

ಭಾರತದಲ್ಲಿ ಸಾಕಷ್ಟು ಮಂದಿ ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹೃದಯಾಘಾತದ ಪ್ರಕರಣಗಳು ಸಹ ಹೆಚ್ಚಾಗುತ್ತಿವೆ. ಹೃದಯ ದೇಹದ ಬಹುಮುಖ್ಯ ಅಂಗ ಎಂಬುದು ಎಲ್ಲರಿಗೂ ತಿಳಿದಿದೆ. ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳು ಹೃದಯದ ಸಮಸ್ಯೆಯೊಂದಿಗೆ ಪ್ರಾರಂಭವಾಗುತ್ತವೆ. ಹೀಗಾಗಿ ಹೃದಯವನ್ನು ಆರೋಗ್ಯವಾಗಿ ಇಟ್ಟುಕೊಳ್ಳುವುದು ತುಂಬಾ ಮುಖ್ಯ. ನಮ್ಮ ರಕ್ತಪರಿಚಲನೆಯನ್ನು ಸುಧಾರಿಸುವ ಆಹಾರಗಳ ಬಗ್ಗೆ ನಾವಿಂದು ತಿಳಿದುಕೊಳ್ಳೋಣ.
ಬೀಟ್ರೂಟ್, ಬೆರ್ರಿ, ಬೆಳ್ಳುಳ್ಳಿ, ಈರುಳ್ಳಿ, ಸಿಟ್ರಸ್ ಹಣ್ಣುಗಳು ಮತ್ತು ಹಸಿರು ಎಲೆಗಳು ಸೇರಿದಂತೆ ಹಲವು ಆಹಾರಗಳು ದೇಹದಲ್ಲಿ ರಕ್ತದ ಹರಿವನ್ನು ಸುಧಾರಿಸಿ, ಹೃದಯದ ಆರೋಗ್ಯವನ್ನು ಕಾಪಾಡುತ್ತವೆ. ಇಡೀ ಆರೋಗ್ಯಕ್ಕೆ ರಕ್ತದ ಪರಿಚಲನೆಯೇ ತುಂಬಾ ಮುಖ್ಯ. ಯಾವ ಭಾಗಕ್ಕೆ ರಕ್ತ ಸರಿಯಾಗಿ ತಲುಪುವುದಿಲ್ಲವೋ ಆ ಭಾಗ ಹಾನಿಗೆ ಒಳಗಾಗುತ್ತದೆ. ಹೀಗಾಗಿ ನಮ್ಮ ದೇಹದಲ್ಲಿ ರಕ್ತದ ಪರಿಚಲನೆಯ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು.
ಉತ್ತಮ ರಕ್ತಪರಿಚಲನಾ ವ್ಯವಸ್ಥೆಯು ಆಮ್ಲಜನಕ ಮತ್ತು ಪೋಷಕಾಂಶಗಳನ್ನು ದೇಹದಲ್ಲಿ ಸರಿಯಾದ ಸ್ಥಳಕ್ಕೆ ತಲುಪಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ನಮ್ಮ ಹೃದಯವನ್ನು ಸಮತೋಲನದಲ್ಲಿ ಇಡಲು, ಹೃದಯಾಘಾತ ಮತ್ತು ಅಧಿಕ ರಕ್ತದೊತ್ತಡದಂತಹ ಗಂಭೀರ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಲು ನಮಗೆ ಉತ್ತಮ ರಕ್ತಪರಿಚಲನೆಯ ಅಗತ್ಯವಿದೆ. ಅದಕ್ಕಾಗಿ ಉತ್ತಮ ಆಹಾರಗಳನ್ನು ನಮ್ಮ ಪ್ರತಿದಿನದ ಡಯೆಟ್ನಲ್ಲಿ ಸೇರಿಸಿಕೊಳ್ಳುವುದು ತುಂಬಾನೇ ಮುಖ್ಯ.
ರಕ್ತಪರಿಚಲನೆಯನ್ನು ಸುಧಾರಿಸಲು ಮತ್ತು ಹೃದಯದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುವ ಆಹಾರಗಳ ಪಟ್ಟಿ ಇಲ್ಲಿದೆ.
ದಾಳಿಂಬೆ: ಸಿಹಿಯಾದ ದಾಳಿಂಬೆ ಹಣ್ಣಿನಲ್ಲಿ ಹೃದಯದ ಆರೋಗ್ಯಕ್ಕೆ ಬೇಕಾದ ಆ್ಯಂಟಿ ಆಕ್ಸಿಡೆಂಟ್ಸ್ ಮತ್ತು ನೈಟ್ರೇಟ್ಸ್ ಹೇರಳವಾಗಿವೆ. ಹೀಗಾಗಿ ಆಗಾಗ ದಾಳಿಂಬೆ ಜ್ಯೂಸ್ ಕುಡಿಯುವುದರಿಂದ ರಕ್ತದ ಪರಿಚಲನೆ ಉತ್ತಮವಾಗುತ್ತದೆ.
ಬೀಟ್ರೂಟ್: ಬೀಟ್ರೂಟ್ನಲ್ಲಿ ಸಾಕಷ್ಟು ಪ್ರಮಾಣದ ನೈಟ್ರೇಟ್ಸ್ ಇದೆ. ಇದು ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಆಗಿ ಪರಿವರ್ತನೆಯಾಗುತ್ತದೆ. ಈ ನೈಟ್ರಿಕ್ ಆಕ್ಸೈಡ್ ರಕ್ತನಾಳಗಳನ್ನು ವಿಶ್ರಾಂತಿಗೊಳಿಸುವ ಮತ್ತು ಹಿಗ್ಗಿಸಲು ಸಹಾಯ ಮಾಡುತ್ತದೆ. ಇದರಿಂದ ರಕ್ತಪರಿಚಲನೆ ಸರಾಗವಾಗುತ್ತದೆ.
ಹಸಿರು ಎಲೆಗಳು: ಪಾಲಕ್ ಮತ್ತು ಎಲೆಕೋಸು ಶ್ರೇಷ್ಠವಾದ ನೈಟ್ರೇಟ್ಸ್ ಮೂಲವನ್ನು ಹೊಂದಿವೆ. ಇದು ರಕ್ತನಾಳಗಳನ್ನು ಹಿಗ್ಗಿಸುತ್ತದೆ. ಇದರಿಂದ ರಕ್ತದ ಪರಿಚಲನೆ ಸುಗಮವಾಗಿ, ಹೃದಯದ ಆರೋಗ್ಯ ಸುಧಾರಣೆ ಆಗುತ್ತದೆ.
ಬೆಳ್ಳುಳ್ಳಿ: ಬೆಳ್ಳುಳ್ಳಿಯಲ್ಲಿ ಸಲ್ಫರ್ ಸಂಯುಕ್ತಗಳು ಹೇರಳವಾಗಿವೆ. ಇದು ಕೂಡ ರಕ್ತನಾಳಗಳ ವಿಸ್ತರಣೆಯನ್ನು ಉತ್ತೇಜಿಸುತ್ತದೆ ಮತ್ತು ರಕ್ತದ ಹರಿವನ್ನು ಹೆಚ್ಚಿಸುತ್ತದೆ.
ಈರುಳ್ಳಿ: ಈರುಳ್ಳಿಯಲ್ಲಿ ಫ್ಲೇವನಾಯ್ಡ್ ಆ್ಯಂಟಿ ಆಕ್ಸಿಡೆಂಟ್ಸ್ ಹೇರಳವಾಗಿದೆ. ಇದು ಹೃದಯದ ಅಪಧಮನಿಗಳು ಮತ್ತು ರಕ್ತನಾಳಗಳನ್ನು ಹಿಗ್ಗಿಸಲು ಸಹಾಯ ಮಾಡುವ ಮೂಲಕ ಹೃದಯದ ಆರೋಗ್ಯ ಮತ್ತು ಪರಿಚಲನೆಗೆ ಪ್ರಯೋಜನ ನೀಡುತ್ತದೆ. (ಏಜೆನ್ಸೀಸ್)