

ಬೆಂಗಳೂರು: ಗೋವಾ ಮತ್ತು ಕಾರವಾರವನ್ನು ಸಂಪರ್ಕಿಸುವ ಕಾಳಿ ನದಿ ಸೇತುವೆ ಕುಸಿದು ಬಿದ್ದಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದ್ದು, ಭವಿಷ್ಯದಲ್ಲಿ ಸರ್ಕಾರ ನಿರ್ಮಿಸುವ ಸೇತುವೆಗಳು ದೀರ್ಘಕಾಲ ಬಾಳಿಕೆ ಬರುವಂತೆ ಗುಣಮಟ್ಟ ಕಾಯ್ದುಕೊಳ್ಳುವ ಸಲುವಾಗಿ ಇಂಜಿನಿಯರ್‌ಗಳಿಗೆ ಹೆಚ್ಚಿನ ತರಬೇತಿ ನೀಡುವ ಅಗತ್ಯವಿದೆ ಎಂದು ಶಾಸಕ ಹಾಗೂ ಕೆ.ಆರ್.ಡಿ.ಸಿ.ಎಲ್ ಅಧ್ಯಕ್ಷ ಎಚ್.ಸಿ. ಬಾಲಕೃಷ್ಣ ಹೇಳಿದ್ದಾರೆ.
ನಗರದ ಕೆ.ಆರ್.ಡಿ.ಸಿ.ಎಲ್ ಸಭಾಂಗಣದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಬ್ರಿಡ್ಜ್ ಇಂಜಿನಿಯರ್ಸ್ ಕರ್ನಾಟಕ ಸೆಂಟರ್ ನಿಂದ ಆಯೋಜಿಸಲಾಗಿದ್ದ ಭೂತ, ಪ್ರಸ್ತುತ ಮತ್ತು ಭವಿಷ್ಯದಲ್ಲಿ ಸೇತುವೆಗಳ ನಿರ್ಮಾಣದಲ್ಲಿ ಕ್ರಾಂತಿಕಾರಕ ಬದಲಾವಣೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕಾಳಿ ನದಿಗೆ ಅಡ್ಡಲಾಗಿ ಕಟ್ಟಲಾದ ಸೇತುವೆ ಕುಸಿದು ಸಾಕಷ್ಟು ಸಮಸ್ಯೆಯಾಗಿದೆ. ಕೇವಲ 40 ವರ್ಷಗಳ ಹಿಂದೆ ನಿರ್ಮಿಸಿದ ಸೇತುವೆ ಕುಸಿದಿರುವುದು ಆಘಾತಕಾರಿ. ರಸ್ತೆಗಳು ಹಾಳಾದರೆ ದುರಸ್ತಿ ಮಾಡಬಹುದು. ಸೇತುವೆಗಳನ್ನು ಹೊಸದಾಗಿಯೇ ನಿರ್ಮಿಸಬೇಕಾಗುತ್ತದೆ. ಕಾವೇರಿ ನದಿಗೆ ಕಟ್ಟಿದ ಸೇತುವೆಗಳು ನೂರು ವರ್ಷ ತುಂಬಿದರೂ ಗಟ್ಟಿಮುಟ್ಟಾಗಿವೆ. ಆದರೆ ಇತ್ತೀಚೆಗೆ ನಿರ್ಮಿಸುತ್ತಿರುವ ಸೇತುವೆಗಳು ಕುಸಿತವಾಗುತ್ತಿವೆ. ಸೇತುವೆಗಳ ನಿರ್ಮಾಣದಲ್ಲಿ ಹೊಸ ಹೊಸ ಆವಿಷ್ಕಾರಗಳ ಬರಬೇಕಾಗಿದೆ. ಆ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರ ಅರ್ಥಪೂರ್ಣ ಎಂದು ಬಾಲಕೃಷ್ಣ ಹೇಳಿದರು.
ಕಾರ್ಯಕ್ರಮದಲ್ಲಿ ಐಐಎಸ್ಸಿ, ಐಎಬಿಎಸ್ಸಿ ಸೇರಿದಂತೆ ವಿವಿದ ತಜ್ಞ ಸಂಸ್ಥೆಗಳ ಸದಸ್ಯರು ಹಿರಿಯ ಇಂಜಿನಿಯರ್‌ಗಳಾದ ಜಿ. ಗಣೇಶ್, ಎಂ.ಬಿ. ಬುರ್ಜಿ, ಕೃಷ್ಣಾ ರೆಡ್ಡಿ, ಜೈಪ್ರಸಾದ್, ಲಿಂಗಮೂರ್ತಿ, ಡಾ. ಸೆಲ್ವಕುಮಾರ್, ಜೈಗೋಪಾಲ್, ಅರವಿಂದ್ ಸೇಲ್ಚಾ ಮತ್ತಿತರರು ಪಾಲ್ಗೊಂಡಿದ್ದರು.