

ಬೆಂಗಳೂರು: ರಾಜ್ಯ ಸರ್ಕಾರ ರಾಜಕೀಯ ದ್ವೇಷದೊಂದಿಗೆ ಆಡಳಿತ ನಡೆಸುತ್ತಿದೆ. ಭಯದ ವಾತಾವರಣ ಮೂಡಿಸಲು ಕಾನೂನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ, ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಆರೋಪಿಸಿದರು.
ಬಂಧನದಲ್ಲಿರುವ ಕೋಲಾರ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಮತ್ತಿತರ ರೈತರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಸೋಮವಾರ ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಕೋಲಾರದಲ್ಲಿ ರೈತರು ಪ್ರತಿಭಟಿಸಿದ್ದರು.
ಮರುದಿನವೇ 30 ವರ್ಷಗಳಿಂದ ಕೃಷಿ ಮಾಡುತ್ತಿರುವ ಜಮೀನು ಅರಣ್ಯ ಇಲಾಖೆಯದು ಎಂದು ಹೇಳಿ, ಶ್ರೀನಿವಾಸಪುರ ತಾಲೂಕಿನ ನಾರಮಾಕನಹಳ್ಳಿ ರೈತರ ಮೇಲೆ ಅಧಿಕಾರಿಗಳು ದೌರ್ಜನ್ಯ ಮಾಡಿದ್ದಾರೆ ಎಂದು ಈರಣ್ಣ ಕಡಾಡಿ ಆಕ್ರೋಶ ವ್ಯಕ್ತಪಡಿಸಿದರು.
ಅಂದಾಜು 3,850 ಎಕರೆಯಲ್ಲಿ ಬೆಳೆದಿದ್ದ ಹೂಕೋಸು, ಮೆಣಸು, ಕ್ಯಾರೆಟ್, ಹತ್ತಾರು ವರ್ಷದಿಂದ ಬೆಳೆದಿದ್ದ ಮಾವಿನ ತೋಟ ನಾಶ ಮಾಡಿದ್ದಲ್ಲದೆ, 150 ಜನರ ವಿರುದ್ಧ ಮೂರು ಎ್ಐಆರ್‌ಗಳನ್ನು ದಾಖಲಿಸಿ, 15 ಜನರನ್ನು ಬಂಧಿಸಿ ಅಗ್ರಹಾರ ಜೈಲಿನಲ್ಲಿಟ್ಟಿದ್ದಾರೆ ಎಂದು ದೂರಿದರು.
ದಶಕಗಳಿಂದ ಸಾಗುವಳಿ ಮಾಡುತ್ತಿರುವ ಜಮೀನು ಅರಣ್ಯ ಇಲಾಖೆಗೆ ಸೇರಿದ್ದರೆ ಬೇಲಿ ಹಾಕಿ ರಕ್ಷಿಸುವ ಬದಲು ಐದಾರು ಕೋಟಿ ರೂ. ಬೆಲೆಬಾಳುವ ತರಕಾರಿ ಹಾಳು ಮಾಡಿದ್ದಾರೆ. ಗಂಡ ಹಾಗೂ ಮನೆಯ ಪುರುಷರ ಬಂಧನದಿಂದ ನೊಂದ ಅನೇಕ ಮಹಿಳೆಯರು ಆತ್ಮಹತ್ಯೆಗೆ ಪ್ರಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಸಂಸದರಿಗೆ ಮನವಿ ಸಲ್ಲಿಸಲು ಹೋಗಿದ್ದ ಶಿಕ್ಷಕನ ಬಂಧನ, ಒಬ್ಬ ಅಂಗವಿಕಲನ ಮೇಲೆ ದಬ್ಬಾಳಿ ನಡೆಸಿದ್ದು, ಇದೊಂದು ಪೂರ್ವನಿಯೋಜಿತ ಹಲ್ಲೆಯಾಗಿದೆ. ಜವಾಬ್ದಾರಿಯುತ ಸಚಿವರು ತಕ್ಷಣ ಶ್ರೀನಿವಾಸಪುರ ತಾಲೂಕಿನ ಹಳ್ಳಿಗೆ ಭೇಟಿ ನೀಡಿ ವಸ್ತುಸ್ಥಿತಿ ಅರಿತು, ಕ್ರಮಕೈಗೊಳ್ಳಬೇಕು.
ಗ್ರಾಮದಲ್ಲಿ ಸೃಷ್ಟಿಯಾಗಿರುವ ಭಯದ ವಾತಾವರಣ ನಿವಾರಿಸಿ, ಸುಳ್ಳು ಮೊಕದ್ದಮೆಗಳನ್ನು ವಾಪಸ್ ಪಡೆಯಬೇಕು. ರಾಜಕೀಯ ದ್ವೇಷ ಮುಂದುವರಿದರೆ ಶ್ರೀನಿವಾಸಪುರ ಚಲೋ ಚಳವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದುಎಂದು ಈರಣ್ಣ ಕಡಾಡಿ ಎಚ್ಚರಿಸಿದರು.