

ಬೆಂಗಳೂರು: ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯ ಪರಿಷ್ಕೃತ ಪಠ್ಯಕ್ಕೆ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೆಲವೊಂದು ಮಾರ್ಪಾಡು ಮಾಡಲು ಸರ್ಕಾರ ಮುಂದಾಗಿದೆ. ಪರಿಷ್ಕೃತ ಪಠ್ಯದಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಲು ತಿದ್ದೋಲೆ ಆದೇಶ ಹೊರಡಿಸಿದೆ. ಪ್ರಮುಖವಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ಶಿಲ್ಪಿ ಎಂಬ ಪದ ಕೈಬಿಟ್ಟಿದ್ದು, ಕುವೆಂಪು, ಬಸವಣ್ಣ ನವರ ವಿಚಾರಗಳಲ್ಲಿ ಆಗಿರುವ ತಪ್ಪುಗಳು, ಮಠ-ಮಾನ್ಯಗಳ ವಿಚಾರಗಳನ್ನು ಸರಿಪಡಿಸಲಾಗುತ್ತದೆ. ಮತ್ತೊಮ್ಮೆ ಪರಿಷ್ಕರಣೆಗೆ ಒಳಪಡಿಸುವ ವಿಚಾರಗಳ ಪುಸ್ತಕವನ್ನು ಬುಕ್ಲೆಟ್ ಮಾದರಿಯಲ್ಲಿ ಮುದ್ರಿಸಿ ಎಲ್ಲ ಶಾಲೆಗಳಿಗೂ ವಿತರಣೆ ಮಾಡುವಂತೆ ಪ್ರಾಥಮಿಕ ಶಿಕ್ಷಣ ಇಲಾಖೆ ಆದೇಶಿಸಿದೆ.
ಚಕ್ರತೀರ್ಥ ಸಮಿತಿ 1 ರಿಂದ 10ನೇ ತರಗತಿ ಭಾಷಾ ವಿಷಯಗಳು, ಪರಿಸರ ಅಧ್ಯಯನ ಮತ್ತು 6ರಿಂದ 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಗಳನ್ನು ಪರಿಷ್ಕರಿಸಿತ್ತು. ಇದರಲ್ಲಿ 6ರಿಂದ 8ನೇ ತರಗತಿಯ ಸಮಾಜ ವಿಜ್ಞಾನದಲ್ಲಿನ 68 ಹಾಗೂ 1ರಿಂದ 10ನೇ ತರಗತಿಯ ಕನ್ನಡ ಭಾಷಾ ವಿಷಯದ 15 ಪರಿಷ್ಕೃತ ಪಠ್ಯ ಸೇರಿ ಒಟ್ಟಾರೆ 83 ವಿಚಾರಗಳನ್ನು ಪರಿಷ್ಕರಿಸಿ ಮುದ್ರಿಸಿ ವಿತರಿಸಲು ಸೂಚಿಸಿದೆ.
ಪ್ರಸ್ತುತ ತಿದ್ದೋಲೆ ಪ್ರತಿಗಳನ್ನು ಮುದ್ರಿಸಲು ಕರ್ನಾಟಕ ಪಠ್ಯಪುಸ್ತಕ ಸಂಘಕ್ಕೆ ಸೂಚಿಸಲಾಗಿದೆ. ಈ ಪ್ರತಿಯನ್ನು ಎಲ್ಲ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೆ ಉಚಿತವಾಗಿ ತಲಾ ಒಂದು ಪ್ರತಿಯಂತೆ ವಿತರಿಸಬೇಕು. ತಿದ್ದೋಲೆಯ ವಿಷಯಾಂಶಗಳನ್ನು ಪಠ್ಯಪುಸ್ತಕ ಸಂಘದ ಜಾಲತಾಣದಲ್ಲಿ ಸಾಫ್ಟ್ ಪ್ರತಿ ಅಪ್ಲೋಡ್ ಮಾಡುವಂತೆ ಇಲಾಖೆ ತಿಳಿಸಿದೆ.
ಪರಿಷ್ಕೃತ ಪಠ್ಯದ ಪುಟ-ಪುಟಗಳಲ್ಲಿಯೂ ತಪ್ಪುಗಳಿರು ವುದನ್ನು ನಾಡಿನ ಅನೇಕ ಶಿಕ್ಷಣ ತಜ್ಞರು ವಿವರವಾಗಿ ಪಟ್ಟಿಮಾಡಿ ಸರ್ಕಾರದ ಗಮನಕ್ಕೆ ತಂದಿದ್ದಾರೆ. ಹೀಗಿದ್ದರೂ ದೋಷಪೂರ್ಣ ಪಠ್ಯವನ್ನು ಸಮರ್ಥಿಸಲು ಹೊರಟಿರುವುದು ಸರ್ಕಾರದ ಉದ್ದಟತನವನ್ನಷ್ಟೇ ತೋರಿಸುತ್ತದೆ. |ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ
ಪಠ್ಯದಲ್ಲಿ ಕನಕದಾಸರ ಹಿಂದಿನ ಪಾಠವನ್ನೇ ಯಥಾವತ್ ಆಗಿ ಮುಂದುವರಿ ಸುವಂತೆ ಸಿಎಂ ಬಸವರಾಜ ಬೊಮ್ಮಾಯಿ ಆದೇಶ ಮಾಡಿದ್ದಾರೆ. ಕನಕದಾಸರ ಪಠ್ಯಕ್ಕೆ ಕತ್ತರಿ ಹಾಕಿರುವ ಬಗ್ಗೆ ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದ ಪುರಿ ಸ್ವಾಮಿಜಿ 2 ದಿನಗಳ ಹಿಂದೆ, ಹಳೆಯ ಪಠ್ಯ ಮುಂದುವರಿಸಿ ಇಲ್ಲದಿದ್ದರೆ ಪರಿಣಾಮ ಎದುರಿಸಲು ಸಿದ್ಧರಾಗುವಂತೆ ಸಿಎಂಗೆ ನೇರ ವಾಗಿಯೇ ಎಚ್ಚರಿಕೆ ನೀಡಿದ್ದರು. ಸೋಮವಾರ ಬೆಂಗಳೂರಿನಲ್ಲಿ ಬೊಮ್ಮಾಯಿ ಭೇಟಿ ಮಾಡಿದ ಸ್ವಾಮೀಜಿ, ಪತ್ರ ನೀಡಿದರು. ತಕ್ಷಣವೇ ಸಿಎಂ ಈ ಆದೇಶ ಮಾಡಿದ್ದಾರೆ. ಬೊಮ್ಮಾಯಿ ಪ್ರತಿನಿಧಿಸುವ ಶಿಗ್ಗಾವಿ ಕ್ಷೇತ್ರದಲ್ಲಿ ಕಾಗಿನೆಲೆ ಸ್ವಾಮೀಜಿ ಪ್ರಭಾವ ಹೆಚ್ಚಿರುವುದರಿಂದಲೇ ತಕ್ಷಣ ಸ್ಪಂದಿಸಿದರೆಂದು ಹೇಳಲಾಗಿದೆ.