

ಬೆಂಗಳೂರು: ಭಾರೀ ಪ್ರಮಾಣದಲ್ಲಿ ವಿದ್ಯುತ್ ಏರಿಕೆಯನ್ನು ಖಂಡಿಸಿ ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವೆಡೆ ಅಂಗಡಿ-ಮುಂಗಟ್ಟುಗಳು ಮುಚ್ಚಿವೆ. ಧಾರವಾಡ ಸೇರಿ 11 ಜಿಲ್ಲೆಗಳಲ್ಲಿ ಬಂದ್‌ಗೆ ಬೆಂಬಲ ವ್ಯಕ್ತವಾಗಿದೆ.
ಧಾರವಾಡ ಜಿಲ್ಲೆಯ ಬಹುತೇಕ ಉದ್ಯಮ ಇಂದು ಸ್ಥಬ್ಧವಾಗಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲೂ ಕೈಗಾರಿಕೆ ಸೇರಿದಂತೆ ಉದ್ಯಮ ಬಂದ್ ಆಗಿದೆ. ಕೈಗಾರಿಕೆ, ಸಾರಿಗೆ, ಅಟೋಮೊಬೈಲ್ ಹಾಗೂ ಜವಳಿ ಸೇರಿದಂತೆ ವಿವಿಧ ವ್ಯಾಪಾರ ವಹಿವಾಟು ಸ್ಥಗಿತವಾಗಿವೆ. ತುರ್ತು ಸೇವೆ ಹೊರತುಪಡಿಸಿ ವ್ಯಾಪಾರ ವಹಿವಾಟು ಎಲ್ಲವೂ ಬಂದ್ ಆಗಿದೆ.
ಧಾರವಾಡದಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಹುತೇಕ ಅಂಗಡಿ ಮುಗ್ಗಟ್ಟು ಬಂದ್ ಆಗಿವೆ. ಕಿರಾಣಿ, ಬಟ್ಟೆ, ಸ್ಟೇಷನರಿ ವ್ಯಾಪಾರ ಬಂದ್ ಆಗಿವೆ. ಎಪಿಎಂಸಿ ವ್ಯಾಪಾರ ವಹಿವಾಟು ಸ್ಥಗಿತವಾಗಿದೆ. ಕೆಲ ಹೊಟೇಲ್ಗಳು ಮಾತ್ರ ಆರಂಭವಾಗಿವೆ. ಇದರ ನಡುವೆ ಪ್ರತಿಭಟನೆ ಸಿದ್ಧತೆ ಆರಂಭವಾಗಿದೆ. ಕೆಸಿಸಿ ಬ್ಯಾಂಕ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಈ ವೇಳೆ ಬಹುತೇಕ ಎಲ್ಲ ಬಂದ್ ಆಗುವ ಸಾಧ್ಯತೆ ಇದೆ. ಸದ್ಯಕ್ಕೆ ನಗರದ ಸೂಪರ್ ಮಾರ್ಕೆಟ್ ಸಂಪೂರ್ಣ ಬಂದ್ ಆಗಿದೆ. ಸುಭಾಷ್ ರಸ್ತೆ ಮಾರ್ಕೆಟಿನಲ್ಲೂ ಅಂಗಡಿಗಳು ತೆರೆದಿಲ್ಲ. ಬೀದಿ ಬದಿ ವ್ಯಾಪಾರ ಮಾತ್ರ ಯಥಾಸ್ಥಿತಿ ಇದೆ.
ಬೆಳಗಾವಿಯಲ್ಲೂ ಕರ್ನಾಟಕ ಬಂದ್‌ಗೆ ಬೆಂಬಲ ವ್ಯಕ್ತವಾಗಿದೆ. ದಿ ಬೆಳಗಾವಿ ಚೇಂಬರ್ಸ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿಸ್ ವತಿಯಿಂದ ಕರ್ನಾಟಕ ಬಂದ್‌ಗೆ ಬೆಂಬಲ ವ್ಯಕ್ತವಾಗಿದ್ದು, ವಿದ್ಯುತ್ ದರ ಏರಿಕೆ ಖಂಡಿಸಿ ಉದ್ಯಮಿಗಳು ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದಾರೆ. ಬೆಳಗಾವಿಯ ಸಂಭಾಜಿ ವೃತ್ತದಿಂದ ಪ್ರತಿಭಟನೆ ಮೆರವಣಿಗೆ ಆರಂಭವಾಗಿದ್ದು, ಚೆನ್ನಮ್ಮ ವೃತ್ತ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಯನ್ನು ತಲುಪಲಿದೆ. ಪ್ರತಿಭಟನೆಯಲ್ಲಿ ಉದ್ಯಮಿಗಳು, ವ್ಯಾಪಾರಿಗಳು ಸೇರಿದಂತೆ ಸಾವಿರಕ್ಕೂ ಅಧಿಕ ಜನರು ಭಾಗಿಯಾಗಿದ್ದಾರೆ. ಏರಿಕೆಯಾದ ವಿದ್ಯುತ್ ದರ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಉದ್ಯಮಿಗಳು ಮನವಿ ಸಲ್ಲಿಸಲಿದ್ದಾರೆ.
ಬಳ್ಳಾರಿಯಲ್ಲಿ ಕರ್ನಾಟಕ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೊಟೆಲ್ ಸೇರಿದಂತೆ ವ್ಯಾಪಾರ ವಹಿವಾಟು ಸ್ಥಬ್ಧವಾಗಿದೆ. ಆದರೆ, ವಾಹನ ಸಂಚಾರ ಯಾತಾ ಸ್ಥಿತಿ ಇದೆ. ಬಳ್ಳಾರಿಯ ಪ್ರಮುಖ ವ್ಯವಹಾರ ಸ್ಥಳ ಬೆಂಗಳೂರು ರಸ್ತೆ ಸಂಪೂರ್ಣ ಬಂದ್ ಆಗಿದೆ. ಚೇಂಬರ್ ಆಫ್ ಕಾರ್ಮರ್ಸಿನಿಂದ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ರಾಯಲ್ ವೃತ್ತದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯುತ್ತಿದೆ.
ಕೊಪ್ಪಳದಲ್ಲಿ ಎಂದಿನಂತೆ ಮಾರುಕಟ್ಟೆ ಕಾರ್ಯನಿರ್ವಹಿಸುತ್ತಿದೆ. ವ್ಯಾಪಾರಸ್ಥರು ಅಂಗಡಿಗಳನ್ನು ಬಂದ್ ಮಾಡಿಲ್ಲ. ಆದರೆ, ಪ್ರತಿಭಟನಾ ಸಮಯದಲ್ಲಷ್ಟೇ ವರ್ತಕರು ಅಂಗಡಿಗಳನ್ನು ಬಂದ್ ಮಾಡಲಿದ್ದಾರೆ. ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತರಳಿ ಮನವಿ ಸಲ್ಲಿಸಲಿದ್ದಾರೆ.
ಕರ್ನಾಟಕ ಬಂದ್‌ಗೆ ಕಾರವಾರದ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ. ಅಂಗಡಿಮುಂಗಟ್ಟುಗಳು ಬಂದ್ ಆಗಿದ್ದು, ಆಟೋ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ವಿದ್ಯುತ್ ಬಿಲ್ ಹೆಚ್ಚಳ ಖಂಡಿಸಿ ವಾಣಿಜ್ಯೋದ್ಯಮಿಗಳು ಪ್ರತಿಭಟನೆ ಹಮ್ಮಿಕೊಂಡಿದ್ದು, ವಾಣಿಜ್ಯೋದ್ಯಮ, ಕೈಗಾರಿಕೆಗಳನ್ನು ರಕ್ಷಿಸುವಂತೆ ಆಗ್ರಹಿಸಿದ್ದಾರೆ. ನಗರದ ಸವಿತಾ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿದ್ದು, ಜಿಲ್ಲಾಧಿಕಾರಿ ಕಚೇರಿವರೆಗೆ ಸಾಗಲಿದೆ.
ವಿದ್ಯುತ್ ದರ ಏರಿಕೆ ಖಂಡಿಸಿ ಕಲಬುರಗಿಯ ಕಲ್ಯಾಣ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ನಗರದ ಚೌಕ್ ವೃತ್ತದ ಬಳಿ ಪ್ರತಿಭಟನೆ ನಡೆಯುತ್ತಿದೆ. ವಾಣಿಜ್ಯೋದ್ಯಮಿಗಳು ಹಾಗೂ ವ್ಯಾಪಾರಸ್ಥರು ಅಂಗಡಿ ಮುಂಗಟ್ಟು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.
ಕರ್ನಾಟಕ ಬಂದ್‌ನಲ್ಲಿ ಭಾಗವಹಿಸದಂತೆ ಎಫ್‌ಕೆಸಿಸಿಐ ಸೇರಿದಂತೆ ದಕ್ಷಿಣ ಕರ್ನಾಟಕ ಭಾಗದ ವಿವಿಧ ವಾಣಿಜ್ಯ ಸಂಘಟನೆಗಳು ತೀರ್ಮಾನ ಮಾಡಿದೆ. ಎಫ್‌ಕೆಸಿಸಿಐ ತನ್ನ ಜಿಲ್ಲಾ ಘಟಕಗಳಿಗೂ ಬಂದ್‌ನಲ್ಲಿ ಭಾಗವಹಿಸದಂತೆ ಈಗಾಗಲೇ ಮನವಿ ಮಾಡಿದೆ. ಹಳೇ ಮೈಸೂರು ಭಾಗದ ಯಾವುದೇ ಸಂಘಟನೆಗಳು ಕೂಡ ಬಂದ್‌ಗೆ ಬೆಂಬಲ ಸೂಚಿಸಿಲ್ಲ.
ದರ ಏರಿಕೆಯಿಂದ ಆಗಿರುವ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 23ರಂದು ಸಭೆ ಕರೆದಿರುವ ಹಿನ್ನೆಲೆಯಲ್ಲಿ ಬಂದ್‌ನಿಂದ ದೂರು ಉಳಿಯಲು ಇವು ತೀರ್ಮಾನಿಸಿವೆ. (ದಿಗ್ವಿಜಯ ನ್ಯೂಸ್)