6 ತಿಂಗಳ ಹಿಂದೆಯೇ ನಿವೃತ್ತಿ ನಿರ್ಧಾರ: ಕಿರಣ್ ಕೊಡ್ಗಿಗೆ ಟಿಕೆಟ್ ಕೊಟ್ಟರೆ ಖುಷಿ; ಬಿಜೆಪಿಗಾಗಿ ದುಡಿಯುತ್ತೇನೆ ಎಂದ ಹಾಲಾಡಿ

Halady Srinivas Shetty (1)
Published on

| ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

ಚುನಾವಣೆ ಕಣದಿಂದ ಹಿಂದೆ ಸರಿಯುತ್ತಿರುವುದು ದುಡುಕಿನ ನಿರ್ಧಾರವಲ್ಲ. ಆರು ತಿಂಗಳ ಹಿಂದೆಯೇ ಇದನ್ನು ನಿರ್ಧರಿಸಿದ್ದೆ. ಬಿಜೆಪಿ ಅಭ್ಯರ್ಥಿಯನ್ನು ಚುನಾವಣೆಯಲ್ಲಿ ಗೆಲ್ಲಿಸಬೇಕು ಎಂದು ನೀತಿ ಸಂಹಿತೆ ಜಾರಿಯಾಗುವ ತನಕ ಕೆಲಸ ಮಾಡಿದ್ದೇನೆ. ಕಿರಣ್ ಕುಮಾರ್ ಕೊಡ್ಗಿ ಅಭ್ಯರ್ಥಿಯಾದರೆ ಖುಷಿ ಪಡುತ್ತೇನೆ.

ಹೀಗೆಂದವರು ಚುನಾವಣೆ ಕಣದಿಂದ ಹಿಂದೆ ಸರಿದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ.

ವಿಜಯವಾಣಿ ಜತೆ ಮಾತನಾಡಿದ ಅವರು, ಮನಸ್ಸು ಚಂಚಲವಾಗಿಲ್ಲ. ಜಾಗೃತ ಮನಸ್ಸಿನಿಂದಲೇ ನಿರ್ಧಾರಕ್ಕೆ ಬಂದಿದ್ದೇನೆ. ನಾನು ಬರುವಾಗ ಏನೂ ತಂದಿಲ್ಲ ಹೋಗುವಾಗ ಏನೂ ಕೊಂಡೊಯ್ಯಲ್ಲ. ಶಾಸಕನಲ್ಲದಿದ್ದರೂ ಜನರ ಜತೆಗೆ ಇರುತ್ತೇನೆ ಎಂದರು. ಮತದಾರರು ಜಾತಿ, ಮತ, ಧರ್ಮವನ್ನು ಮರೆತು ತನಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಪಕ್ಷೇತರನಾಗಿ ಕಣಕ್ಕಿಳಿದಾಗಲೂ ಗೆಲ್ಲಿಸಿದ್ದರು. ನಾಲ್ಕು ಬಾರಿ ಬಿಜೆಪಿ, ಒಮ್ಮೆ ಪಕ್ಷೇತರನಾಗಿ ನಿಂತಾಗ ಬೆಂಬಲಿಸಿದ ಎಲ್ಲರಿಗೂ ಕೃತಜ್ಞ. ಕೊನೆ ಉಸಿರು ಇರುವವರೆಗೂ ಸಕ್ರಿಯನಾಗಿಯೇ ಇರುತ್ತೇನೆ ಎಂದು ಹಾಲಾಡಿ ಹೇಳಿದರು.

ಅಭ್ಯರ್ಥಿ ಆಯ್ಕೆ ರಾಷ್ಟ್ರೀಯ ಮಟ್ಟದಲ್ಲಿ ಆಗಬೇಕು. ಕಿರಣ್ ಕೊಡ್ಗಿ ಅಭ್ಯರ್ಥಿಯಾದರೆ ಸಂತೋಷ. ಕಿರಣ್ ಕೊಡ್ಗಿ ತಂದೆಯ ಕಾಲದಿಂದಲೇ ಕುಟುಂಬದ ಆಪ್ತರು. ಅವರು 25 ವರ್ಷ ಒಂದೇ ಮನಸ್ಸಿನಿಂದ ಎಲ್ಲ ಚುನಾವಣೆಯಲ್ಲಿ ಕೆಲಸ ಮಾಡಿದ್ದಾರೆ. ಅವರ ಪರಿಶುದ್ಧತೆ, ಸಹನೆ, ಒಳ್ಳೆತನಕ್ಕೆ ಮೆಚ್ಚಿದ್ದೇನೆ. | ಹಾಲಾಡಿ ಶ್ರೀನಿವಾಸ ಶೆಟ್ಟಿ ಶಾಸಕ, ಕುಂದಾಪುರ

ಹಿಂದೆಯೂ ಸಂಚಲನ ಮೂಡಿಸಿದ್ದರು!: ಸಂಪುಟ ವಿಸ್ತರಣೆ ಸಂದರ್ಭ ಸಚಿವ ಸ್ಥಾನದ ಭರವಸೆ ನೀಡಿ ಪ್ರಮಾಣವಚನ ಸ್ವೀಕರಿಸಲು ಬೆಂಗಳೂರಿಗೆ ಕರೆಸಿಕೊಂಡು ಕೊನೆ ಕ್ಷಣದಲ್ಲಿ ಕೈಬಿಟ್ಟಿದ್ದರಿಂದ ನೊಂದ ಹಾಲಾಡಿ ಶಾಸಕ ಸ್ಥಾನ ಹಾಗೂ ಬಿಜೆಪಿಗೆ ರಾಜೀನಾಮೆ ನೀಡಿ ಹೊರ ಬಂದಿದ್ದರು. ಹಾಲಾಡಿ ಅವರ ಮನವೊಲಿಸುವಲ್ಲಿ ಯಡಿಯೂರಪ್ಪ, ಜಗದೀಶ ಶೆಟ್ಟರ್, ಸದಾನಂದ ಗೌಡ, ಶೋಭಾ ಕರಂದ್ಲಾಜೆ ಮತ್ತಿತರ ಬಿಜೆಪಿ ವರಿಷ್ಠರು ಪ್ರಯತ್ನಿಸಿದರೂ, ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆ ಆದ ನಂತರವೂ ಹಾಲಾಡಿಯವರನ್ನು ಪಕ್ಷಕ್ಕೆ ಕರೆತರುವ ಪ್ರಯತ್ನ ನಡೆಸಲಾಗಿತ್ತು. ಹಾಲಾಡಿ ಪಕ್ಷಕ್ಕೆ ಮರಳದಿದ್ದರೂ ಲೋಕಸಭೆ ಹಾಗೂ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಲಿಸಿದ್ದರು. ಬೇರೆ ಪಕ್ಷದಿಂದ ಆಹ್ವಾನ ಬಂದರೂ, ಹಾಲಾಡಿ ವಲಸೆಗೆ ಮನ ಮಾಡಲಿಲ್ಲ. ಕೊನೆಗೆ ಯಡಿಯೂರಪ್ಪ ಸಮ್ಮುಖ ಹಾಲಾಡಿಯವರನ್ನು ಗೌರವಯುತವಾಗಿ ಪಕ್ಷಕ್ಕೆ ಬರಮಾಡಿಕೊಳ್ಳಲಾಗಿತ್ತು. ಅಂದು ಹಾಲಾಡಿ ಆಗಮನ ವಿರೋಧಿಸಿ ಸಭೆಯಲ್ಲಿ ಗಲಾಟೆಯೂ ಆಗಿತ್ತು. ಹಾಲಾಡಿ ಆಗಮನ ವಿರೋಧಿಸುವವರು ಸಭೆಯಿಂದ ಹೊರ ನಡೆಯಬಹುದು ಎಂದು ಬಿಎಸ್​ವೈ ಖಡಕ್ ಎಚ್ಚರಿಕೆ ನೀಡಿದ್ದರು. ಹಾಲಾಡಿ ಸಚಿವ ಸ್ಥಾನ ವಂಚನೆ, ರಾಜೀನಾಮೆ ಹಿನ್ನೆಲೆಯಲ್ಲಿ ಕುಂದಾಪುರ ಕೆರಳಿ ಕೆಂಡವಾಗಿದ್ದು ಚುನಾವಣೆ ಫಲಿತಾಂಶದಿಂದ ಸಾಬೀತಾಗಿತ್ತು. ಬಿಜೆಪಿ ಅಭ್ಯರ್ಥಿಯನ್ನು ಹೀನಾಯವಾಗಿ ಸೋಲಿಸಿ ಕ್ಷೇತ್ರದ ಮತದಾರರು ಹಾಲಾಡಿ ಕೊರಳಿಗೆ ಗೆಲುವಿನ ಹಾರ ತೊಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net