

| ಮಂಜುನಾಥ ತಿಮ್ಮಯ್ಯ ಮೈಸೂರು
ವಿಧಾನಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ರಂಗೇರಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್-ಬಿಜೆಪಿ ಮೈತ್ರಿಕೂಟದ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.ಪಕ್ಷೇತರ ಅಥವಾ ಯಾವುದೇ ರಾಜಕೀಯ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ 24 ವರ್ಷಗಳಿಂದ ಗೆಲುವನ್ನೇ ಕಂಡಿರುವ ಮರಿತಿಬ್ಬೇಗೌಡರಿಗೆ ಈ ಸಲ ಮೈತ್ರಿಕೂಟದ ಅಭ್ಯರ್ಥಿ ಕೆ.ವಿವೇಕಾನಂದ ಸವಾಲೊಡ್ಡಿದ್ದಾರೆ.
ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್, ಮಾಜಿ ಎಂಎಲ್ಸಿ ಕೆ.ಸಿ. ಪುಟ್ಟಸಿದ್ದಶೆಟ್ಟಿ ಸೇರಿ 11 ಅಭ್ಯರ್ಥಿಗಳು ಅಖಾಡ ದಲ್ಲಿದ್ದರೂ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮಾತ್ರ ಕಾದಾಟ ನಿಶ್ಚಿತ. ನಾಲ್ಕು ಬಾರಿ ಗೆದ್ದು, 5ನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿರುವ ಮರಿತಿಬ್ಬೇಗೌಡರ ಓಟಕ್ಕೆ ಈ ಸಲ ತಡೆಯೊಡ್ಡಲು ಜೆಡಿಎಸ್ ಅಭ್ಯರ್ಥಿ ಕೆ.ವಿವೇಕಾನಂದ ಅವರೊಂದಿಗೆ ದಳ, ಕೇಸರಿ ಪಡೆ ಬೆವರು ಸುರಿಸುತ್ತಿದೆ.
ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆ ವ್ಯಾಪ್ತಿಯ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ. ಇನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪಕ್ಷ ಗೆಲುವಿಗಾಗಿ ಪಣ ತೊಟ್ಟಿದ್ದಾರೆ.
ಕ್ಷೇತ್ರ ವ್ಯಾಪ್ತಿ: ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ
5ನೇ ಸಲ ಮರಿತಿಬ್ಬೇಗೌಡ ಸ್ಪರ್ಧೆ: ಪಕ್ಷಕ್ಕಿಂತ ವ್ಯಕ್ತಿಗೆ ಮಣೆ ಹಾಕಿದ ಕ್ಷೇತ್ರ ಇದು. ಇದರ ಫಲವಾಗಿ ಸತತ 24 ವರ್ಷಗಳಿಂದಲೂ ಮರಿತಿಬ್ಬೇಗೌಡ ಪಾರುಪತ್ಯ ಮೆರೆಯಲು ಸಾಧ್ಯವಾಗಿದೆ. ಕ್ಷೇತ್ರದ ಶಿಕ್ಷಕರ ನಾಡಿಮಿಡಿತ ಅರಿತಿರುವ ಅವರು ಜಯ ದಾಖಲಿಸುವಲ್ಲಿ ಯಶಸ್ವಿಯಾಗುತ್ತಾ ಬಂದಿದ್ದಾರೆ. ಒಕ್ಕಲಿಗ ಸಮಾಜದ ಮರಿತಿಬ್ಬೇಗೌಡ, ಮೊದಲ ಬಾರಿ ಕಾಂಗ್ರೆಸ್ನಿಂದ (2000), ಒಮ್ಮೆ ಪಕ್ಷೇತರರಾಗಿ (2006) ಹಾಗೂ 2 ಬಾರಿ (2012 ಹಾಗೂ 2018) ಜೆಡಿಎಸ್ನಿಂದ ಆಯ್ಕೆಯಾಗಿದ್ದರು. ಜೆಡಿಎಸ್ನೊಂದಿಗೆ ಮುನಿಸಿಕೊಂಡು ಅಂತರ ಕಾಯ್ದುಕೊಂಡಿದ್ದ ಮರಿತಿಬ್ಬೇಗೌಡ, 2022ರಲ್ಲಿ ಪರಿಷತ್ ಪದವೀಧರರ ಕ್ಷೇತ್ರ, 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಬೆಂಬಲ ನೀಡಿದ್ದರು. ಮಾರ್ಚ್ 21ರಂದು ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಅಧಿಕೃತವಾಗಿ ಕಾಂಗ್ರೆಸ್ ಸೇರಿದರು. ಮೊದಲಿಗೆ ಆಯ್ಕೆಯಾಗಿದ್ದ ಪಕ್ಷದಿಂದಲೇ 5ನೇ ಸಲಕ್ಕೆ ಕಣಕ್ಕಿಳಿದಿದ್ದಾರೆ.
ಕೈಗೆ ತೀವ್ರ ಪೈಪೋಟಿ: 2018ರ ಚುನಾವಣೆಯಲ್ಲಿ ಪರಿಷತ್ ಉಪಸಭಾಪತಿಯೂ ಆಗಿದ್ದ ಮರಿತಿಬ್ಬೇಗೌಡರನ್ನು ಸೋಲಿಸಲು ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಎಂ.ಲಕ್ಷ್ಮಣ್ ಹಾಗೂ ಬಿಜೆಪಿಯ ಬಿ.ನಿರಂಜನಮೂರ್ತಿ ವಿವಿಧ ರಣತಂತ್ರ ರೂಪಿಸಿದ್ದರೂ ಫಲ ಕೊಟ್ಟಿರಲಿಲ್ಲ. ಆದರೆ, ಈ ಸಲ ಜೆಡಿಎಸ್-ಬಿಜೆಪಿ ದೋಸ್ತಿಯಿಂದಾಗಿ ಇವರಿಗೆ ತೀವ್ರ ಪೈಪೋಟಿ ಎದುರಾಗಿದೆ.
ಜೆಡಿಎಸ್ಗೆ ಒಳೇಟಿನ ಆತಂಕ: ಜೆಡಿಎಸ್ ಅಭ್ಯರ್ಥಿ ಕೆ.ವಿವೇಕಾನಂದ ಅವರಿಗೆ ಇದು ಮೊದಲ ಚುನಾವಣೆ. ಮತದಾರರಿಗೂ ಹೊಸಮುಖ. ಎಸ್ಎಸ್ಎಲ್ಸಿವರೆಗೆ ಓದಿರುವ ಅವರು ರಿಯಲ್ ಎಸ್ಟೇಟ್ ಉದ್ಯಮಿ. ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರನ್ನು ಹಿಂದಿಕ್ಕಿ ಟಿಕೆಟ್ ಪಡೆದುಕೊಂಡಿದ್ದಾರೆ. ಇದರಿಂದ ಅಸಮಾಧಾನಗೊಂಡಿದ್ದ ಶ್ರೀಕಂಠೇಗೌಡ ಪಕ್ಷೇತರವಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದರು. ಆದರೆ, ಬೆಂಬಲಿಗರ ಸಭೆಯಲ್ಲಿ ಸಿನಿಮೀಯ ರೀತಿಯಲ್ಲಿ ಕೈಗೆ ಗಾಯ ಮಾಡಿಕೊಂಡು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲೂ ಸಾಧ್ಯವಾಗದೆ ಹಿಂದೆ ಸರಿದರು. ಇದು ಪರೋಕ್ಷವಾಗಿ ಜೆಡಿಎಸ್ ಅಭ್ಯರ್ಥಿಗೆ ಅನುಕೂಲವಾದರೂ ಒಳೇಟಿನ ಆತಂಕವೂ ಇದೆ. ಕೆಟಿಎಸ್ ಇದೀಗ ಮೆತ್ತಗಾಗಿದ್ದಾರೆ. ಅವರ ಬೆಂಬಗಲಿಗರು ಮಾತ್ರ ಇನ್ನೂ ಕುದಿಯು ತ್ತಿದ್ದಾರೆ. ಇದು ಜೆಡಿಎಸ್ಗೆ ಮಗ್ಗಲುಮುಳ್ಳೇ ಸರಿ.
ಹರಿಯಲಿದೆ ಹಣದ ಹೊಳೆ: ತೀವ್ರ ಪೈಪೋಟಿ ಕಾರಣಕ್ಕೆ ಅಂತಿಮ ದಿನಗಳಲ್ಲಿ ಹಣದ ಹೊಳೆ ಹರಿಯುವ ಸಾಧ್ಯತೆ ಇದೆ. ಕುರುಡು ಕಾಂಚಾಣದ ನರ್ತನಕ್ಕೆ ಲೆಕ್ಕಾಚಾರವೆಲ್ಲ ಉಲ್ಟಾಪಲ್ಟಾ ಆಗಲೂಬಹುದು. ಹೀಗಾಗಿ, ಜೂನ್ 3ರಂದು ನಡೆಯುವ ಈ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ಈ ಸಲವೂ ಮರಿತಿಬ್ಬೇಗೌಡರ ಅಶ್ವಮೇಧ ಯಾತ್ರೆ ಮುಂದುವರಿಯಲಿದೆಯೇ? ಅಥವಾ ಮೈತ್ರಿಕೂಟ ಇದಕ್ಕೆ ತಡೆಯೊಡ್ಡಲಿದೆಯೇ ಎಂಬ ಪ್ರಶ್ನೆಗೆ ಜೂನ್ 6ರಂದು ಉತ್ತರ ಸಿಗಲಿದೆ.
ದೋಸ್ತಿಗಳಲ್ಲಿ ಗಲಿಬಿಲಿ: ಮೈತ್ರಿಕೂಟದಲ್ಲಿ ಟಿಕೆಟ್ ಹಂಚಿಕೆ ಗಲಿಬಿಲಿ ಸೃಷ್ಟಿಸಿತು. ಡಾ.ಇ.ಸಿ. ನಿಂಗರಾಜ್ಗೌಡ ಅವರಿಗೆ ಬಿಜೆಪಿ ಮೊದಲು ಟಿಕೆಟ್ ಘೊಷಿಸಿತ್ತು. ಆದರೆ, ಕಳೆದ ಬಾರಿ ಜಯ ಗಳಿಸಿದ್ದ ಈ ಕ್ಷೇತ್ರವನ್ನು ಬಿಟ್ಟುಕೊಡಲು ಜೆಡಿಎಸ್ ಹಿಂದೇಟು ಹಾಕಿತು. ಇದಕ್ಕೆ ಮಣಿದ ಬಿಜೆಪಿ ಕ್ಷೇತ್ರವನ್ನು ಬಿಟ್ಟುಕೊಟ್ಟಿತು. ಆದಾಗ್ಯೂ, ನಿಂಗರಾಜ್ಗೌಡ ಬಿ-ಫಾಮ್ರ್ ಇಲ್ಲದೆಯೇ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ, ಅವರನ್ನು ಪಕ್ಷೇತರ ಅಭ್ಯರ್ಥಿ ಎಂದು ಪರಿಗಣಿಸಲಾಗಿತ್ತು. ನಾಮಪತ್ರವನ್ನು ವಾಪಸ್ ಪಡೆಯುವಂತೆ ಬಿಜೆಪಿ ವರಿಷ್ಠರು ಸೂಚಿಸಿದ್ದರು. ಇದಕ್ಕೆ ಮಣಿದ ಅವರು ನಾಮಪತ್ರ ವಾಪಸ್ ಪಡೆದುಕೊಂಡಿದ್ದಾರೆ. ಇದು ಮೈತ್ರಿ ಅಭ್ಯರ್ಥಿಯಾಗಿರುವ ಜೆಡಿಎಸ್ಗೆ ಎದುರಾಗಿದ್ದ ಅಡ್ಡಿ ನಿವಾರಣೆಯಾಗಿದೆ. ಆದರೆ, ಮತದಾರರಲ್ಲಿ ಗೊಂದಲ ಮೂಡಿಸಿತು. ಜತೆಗೆ, ಸಂಸದ ಪ್ರಜ್ವಲ್ ರೇವಣ್ಣ ಪೆನ್ಡ್ರೖೆವ್ ಪ್ರಕರಣ ದಳಕ್ಕೆ ತೀವ್ರ ಇರಿಸುಮುರಿಸು ತಂದಿದೆ. ಇದನ್ನು ಮತದಾರರಾದ ಶಿಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬ ಆತಂಕವೂ ಅದಕ್ಕಿದೆ.