

ಪಟ್ನಾ: ಆಘಾತಕಾರಿ ಘಟನೆಯೊಂದರಲ್ಲಿ ಶಾಸಕರೊಬ್ಬರು ಸಾರ್ವಜನಿಕ ಪ್ರದೇಶದಲ್ಲಿ ತಮ್ಮ ಬಳಿ ಇರುವ ಪಿಸ್ತೂಲ್ಅನ್ನು ಝಳಪಿಸುತ್ತಾ ಒಡಾಡಿರುವ ಘಟನೆ ಬಿಹಾರದ ಭಾಗಲ್ಪುರದ ಜವಾಹರ್ ಲಾಲ್ ನೆಹರು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದನ್ನು ಪ್ರಶ್ನಿಸಿದ ಪತ್ರಕರ್ತರಿಗೆ ಶಾಸಕ ಅವಾಜ್ ಹಾಕಿ ದರ್ಪ ಮೆರೆದಿರುವುದು ವ್ಯಾಪಕ ಖಂಡನೆಗೆ ಗುರಿಯಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕರ ಸುರಕ್ಷತೆಯ ಬಗ್ಗೆ ಕಳವಳವನ್ನು ಉಂಟುಮಾಡಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಶಾಸಕ ಗೋಪಾಲ್ ಮಂಡಲ್ ತಾವು ಸಾರ್ವಜನಿಕವಾಗಿ ಪಿಸ್ತೂಲ್ ಹಿಡಿದು ಒಡಾಡಿರುವ ಕುರಿತು ಪ್ರಶ್ನಿಸಿದಾಗ ತಾವು ಈಗಲೂ ಗನ್ ಹಿಡಿದುಕೊಂಡಿದ್ದು, ಇದನ್ನು ಪ್ರಶ್ನಿಸಲು ಯಾರಿಗೂ ಅಧಿಕಾರವಿಲ್ಲ ಎಂದು ಹೇಳಿದ್ದಾರೆ.
ತಮ್ಮ ಬಳಿ ಗನ್ ಹಿಡಿದುಕೊಂಡಿರುವುದನ್ನು ಸಮರ್ಥಿಸಿಕೊಂಡ ಶಾಸಕ ಗೋಪಾಲ್ ಬೆಲ್ಟ್ ಸರಿಯಾಗಿ ಧರಿಸದ ಕಾರಣ ನಾನು ಪಿಸ್ತೂಲ್ಅನ್ನು ಕೈಯಲ್ಲಿ ಹಿಡಿದುಕೊಂಡು ತಿರುಗಾಡಬೇಕಾಯಿತು. ಇದನ್ನು ಪ್ರಶ್ನಿಸಲು ನೀವು ಯಾರು ಎಂದು ಕೇಳುತ್ತಾ ಮಾಧ್ಯಮದವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದನ್ನು ವೈರಲ್ ವಿಡಿಯೋದಲ್ಲಿ ನೋಡಬಹುದಾಗಿದೆ.
ಆ ನಂತರ ತಮ್ಮ ಹೇಳಿಕೆಗೆ ಸಮಾಜಾಯಿಷಿ ನೀಡಿದ ಶಾಸಕ ಗೋಪಾಲ್ ನನ್ನ ಪ್ರಾಣ ಬೆದರಿಕೆ ಇರುವುದರಿಂದ ರಕ್ಷಣೆಗಾಗಿ ನಾನು ಸದಾ ನನ್ನ ಜೊತೆ ಗನ್ ಒಂದನ್ನು ಇಟ್ಟುಕೊಂಡಿರುತ್ತೇನೆ. ಒಂದು ವೇಳೆ ನನ್ನ ಮೇಲೆ ಯಾರೇ ದಾಳಿ ಮಾಡಲು ಮುಂದಾದರೂ ಅವರ ಮೇಲೆ ಗುಂಡು ಹಾರಿಸಲು ನಾನು ಹಿಂಜರಿಯುವುದಿಲ್ಲ ಎಂದು ಶಾಸಕ ಗೋಪಾಲ್ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.