ಹರಾಜಾಗುವ ಶಾಸಕರು ಯಾರು ಎಂಬ ಪ್ರಶ್ನೆಗೆ ಉತ್ತರಿಸಲಿ. ಖರೀದಿ ಮಾಡುವ ಆ ವ್ಯಕ್ತಿಯನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಅಬಕಾರಿ ಇಲಾಖೆಯಲ್ಲಿ ಹಗರಣ ಹಾಗೂ ವಕ್ಫ್ ಭೂ ಕಬಳಿಕೆ ಮುಂದುವರಿದಿದೆ. ಅಬಕಾರಿ ಇಲಾಖೆಯ ಹಗರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತಾಡಿದ್ದಾರೆ. ಇದನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.

ಗೆದ್ದರೆ ಇವಿಎಂ ಸರಿಯೇ?

ಇವರನ್ನು ಮುಟ್ಟಿದರೆ ಜನರು ದಂಗೆ ಏಳುತ್ತಾರೆ ಎನ್ನಲು ಇವರು ಮೇಲಿಂದ ಇಳಿದು ಬಂದವರಲ್ಲ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ನ್ಯಾಯಾಂಗದ ಬಗ್ಗೆ ಗೌರವವಿಲ್ಲ. ಇವರ ಪರವಾಗಿ ತೀರ್ಪು ಬಂದರೆ ನ್ಯಾಯಾಲಯ ಸರಿ ಇದೆ, ಇಲ್ಲವಾದರೆ ಸರಿ ಇಲ್ಲ ಎನ್ನುತ್ತಾರೆ. ಸಚಿವ ಜಮೀರ್ ಅಹ್ಮದ್ ಕೂಡ ಇದೇ ರೀತಿ ಮಾತಾಡಿದ್ದಾರೆ. ಕಾಂಗ್ರೆಸ್ ಗೆದ್ದಾಗ ಇವಿಎಂ ಸರಿ ಇದೆ, ಸೋತಾಗ ಇವಿಎಂ ಸರಿ ಇಲ್ಲ ಎನ್ನುತ್ತಾರೆ ಎಂದು ವ್ಯಂಗ್ಯವಾಡಿದರು.

ಕೋವಿಡ್ ವರದಿ ಪೂರ್ಣ ಬಂದಿಲ್ಲ:

ಕೋವಿಡ್ ತನಿಖೆಯ ಭಾಗ 1 ಮಾತ್ರ ಬಂದಿದೆ. ನ್ಯಾ.ಕೆಂಪಣ್ಣ ಆಯೋಗದ ಭಾಗ 1 ಕೂಡ ಬಂದಿಲ್ಲ. ಅದರ ವರದಿ ಸಂಪೂರ್ಣವಾಗಿ ಹೊರಬರಲಿ. ಕೋವಿಡ್ ಇಡೀ ಜಗತ್ತಿನಲ್ಲಿತ್ತು. ಆಗ ಯಾವ ಸರಕು ಯಾವ ದರದಲ್ಲಿತ್ತು? ಎಲ್ಲ ರಾಜ್ಯದಲ್ಲಿ ಕಿಟ್‌ಗಳನ್ನು ಎಷ್ಟು ದರಕ್ಕೆ ಖರೀದಿ ಮಾಡಲಾಗಿದೆ ಎಂದು ತಿಳಿಸಲಿ. ತುರ್ತು ಖರೀದಿ ಮಾಡದೆ 60 ದಿನಗಳ ಟೆಂಡರ್‌ಗೆ ಕಾದುಕೊಂಡು ಕೂತಿದ್ದರೆ ಎಷ್ಟು ಜನರ ಪ್ರಾಣ ಕಳೆದುಕೊಳ್ಳಬೇಕಾಗಿತ್ತು ಹೇಳಿ? ಖರೀದಿ ಮಾಡಿದ ಅಧಿಕಾರಿಗಳನ್ನು ಪ್ರಶ್ನೆ ಮಾಡಬೇಕು. ಕೋವಿಡ್‌ನ ಪೂರ್ಣ ವರದಿಯನ್ನು ಸದನದಲ್ಲಿ ಬಿಡುಗಡೆ ಮಾಡಲಿ ಎಂದರು.

ನಿಖಿಲ್ ಗೆಲ್ತಾರೆ:

ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಈಗಾಗಲೇ ಗೆದ್ದಿದ್ದಾರೆ. ವಕ್ಫ್, ಮುಡಾ, ವಾಲ್ಮೀಕಿ ನಿಗಮದ ಹಗರಣದಿಂದ ಜನರು ರೋಸಿ ಹೋಗಿದ್ದರು. ಸಚಿವ ಜಮೀರ್ ಅಹ್ಮದ್ ಕರಿಯ ಎಂದು ಹೀಯಾಳಿಸಿದ್ದು, ದೇವೇಗೌಡರ ಕುಟುಂಬ ಖರೀದಿಸುತ್ತೇನೆಂದು ಹೇಳಿದ್ದು, ಮೊದಲಾದ ಹೇಳಿಕೆಗಳಿಂದಾಗಿ ಜನರು ಕಾಂಗ್ರೆಸ್‌ಗೆ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ ಎಂದು ವಿಶ್ವಾಸದಿಂದ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net