

ಬೆಂಗಳೂರು: ಆನ್‌ಲೈನ್ ಬೆಟ್ಟಿಂಗ್ ದಂಧೆ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದಡಿ ಜಾರಿ ನಿರ್ದೇಶನಾಲಯದಿಂದ (ಇ.ಡಿ) ಬಂಧನಕ್ಕೊಳಗಾಗಿರುವ ಆರೋಪಿ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿಗೆ ೧೪ ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಇ.ಡಿ. ಕಸ್ಟಡಿ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಇ.ಡಿ.ಅಧಿಕಾರಿಗಳು ಸೋಮವಾರ ಆರೋಪಿ ಕೆ.ಸಿ.ವೀರೇಂದ್ರ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇ.ಡಿ.ಅಧಿಕಾರಿಗಳು ಈಗಾಗಲೇ ೧೬ ದಿನಗಳ ಕಾಲ ಆರೋಪಿಯನ್ನು ವಶಕ್ಕೆ ಪಡೆದು ಸುದೀರ್ಘ ವಿಚಾರಣೆ ನಡೆಸಿದ್ದರು. ಹೀಗಾಗಿ ಮತ್ತೆ ಆರೋಪಿಯನ್ನು ವಶಕ್ಕೆ ನೀಡುವಂತೆ ಇ.ಡಿ. ಪರ ವಕೀಲರು ಕೇಳಲಿಲ್ಲ. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿ ಪಪ್ಪಿಗೆ ಸೆ.೨೨ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿತು. ಬಳಿಕ ಇ.ಡಿ.ಅಧಿಕಾರಿಗಳು ಆರೋಪಿ ಪಪ್ಪಿಯನ್ನು ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದು ಬಿಟ್ಟು ಬಂದರು.
ಏನಿದು ಪ್ರಕರಣ?
ಇ.ಡಿ. ಅಧಿಕಾರಿಗಳು ಕಳೆದ ಆ.೨೨ರಂದು ಕೆ.ಸಿ.ವೀರೇಂದ್ರ, ಆತನ ಸಹೋದರರು ಹಾಗೂ ಪಾಲುದಾರರ ಮನೆಗಳು ಹಾಗೂ ಕಚೇರಿಗಳು ಸೇರಿದಂತೆ ಚಿತ್ರದುರ್ಗ, ಚಳ್ಳಕೆರೆ, ಬೆಂಗಳೂರು ನಗರ, ಹುಬ್ಬಳ್ಳಿ, ಜೋಧ್‌ಪುರ, ಮುಂಬೈ, ಗೋವಾ ಸೇರಿ ರಾಜ್ಯ ಹಾಗೂ ಹೊರರಾಜ್ಯಗಳ ೩೧ ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದರು. ಆ.೨೩ರಂದು ಸಿಕ್ಕಿಂನ ಗ್ಯಾಂಗ್ಟಕ್‌ನಲ್ಲಿ ಕೆ.ಸಿ.ವೀರೇಂದ್ರನನ್ನು ಬಂಧಿಸಿದ್ದರು. ದಾಳಿಯ ವೇಳೆ ಸುಮಾರು ೧೨ ಕೋಟಿ ರೂ. ನಗದು, ಸುಮಾರು ೬ ಕೋಟಿ ರೂ. ಮೌಲ್ಯದ ಚಿನ್ನಾಭರಣ, ೧೦ ಕೆ.ಜಿ. ಬೆಳ್ಳಿವಸ್ತುಗಳು, ೧ ಕೋಟಿ ರೂ. ಮೌಲ್ಯದ ವಿದೇಶಿ ಕರೆನ್ಸಿ, ನಾಲ್ಕು ವಾಹನಗಳನ್ನು ಜಪ್ತಿ ಮಾಡಿದ್ದರು. ವೀರೇಂದ್ರ ಅವರಿಗೆ ಸೇರಿದ ೧೭ ಬ್ಯಾಂಕ್ ಖಾತೆಗಳು ಮತ್ತು ೨ ಬ್ಯಾಂಕ್ ಲಾಕರ್‌ಗಳನ್ನು ಫ್ರೀಜ್ ಮಾಡಿದ್ದರು.
ಮತ್ತೆ ಸೆ.೨ರಂದು ವೀರೇಂದ್ರ ಹಾಗೂ ಇತರರಿಗೆ ಸೇರಿದ ಬೆಂಗಳೂರು ಮತ್ತು ಚಳ್ಳಕೆರೆಯ ವಿವಿಧ ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಶೋಧಿಸಿದ್ದರು. ಈ ವೇಳೆ ವೀರೇಂದ್ರ ಅವರ ೯ ಬ್ಯಾಂಕ್ ಖಾತೆಗಳಲ್ಲಿನ ಸುಮಾರು ೪೦.೬೯ ಕೋಟಿ ರೂ. ಮತ್ತು ೨೬೨ ನಕಲಿ ಖಾತೆಗಳಲ್ಲಿನ ೧೪.೪೬ ಕೋಟಿ ರೂ. ಸೇರಿ ಒಟ್ಟು ೫೫ ಕೋಟಿ ರೂ. ಫ್ರೀಜ್ ಮಾಡಿ ಐದು ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಿದ್ದರು.