

ಬೆಂಗಳೂರು: ರಾಜ್ಯಾದ್ಯಂತ ಸುದ್ದಿಯಾಗಿದ್ದ ಬಂಟ್ವಾಳದ ಫರಂಗಿಪೇಟೆಯ ವಿದ್ಯಾರ್ಥಿ ದಿಗಂತ್ ನಾಪತ್ತೆ ವಿಚಾರವಾಗಿ ವಿದ್ಯಾರ್ಥಿ ದಿಗಂತ್ ಅನ್ನು ಪತ್ತೆ ಮಾಡಿ ಮಕ್ಕಳ ಕಲ್ಯಾಣ ಸಮಿತಿಯ ಸುಪರ್ದಿಗೆ ನೀಡಲಾಗಿದ್ದು, ಗುರುವಾರ ಪಾಲಕರ ಜತೆಗೆ ಸಮಾಲೋಚನೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಹೈಕೋರ್ಟ್‌ಗೆ ಸರ್ಕಾರ ಮಾಹಿತಿ ನೀಡಿದೆ.
ನಾಪತ್ತೆಯಾಗಿರುವ ಪುತ್ರ ದಿಗಂತ್‌ನನ್ನು ಪತ್ತೆ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸರ್ಕಾರ ಮತ್ತು ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ತಂದೆ ಪದ್ಮನಾಭ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಬುಧವಾರ ನ್ಯಾಯಮೂರ್ತಿ ವಿ.ಕಾಮೇಶ್ವರ್ ರಾವ್ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಈ ವೇಳೆ ಸರ್ಕಾರದ ಪರ ರಾಜ್ಯ ಸರ್ಕಾರಿ ಅಭಿಯೋಜಕ ಬಿ.ಎ. ಬೆಳ್ಳಿಯಪ್ಪ ಹಾಜರಾಗಿ, ನಾಪತ್ತೆಯಾಗಿದ್ದ ಅರ್ಜಿದಾರರ ಪುತ್ರ ದಿಂಗತ್‌ನನ್ನು ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ತಾನು ಪಾಲಕರ ಬಳಿಗೆ ಹೋಗುವುದಿಲ್ಲ ಎಂದು ದಿಗಂತ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದ. ಇದರಿಂದ ಆತನನ್ನು ಮಕ್ಕಳ ಕಲ್ಯಾಣ ಸಮಿತಿಯ (ಸಿಡಬ್ಲ್ಯೂಸಿ) ಸುಪರ್ದಿಗೆ ಹಸ್ತಾಂತರಿಸಲಾಗಿದೆ.
ಪ್ರಕರಣವು ಸಿಡಬ್ಲ್ಯೂಸಿ ಮುಂದೆ ಬಾಕಿಯಿದೆ. ದಿಗಂತ್ ಯಾರ ಅಕ್ರಮ ಬಂಧನದಲ್ಲೂ ಇರಲಿಲ್ಲ. ಸದ್ಯ ದಿಗಂತ್ ಪತ್ತೆಯಾಗಿರುವ ಕಾರಣ ಅರ್ಜಿ ವಿಚಾರಣೆ ಮಾನ್ಯತೆ ಕಳೆದುಕೊಂಡಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಅರ್ಜಿದಾರರ ಪರ ವಕೀಲರು, ದಿಗಂತ್ ಮನೆಗೆ ಹೋಗುವುದಿಲ್ಲ ಎಂದು ಸರ್ಕಾರ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ. ಇದನ್ನು ನಂಬಲಾಗದು ಪುತ್ರನೊಂದಿಗೆ ಸಮಾಲೋಚಿಸಲು ಅರ್ಜಿದಾರರಿಗೆ ಸೂಕ್ತ ಸಮಯಾವಕಾಶ ಕಲ್ಪಿಸಿಲ್ಲ. ಮಗನನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಲು ಅನುಮತಿಸಬೇಕು ಎಂದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ದಿಗಂತ್‌ನನ್ನು ಸುಪರ್ದಿಯಲ್ಲಿ ಇರಿಸಿಕೊಳ್ಳುವ ಅಗತ್ಯ ಸರ್ಕಾರಕ್ಕೆ ಇಲ್ಲ. ಸದ್ಯ ವಿದ್ಯಾರ್ಥಿ ಸಿಡಬ್ಲ್ಯೂಸಿ ಸುಪರ್ದಿಯಲ್ಲಿದ್ದು, ಅದರ ಮುಂದಿನ ಪ್ರಕ್ರಿಯೆ ನಡೆಯಲಿದೆ. ಪ್ರಕರಣವನ್ನು ಮುಂದಿನ ವಾರಕ್ಕೆ ಮುಂದೂಡಲಾಗುವುದು. ಅಂದು ಸಿಡಬ್ಲ್ಯೂಸಿ ವಿಚಾರಣಾ ವರದಿಯನ್ನು ನ್ಯಾಯಾಲಯಕ್ಕೆ ಸರ್ಕಾರ ಸಲ್ಲಿಸಲಿ ಎಂದು ತಿಳಿಸಿದರು.
ಆಗ ಅರ್ಜಿದಾರರ ಪರ ವಕೀಲರು, ಸದ್ಯ ದ್ವಿತೀಯ ಪಿಯು ಪರೀಕ್ಷೆ ನಡೆಯುತ್ತಿದೆ. ಕೆಲವೊಂದು ವಿಷಯಗಳ ಪರೀಕ್ಷೆ ಬಾಕಿಯಿದ್ದು, ಪರೀಕ್ಷೆ ಬರೆಯಲು ದಿಗಂತ್‌ಗೆ ಬಯಸಿದರೆ ಅದಕ್ಕೆ ಅವಕಾಶ ಕಲ್ಪಿಸಬೇಕು. ಆ ನಿಟ್ಟಿನಲ್ಲಿ ಪಾಲಕರು ಪ್ರಯತ್ನ ನಡೆಸುತ್ತಾರೆ ಎಂದರು.
ಅದಕ್ಕೆ ಸರ್ಕಾರಿ ಅಭಿಯೋಜಕ ಬೆಳ್ಳಿಯಪ್, ಪೋಷಕರು ಪರೀಕ್ಷೆ ವಿಚಾರದಲ್ಲಿ ಒತ್ತಡ ಹೇರುತ್ತಿದ್ದ ಕಾರಣದಿಂದಲೇ ದಿಗಂತ್ ಮನೆಬಿಟ್ಟು ಹೋಗಿದ್ದಾನೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಈ ವೇಳೆ ನ್ಯಾಯಮೂರ್ತಿ ಕಾಮೇಶ್ವರ್ ರಾವ್ ಅವರು, ಹೀಗೇಕೆ ಮಾಡುತ್ತೀರಿ? ಆ ರೀತಿ ಮಕ್ಕಳ ಮೇಲೆ ಹೀಗೆ ಒತ್ತಡ ಹೇರುವುದು ಸಲ್ಲ. ಪರೀಕ್ಷೆ ವಿಷಯ ಇರಲಿ. ಮೊದಲು ಸಿಡಬ್ಲ್ಯೂಸಿ ಮುಂದಿನ ಪ್ರಕ್ರಿಯೆ ನಡೆಯಲಿ ಎಂದು ಅರ್ಜಿದಾರರಿಗೆ ಸೂಚಿಸಿದರು. ಅರ್ಜಿ ವಿಚಾರಣೆಯನ್ನು ಮಾ.19ಕ್ಕೆ ಮುಂದೂಡಿತು.