

ಹುಣಸೂರು: ನಗರದ ನರಸಿಂಹಸ್ವಾಮಿ ತಿಟ್ಟು ಬಡಾವಣೆಯ ಆರ್ಥಿಕ ಮತ್ತು ಮೂಲಸೌಕರ್ಯಗಳ ಕೊರತೆಯಿಂದ ತೊಂದರೆಗೊಳಗಾಗಿದ್ದ 6ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಶಾಸಕ ಜಿ.ಡಿ.ಹರೀಶ್‌ಗೌಡ ವೈಯಕ್ತಿಕ ನೆರವು ನೀಡಿದರು.
ನಾಲ್ಕು ದಿನಗಳ ಹಿಂದೆ ಬಡಾವಣೆಯ ವೀಕ್ಷಣೆಗೆ ಬಂದಿದ್ದ ಶಾಸಕ ಹರೀಶ್‌ಗೌಡ ಅವರ ಬಳಿ ಕೆಲವರು ನೋವು ತೋಡಿಕೊಂಡಿದ್ದರು. ಈ ಸಂದರ್ಭ ತುರ್ತು ಅಗತ್ಯವಿರುವ ಬೇಡಿಕೆಗಳನ್ನು ವೈಯಕ್ತಿಕವಾಗಿ ಭರಿಸುವುದಾಗಿ ಭರವಸೆ ನೀಡಿದ್ದರು.
ಅದರಂತೆ ಶನಿವಾರ ತಮ್ಮ ಆಪ್ತ ಸಹಾಯಕರ ಮೂಲಕ ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಾ ಚಿಕಿತ್ಸೆಗೆ ಹಣವಿಲ್ಲದೆ ಕಷ್ಟಪಡುತ್ತಿದ್ದ ಚನ್ನಯ್ಯನ ಔಷಧ ಉಪಚಾರಕ್ಕಾಗಿ 5000 ರೂ., ಅರ್ಧ ಮನೆ ಕಟ್ಟಿ ಇಟ್ಟಿಗೆಯಿಲ್ಲದೆ ಸ್ಥಗಿತಗೊಂಡಿದ್ದ ನೇತ್ರಾ ಎಂಬ ಮಹಿಳೆಗೆ 300 ಇಟ್ಟಿಗೆಗಳು, ಗಾರೆಯಿಲ್ಲದ ನೆಲದಲ್ಲೇ ಮಲಗುತ್ತಿದ್ದ ವೃದ್ಧ ಮಹಿಳೆಯರಾದ ಜಯಮ್ಮ, ಲಕ್ಷ್ಮಮ್ಮ ಎಂಬುವರ ಮನೆ ಗಿಲಾವು ಮಾಡಿಸಿಕೊಳ್ಳಲು ತಲಾ 10 ಮೂಟೆ ಸಿಮೆಂಟ್, ಕಾಳಮ್ಮ ಅವರಿಗೆ ಛಾವಣಿ ಶೀಟು ವ್ಯವಸ್ಥೆ, ಕಲ್ಕುಣಿಕೆ ಗ್ರಾಮದ ಪರಿಶಿಷ್ಟ ಪಂಗಡದ ಲಕ್ಷ್ಮೀ ಎಂಬುವರು ಕ್ಯಾನ್ಸರ್‌ನಿಂದ ಮರಣ ಹೊಂದಿದ್ದು ಆ ಕುಟುಂಬಕ್ಕೆ 5 ಸಾವಿರ ರೂ. ವೈಯಕ್ತಿಕ ನೆರವು ನೀಡಿದರು.
ಶಾಸಕರಿಂದ ನೆರವು ಪಡೆದ ದಲಿತ ಮಹಿಳೆ ಲಕ್ಷ್ಮೀ ಮಾತನಾಡಿ, ಶಾಸಕ ಹರೀಶ್‌ಗೌಡ ಸಂಕಷ್ಟದಲ್ಲಿರುವವರ ನೋವುಗಳಿಗೆ ಸದಾ ಸ್ಪಂದಿಸುವ ಬಡವರನ್ನು ಪ್ರೀತಿ ಗೌರವದಿಂದ ಕಾಣುವ ತಾಯ್ತನವಿರುವ ವ್ಯಕ್ತಿತ್ವವನ್ನು ಹೊಂದಿದ್ದಾರೆಂದು ಸ್ಮರಿಸಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ, ನಿವಾಸಿಗಳಾದ ಇಂದ್ರಮ್ಮ, ನೇತ್ರಾ, ಜಯಮ್ಮ, ಕಾಳಮ್ಮ, ಲಕ್ಷ್ಮಮ್ಮ, ಗಂಗಮ್ಮ, ಪಾರ್ವತಮ್ಮ, ಸರೋಜಮ್ಮ, ಜಾನಕಮ್ಮ, ಮೀನಾಕ್ಷಿ, ಅನಿತಾ ಇತರರು ಇದ್ದರು.